ADVERTISEMENT

ಕಾಂಗ್ರೆಸ್‌ನಲ್ಲಿ ಕೊಠಡಿಯಲ್ಲಿ ನಾಯಕ ಹುಟ್ಟುತ್ತಾನೆ: ಜೋಶಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 10:05 IST
Last Updated 10 ಜನವರಿ 2021, 10:05 IST
   

ಹುಬ್ಬಳ್ಳಿ: ಬೀದಿಗಳಲ್ಲಿ ಹೋರಾಟಗಳನ್ನು ಮಾಡಿದವರು ಬಿಜೆಪಿಯಲ್ಲಿ ನಾಯಕರಾದರೆ, ಕಾಂಗ್ರೆಸ್‌ನಲ್ಲಿ ಇಬ್ಬರು ಕೊಠಡಿ ಸೇರಿದರೆ ನಾಯಕ ಹುಟ್ಟುತ್ತಾನೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಲೇವಡಿ ಮಾಡಿದರು.

ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆಲುವು ಪಡೆದ ಜಿಲ್ಲೆಯ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ‘ಪ್ರಿಯಾಂಕಾ ಗಾಂಧಿಗೆ ಮಗು ಜನಿಸಿದಾಗ ಹುಬ್ಬಳ್ಳಿಯ ದುರ್ಗದ ಬೈಲ್‌ನಲ್ಲಿ ಕಾಂಗ್ರೆಸ್‌ ನಾಯಕರು ಸಿಹಿ ವಿತರಣೆ ಮಾಡುತ್ತಿದ್ದರು. ಯಾಕೆ ಸಿಹಿ ಹಂಚುತ್ತಿದ್ದೀರಿ ಎಂದು ಅವರನ್ನು ಕೇಳಿದ್ದಕ್ಕೆ; ನಮ್ಮ ನಾಯಕ ಹುಟ್ಟಿದ್ದಾನೆ ಎಂದರು. ಕುಟುಂಬ ರಾಜಕಾರಣಕ್ಕೆ ಕಾಂಗ್ರೆಸ್‌ ಪಕ್ಷ ಸೀಮಿತವಾಗಿದ್ದು, ಬಿಜೆಪಿಯಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತ ಕೂಡ ಪ್ರಧಾನಿಯಾಗಬಹುದು. ಕಾಂಗ್ರೆಸ್‌ನಲ್ಲಿ ಇದು ಸಾಧ್ಯವೇ ಇಲ್ಲ’ ಎಂದರು.

ಪಂಚಾಯ್ತಿಗಳಿಗೆ ₹45 ಲಕ್ಷ ವಿಶೇಷ ಅನುದಾನ
ಧಾರವಾಡ ಜಿಲ್ಲೆಯಲ್ಲಿ ಪಂಚಾಯ್ತಿಗಳು ಜನಪರವಾಗಿ ಕೆಲಸ ಮಾಡಲು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಅತ್ಯುತ್ತಮ ಕೆಲಸ ಮಾಡಿದ ಮೂರು ಪಂಚಾಯ್ತಿಗಳಿಗೆ ಒಟ್ಟು ₹45 ಲಕ್ಷ ಬಹುಮಾನವನ್ನು ಪ್ರತಿ ವರ್ಷ ನೀಡಲಾಗುವುದು ಎಂದು ಜೋಶಿ ತಿಳಿಸಿದರು.

ADVERTISEMENT

ಆಯಾ ವಿಧಾನಸಭಾ ಕ್ಷೇತ್ರಗಳ ಶಾಸಕರ ಮತ್ತು ವಿವಿಧ ಯೋಜನೆಗಳ ಅನುದಾನದಲ್ಲಿ ಹಣ ಹೊಂದಿಸಲಾಗುವುದು. ಇದಕ್ಕೆ ಜಿಲ್ಲೆಯ ಎಲ್ಲ ಶಾಸಕರು ಒಪ್ಪಿಕೊಂಡಿದ್ದಾರೆ. ಪ್ರಥಮ ಬಹುಮಾನ ₹25 ಲಕ್ಷ, ದ್ವಿತೀಯ ₹15 ಮತ್ತು ತೃತೀಯ ₹5 ಲಕ್ಷ ನೀಡಲಾಗುವುದು. ಇದಕ್ಕಾಗಿ ತಟಸ್ಥ ಸಮಿತಿ ರಚಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.