ADVERTISEMENT

‘ಸಣ್ಣ ಮಾಲ್‌’ಗಳಾಗಿ ಅಂಚೆ ಕಚೇರಿ: ಕೇಂದ್ರ ಸಚಿವ ಸಿಂದಿಯಾ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 19:18 IST
Last Updated 10 ಜುಲೈ 2025, 19:18 IST
<div class="paragraphs"><p>ಗ್ರಾಮೀಣ ಡಾಕ್ ಸೇವಕರೊಂದಿಗೆ ಜೋತಿರಾದಿತ್ಯ ಸಿಂದಿಯಾ ಸಂವಾದ ನಡೆಸಿದರು. ವಂದಿತಾ ಕೌಲ್, ಮಂಜು ಕುಮಾರ್ ಉಪಸ್ಥಿತರಿದ್ದರು </p></div>

ಗ್ರಾಮೀಣ ಡಾಕ್ ಸೇವಕರೊಂದಿಗೆ ಜೋತಿರಾದಿತ್ಯ ಸಿಂದಿಯಾ ಸಂವಾದ ನಡೆಸಿದರು. ವಂದಿತಾ ಕೌಲ್, ಮಂಜು ಕುಮಾರ್ ಉಪಸ್ಥಿತರಿದ್ದರು

   

ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಬೆಂಗಳೂರು: ಅಂಚೆ ಕಚೇರಿಗಳ ವಿನ್ಯಾಸ ಬದಲಾಯಿಸಿ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ, ನಾಗರಿಕರ ಬೇಡಿಕೆಯನ್ನು ಪೂರೈಸುವ ‘ಸಣ್ಣ ಮಾಲ್‌’ಗಳನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಯೋಜಿಸಿದೆ.

ADVERTISEMENT

ಉಡುಪು, ಆಹಾರ, ಔಷಧ, ಎಲೆಕ್ಟ್ರಾನಿಕ್‌ ವಸ್ತುಗಳು ಮುಂತಾದ ಗ್ರಾಹಕರು ಬಯಸುವ ಉತ್ಪನ್ನಗಳನ್ನು ಒದಗಿಸುವ ನಗರಗಳಲ್ಲಿರುವ ಬೃಹತ್‌ ಮಾಲ್‌ಗಳಂತೆ ಅಂಚೆ ಕಚೇರಿಗಳನ್ನು ‘ಸಣ್ಣ ಮಾಲ್‌’ಗಳನ್ನಾಗಿ ಪರಿವರ್ತಿಸುವ ಯೋಜನೆ ಇದೆ. ಹಲವು ಹೊಸ ಯೋಜನೆಗಳೊಂದಿಗೆ ಭಾರತೀಯ ಅಂಚೆ ಇಲಾಖೆಯನ್ನು ಲಾಭದಾಯಕ ಸಂಸ್ಥೆಯನ್ನಾಗಿ ರೂಪಿಸಲಾಗುವುದು ಎಂದು ಕೇಂದ್ರದ ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಎಂ. ಸಿಂದಿಯಾ ಹೇಳಿದರು.

ಭಾರತೀಯ ಅಂಚೆ ಇಲಾಖೆ ಗುರುವಾರ ಹಮ್ಮಿಕೊಂಡಿದ್ದ ‘ಕರ್ನಾಟಕ ಅಂಚೆ ವೃತ್ತದ ಗ್ರಾಮೀಣ ಡಾಕ್‌ ಸೇವಕರೊಂದಿಗೆ ಸಂವಾದ’ದಲ್ಲಿ ಅವರು ಮಾತನಾಡಿದರು.

‘ಆಧುನಿಕ ಜಗತ್ತಿಗೆ ಅನುಸಾರವಾಗಿ ನಾವು ನಮ್ಮ ಕೆಲಸದ ಸ್ವರೂಪವನ್ನು ಬದಲಿಸಿಕೊಳ್ಳಬೇಕು. ನಮ್ಮ ಮೇಲೆ ನಾವೇ ನಿಗಾವಹಿಸಿಕೊಳ್ಳಬೇಕು. ಕಾರ್ಯಾಚರಣೆ, ಬದಲಾವಣೆ ಎಲ್ಲವೂ ಡಾಕ್‌ ಸೇವಕರಿಂದಲೇ ಆಗಬೇಕು. ವಿಶ್ವದಲ್ಲೇ ಅತಿದೊಡ್ಡ ಸಂಪರ್ಕಜಾಲವನ್ನು ಹೊಂದಿರುವ ಅಂಚೆ ಇಲಾಖೆ ಆವಿಷ್ಕಾರಯುತವಾಗಿ, ಜನರಿಗೆ ಜೀವಮಾನದುದ್ದಕ್ಕೂ ಸೇವೆ ನೀಡಬೇಕು. ಅದಕ್ಕಾಗಿ ಎಲ್ಲ ರೀತಿಯಲ್ಲೂ ಬದಲಾಗಬೇಕಿದೆ’ ಎಂದರು.

‘ಡಾಕ್ ಸೇವಕರು ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಸಲ್ಲಿಸುತ್ತಿರುವ ಪ್ರಾಮಾಣಿಕ ಸೇವೆಯಿಂದಾಗಿ ‘ಡಾಕ್ ಸೇವಾ, ಜನ ಸೇವಾ’ ಎಂಬ ನಂಬಿಕೆ ಇದೆ. ಅಂಚೆ ಸೇವಕರು ಕಾಗದಗಳನ್ನು ಮಾತ್ರ ಚೀಲದಲ್ಲಿ ಕೊಂಡೊಯ್ಯುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಭಾವನಾತ್ಮಕ ಸಂದೇಶ ಹಾಗೂ ವಿಶ್ವಾಸವನ್ನು ಕೊಂಡೊಯ್ಯುತ್ತಾರೆ. ಪರಿವರ್ತನೆಗೆ ಇಲಾಖೆಯ ಎಲ್ಲ ಸ್ತರದ ಸಿಬ್ಬಂದಿಯೂ ಸಲಹೆ ನೀಡಬಹುದು. ನಾವು ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ. ಭಾರತೀಯ ಅಂಚೆ ಇಲಾಖೆ ವಿಶ್ವದಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲಬೇಕು’ ಎಂದು ಹೇಳಿದರು.

ಕರ್ನಾಟಕದ ಅಂಚೆ ವೃತ್ತ ವಾರ್ಷಿಕವಾಗಿ ಸುಮಾರು 200 ಕೋಟಿಗೂ ಹೆಚ್ಚು ಪಾರ್ಸೆಲ್ ಹಾಗೂ ಅಂಚೆ ಸೇವೆಯನ್ನು ನೀಡಿ ದೇಶದಲ್ಲಿ ಮುಂಚೂಣಿ ಸ್ಥಾನದಲ್ಲಿದೆ ಎಂದು ಜೋತಿರಾದಿತ್ಯ ಶ್ಲಾಘಿಸಿದರು.

ಅತ್ಯುತ್ತಮ ಸೇವಾ ಪ್ರದರ್ಶನಕ್ಕಾಗಿ ಸನ್ಮಾನ ಸ್ವೀಕರಿಸಿದ ಕರ್ನಾಟಕ ಅಂಚೆ ವೃತ್ತದ 15 ಗ್ರಾಮೀಣ ಡಾಕ್ ಸೇವಕರು  

ಕರ್ನಾಟಕ ಅಂಚೆ ವೃತ್ತದ ಅತ್ಯುತ್ತಮ ಸೇವಾ ಪ್ರದರ್ಶನ ನೀಡಿರುವ 15 ಗ್ರಾಮೀಣ ಡಾಕ್ ಸೇವಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಂಚೆ ಇಲಾಖೆಯ ಕಾರ್ಯದರ್ಶಿ ವಂದಿತಾ ಕೌಲ್, ಅಂಚೆ ಸೇವೆಗಳ ಮಂಡಳಿಯ ಸದಸ್ಯೆ ಮಂಜುಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.