ADVERTISEMENT

ಮೀಸಲಾತಿ: ಬಿಜೆಪಿಯಿಂದ ಮೂಗಿಗೆ ತುಪ್ಪ ಸವರುವ ಕೆಲಸ; ಪ್ರಸನ್ನಾನಂದ ಸ್ವಾಮೀಜಿ

ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಕಿಡಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 20:30 IST
Last Updated 24 ನವೆಂಬರ್ 2021, 20:30 IST
ಪ್ರಸನ್ನಾನಂದ ಸ್ವಾಮೀಜಿ
ಪ್ರಸನ್ನಾನಂದ ಸ್ವಾಮೀಜಿ   

ಕನಕಗಿರಿ (ಕೊಪ್ಪಳ ಜಿಲ್ಲೆ):‘ಅಧಿಕಾರಕ್ಕೆ ಬಂದ 24 ಗಂಟೆ ಯೊಳಗೆ ಪರಿಶಿಷ್ಟ ಪಂಗಡಕ್ಕೆ ಶೇ 7.5ರಷ್ಟು ಮೀಸಲಾತಿ ನೀಡುವುದಾಗಿ ಹೇಳಿದ್ದ ಬಿಜೆಪಿಯವರು ಭರವಸೆ ಈಡೇರಿಸಲಿಲ್ಲ. ಮೂಗಿಗೆ |ತುಪ್ಪ ಸವರುವ ಕೆಲಸ ಮಾಡಿದರು’ ಎಂದು ಹರಿಹರದ ರಾಜನಳ್ಳಿಯ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ದೂರಿದರು.

‘ರಾಜ್ಯದಲ್ಲಿ ವಾಲ್ಮೀಕಿ ಸಮಾಜ 60 ಲಕ್ಷ ಜನಸಂಖ್ಯೆ ಹೊಂದಿದೆ. ಮೀಸಲಾತಿ ಸಿಗವವರೆಗೂ ಹೋರಾಟ ನಡೆಸಲಾಗುವುದು. ಸರ್ಕಾರ ನಿರ್ಧಾರ ಪ್ರಕಟಿಸದಿದ್ದರೆ, ಫೆಬ್ರುವರಿ 8 ಮತ್ತು 9 ರಂದು ನಡೆಯುವ ವಾಲ್ಮೀಕಿ ಜಾತ್ರೆಯಲ್ಲಿ ಕಠಿಣ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಅವರು ಬುಧವಾರ ಎಚ್ಚರಿಕೆ ನೀಡಿದರು.

‘ನಾಯಕ ಸಮಾಜದ ಬಿ. ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು ಎಂದು ಘೋಷಿಸಲಾಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಆದರೆ, 2018ರ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮುಲು ಅವರನ್ನು ಬಳಸಿಕೊಂಡರೂ ಉತ್ತಮ ಸ್ಥಾನಮಾನ ನೀಡಲಿಲ್ಲ’ಎಂದು ಪ್ರಸನ್ನಾನಂದಪುರಿ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಮೀಸಲಾತಿ ಭರವಸೆ ವರ್ಷದೊಳಗೆ ಈಡೇರಿಸಿ: ಕೂಡಲಸಂಗಮ ಶ್ರೀ

ಜಮಖಂಡಿ (ಬಾಗಲಕೋಟೆ ಜಿಲ್ಲೆ): ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಷಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಭರವಸೆಯನ್ನು ಈ ವರ್ಷದೊಳಗೆ ಈಡೇರಿಸಬೇಕು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.

ಮಾಧ್ಯಮದವರೊಂದಿಗೆ ಬುಧವಾರ ಮಾತನಾಡಿದ ಅವರು, ‘ನ. 30ರ ಒಳಗಾಗಿ ಕೂಡಲಸಂಗಮದಲ್ಲಿ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳ ನಮ್ಮ ಸಮಾಜದ ಗ್ರಾಮ ಪಂಚಾಯಿತಿ ಸದಸ್ಯರನ್ನು ಕರೆದು 2ಎ ಮೀಸಲಾತಿ ಬಗ್ಗೆ ಅರಿವು ಮೂಡಿಸಿ ಅವರೊಂದಿಗೆ ಸಂವಾದ ನಡೆಸುತ್ತೇವೆ. 2ಎ ಮೀಸಲಾತಿ ಬಗ್ಗೆ ಸರ್ಕಾರಕ್ಕೆ ಗಡುವು ನೀಡಲಾಗುತ್ತದೆ’ ಎಂದರು.

‘ ಮೀಸಲಾತಿ ನೀಡುವವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.