ಬೆಳಗಾವಿಯಲ್ಲಿ ಶುಕ್ರವಾರ ಕೆಎಲ್‌ಇ ಸಂಸ್ಥೆಯ ಡಾ.ಸಂಪತ್‌ಕುಮಾರ ಶಿವಣಗಿ ಕ್ಯಾನ್ಸರ್ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೀಪ ಬೆಳಗಿಸಿದರು. ಸತೀಶ ಜಾರಕಿಹೊಳಿ, ಪ್ರಭಾಕರ ಕೋರೆ, ಪ್ರಲ್ಹಾದ್ ಜೋಶಿ, ಡಾ.ಶರಣಪ್ರಕಾಶ ಪಾಟೀಲ, ಜಗದೀಶ ಶೆಟ್ಟರ್, ಮಹಾಂತೇಶ ಕೌಜಲಗಿ ಜತೆಯಾದರು –ಪ್ರಜಾವಾಣಿ ಚಿತ್ರ
ಬೆಳಗಾವಿ: ‘ಜಗತ್ತಿನಲ್ಲಿ ಅತಿ ಹೆಚ್ಚು ಅಕಾಲಿಕ ಸಾವುಗಳಿಗೆ ಕ್ಯಾನ್ಸರ್ ಕಾರಣ ಎಂಬುದು 2022ರಲ್ಲಿ ಗೊತ್ತಾಗಿದೆ. ಈ ಕಳವಳಕಾರಿ ಪರಿಸ್ಥಿತಿಯಿಂದ ಜಗತ್ತು ಹೊರಬರಬೇಕು. ಗುಣಮಟ್ಟದ ಚಿಕಿತ್ಸೆ ಜತೆಗೆ ಅರಿವು ಮೂಡಿಸುವ ಜವಾಬ್ದಾರಿ ಯನ್ನೂ ಹೊರಬೇಕು’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ ನೀಡಿದರು.
ನಗರದಲ್ಲಿ ಶುಕ್ರವಾರ ಕೆಎಲ್‌ಇ ಸಂಸ್ಥೆಯ ಡಾ.ಸಂಪತ್‌ಕುಮಾರ ಶಿವಣಗಿ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟಿಸಿ ಅವರು ಮಾತನಾಡಿದರು.
‘ವಿಶ್ವದ ಜನಸಂಖ್ಯೆಯಲ್ಲಿ ಪ್ರತಿವರ್ಷ 2 ಕೋಟಿ ಜನರಿಗೆ ಕ್ಯಾನ್ಸರ್ ಬಾಧಿಸುತ್ತಿದೆ. ಇದರಲ್ಲಿ 97 ಲಕ್ಷ ಜನ ಪ್ರಾಣ ಕಳೆದು ಕೊಳ್ಳುತ್ತಾರೆ. ಭಾರತದಲ್ಲಿ ಕೂಡ ಕ್ಯಾನ್ಸರ್ ವ್ಯಾಪಕವಾಗಿ ಹರಡುತ್ತಿದೆ. ಪ್ರತಿ 1 ಲಕ್ಷ ಜನರಲ್ಲಿ 100 ಮಂದಿಗೆ ಕ್ಯಾನ್ಸರ್ ಕಂಡುಬರುತ್ತಿದೆ. 2025ರಲ್ಲಿ ಈ ರೋಗ ಹರಡುವ ದರವು ಶೇ 13ರಷ್ಟು ಹೆಚ್ಚಲಿದೆಯೆಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಂಶೋಧನೆಯಿಂದ ಗೊತ್ತಾಗಿದೆ’ ಎಂದರು.
‘ಕ್ಯಾನ್ಸರ್ ಎಂದಾಗ ರೋಗಿ ಮಾತ್ರವಲ್ಲ, ಅವರ ಇಡೀ ಕುಟುಂಬ ಜರ್ಜರಿತಗೊಳ್ಳುತ್ತದೆ. ಆಗ ಅವರಿಗೆ ಆತ್ಮಸ್ಥೈರ್ಯ ತುಂಬುವುದು ಮುಖ್ಯ. ವೈದ್ಯರು ಗುಣಮಟ್ಟದ ಚಿಕಿತ್ಸೆಯ ಜತೆಗೆ ಕರುಣೆ ತೋರಿಸಬೇಕು. ನಿಮ್ಮ ಸಾಂತ್ವನವೇ ರೋಗಿ ಚೇತರಿಸಿಕೊಳ್ಳಲು ಸಹಕಾರಿ ಆಗುತ್ತದೆ. ಕುಟುಂಬವು ಮತ್ತೆ ಗುಣಮಟ್ಟದ ಜೀವನ ಸಾಗಿಸಲು ಸಾಧ್ಯ’ ಎಂದರು.
‘ಭಾರತೀಯ ಕುಟುಂಬಗಳಲ್ಲಿ ಮಹಿಳೆಯ ಆರೋಗ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈಗಲೂ ಕೆಲ ಕುಟುಂಬ ಗಳಲ್ಲಿ ಪುರುಷರಷ್ಟು ಕಾಳಜಿ ಮಹಿಳೆಯರಿಗೆ ತೋರುವುದಿಲ್ಲ. ಮುಖ್ಯವಾಗಿ, ಸಂಪ್ರದಾಯದ ಕಟ್ಟಳೆಗಳ ಕಾರಣ ಅನೇಕ ಮಹಿಳೆಯರು ಕ್ಯಾನ್ಸರ್‌ಗೆ ತುತ್ತಾಗಿದ್ದು ಕಂಡುಬರುತ್ತದೆ. ಇಂಥ ಕಡೆಗಳಲ್ಲಿ ಮಹಿಳೆ– ಪುರುಷರಿಗೆ ಸಮಾನ ಆರೋಗ್ಯ ಸೇವಾಸೌಲಭ್ಯ ಸಿಗುವಂತೆ ಮಾಡಬೇಕಿದೆ’ ಎಂದು ಮುರ್ಮು ಹೇಳಿದರು.
‘ಕೇಂದ್ರ ಸರ್ಕಾರವು ಆಯುಷ್ಮಾನ್ ಆರೋಗ್ಯ ಯೋಜನೆ ಜಾರಿಯಾದ ಬಳಿಕ ಗಮನಾರ್ಹ ಬದಲಾವಣೆ ಕಾಣಿಸುತ್ತಿವೆ. ಬಡವರಿಗೂ ಗುಣಮಟ್ಟದ ಜೀವನ, ಗುಣಮಟ್ಟದ ಚಿಕಿತ್ಸೆ ಒದಗಿಸುವಲ್ಲಿ ಈ ಯೋಜನೆ ಯಶಸ್ವಿ ಆಗಿದೆ’ ಎಂದು ಹೇಳಿದರು.
‘ಕೆಎಲ್‌ಇ ಸಂಸ್ಥೆಯು ಬೆಳಗಾವಿಯಲ್ಲಿ ಅತ್ಯಾಧುನಿಕ ಕ್ಯಾನ್ಸರ್ ಆಸ್ಪತ್ರೆ ತೆರೆದಿರುವುದು ಅಭಿನಂದನೀಯ. ನೂರು ವರ್ಷಗಳಿಂದಲೂ ಈ ಸಂಸ್ಥೆ ಶಿಕ್ಷಣ ಹಾಗೂ ಆರೋಗ್ಯ ಸೇವೆ ಮುಂದುವರಿಸಿಕೊಂಡು ಬಂದಿದ್ದು ನೋಡಿ ನನಗೆ ಹೆಮ್ಮೆ ಅನ್ನಿಸುತ್ತದೆ’ ಎಂದರು.
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಸ್ವಾಗತಿಸಿ, ಸನ್ಮಾನಿಸಿದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿದರು. ಸಚಿವರಾದ ಡಾ.ಶರಣ ಪ್ರಕಾಶ ಪಾಟೀಲ, ಸತೀಶ ಜಾರಕಿಹೊಳಿ, ಸಂಸದ ಜಗದೀಶ ಶೆಟ್ಟರ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ, ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.