ADVERTISEMENT

ಸಾಂಕ್ರಾಮಿಕದ ಸವಾಲಿಗೆ ಸಿದ್ಧರಾಗಬೇಕಿದೆ: ರಾಷ್ಟ್ರಪತಿ

ಆರೋಗ್ಯ ವಿವಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಘಟಿಕೋತ್ಸವ ಭಾಷಣ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 20:45 IST
Last Updated 7 ಫೆಬ್ರುವರಿ 2021, 20:45 IST
ಘಟಿಕೋತ್ಸವದಲ್ಲಿ ರಾಮನಾಥ ಕೋವಿಂದ್
ಘಟಿಕೋತ್ಸವದಲ್ಲಿ ರಾಮನಾಥ ಕೋವಿಂದ್   

ಬೆಂಗಳೂರು: 'ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕೋವಿಡ್ ದೊಡ್ಡ ತಲ್ಲಣ ವನ್ನೇ ಉಂಟುಮಾಡಿದೆ. ಇದರಿಂದ ಇಡೀ ಜಗತ್ತು ಉತ್ತಮ ಪಾಠ ಕಲಿತಿದೆ. ಭವಿಷ್ಯದಲ್ಲಿ ಎದುರಾಗಬಹುದಾದ ಇಂಥ ಸಾಂಕ್ರಾಮಿಕಗಳ ಸವಾಲು ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ’ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಭಿಪ್ರಾಯಪಟ್ಟರು.

ನಿಮ್ಹಾನ್ಸ್‌ ಸಮಾವೇಶ ಕೇಂದ್ರದಲ್ಲಿ ಭಾನುವಾರ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಎಚ್‌ಎಸ್) 23ನೇ ವಾರ್ಷಿಕ ಘಟಿಕೋತ್ಸವ
ದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ‘ಈ ಕಾರಣಕ್ಕೆ ಆರೋಗ್ಯ ಕ್ಷೇತ್ರದಲ್ಲಿ ರೋಗಗಳ ತಡೆಗಟ್ಟುವಿಕೆ, ಚಿಕಿತ್ಸೆ ಹಾಗೂ ವರ್ಗೀಕರಣ ವ್ಯವಸ್ಥೆ
ಯಲ್ಲಿ ಬದಲಾವಣೆಯ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

‘ವರ್ಗ ಮತ್ತು ಭೌಗೋಳಿಕವೆಂಬ ಭೇದ ಇಲ್ಲದೆ ಎಲ್ಲರಿಗೂ ಕೊರೊನಾ ಸಂಕಷ್ಟ ನೀಡಿದೆ. ಆ ಮೂಲಕ,
ಸಾರ್ವತ್ರಿಕವಾಗಿ ಭ್ರಾತೃತ್ವದ ಪಾಠ ಕಲಿಸಿದೆ. ಕೊರೊನೋತ್ತರ ಕಾಲಘಟ್ಟದಲ್ಲಿ ಸಾರ್ವಜನಿಕ ಆರೋಗ್ಯ ವಲಯದ ಮೇಲೆ ಹೆಚ್ಚಿನ ಗಮನ ಹರಿಸಬೇಕು. ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸೇವೆ ಸಿಗುವಂತಾಗಬೇಕು’ ಎಂದರು.

ADVERTISEMENT

‘ಆರೋಗ್ಯ ವಿಶ್ವವಿದ್ಯಾಲಯದಲ್ಲಿ ರ‍್ಯಾಂಕ್‌ ಪಡೆದವರಲ್ಲಿ ಹೆಚ್ಚಿನವರು ವಿದ್ಯಾರ್ಥಿನಿಯರು. ಭವಿಷ್ಯದಲ್ಲಿ ಹೆಣ್ಣು ಮಕ್ಕಳು ವೈದ್ಯಕೀಯ ವಲಯವೂ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿ ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದ ಅವರು, ‘ಪದವಿ ಪಡೆದ ಕೂಡಲೇ ಕಲಿಕೆ ಅಂತ್ಯವಾಗುವುದಿಲ್ಲ. ವೃತ್ತಿಯ ಆರಂಭದಿಂದ ನಿಜವಾದ ಶಿಕ್ಷಣ
ಆರಂಭವಾಗುತ್ತದೆ. ವೈದ್ಯರಾದವರ ಜ್ಞಾನ ಮತ್ತು ಕೌಶಲ ರೋಗಪೀಡಿತರಿಗೆ ನೆರವಿಗೆ ಬರಬೇಕು’ ಎಂದು ವೈದ್ಯ ವಿದ್ಯಾರ್ಥಿಗಳಿಗೆ ರಾಷ್ಟ್ರಪತಿ ಕಿವಿಮಾತು ಹೇಳಿದರು.

‘ವೈದ್ಯಕೀಯ ವಿಜ್ಞಾನ ಎಲ್ಲ ಗಡಿಗಳನ್ನು ಮೀರಿ ವೇಗವಾಗಿ ಬೆಳೆಯುತ್ತಿದೆ. ಸಂಶೋಧನೆ ಮತ್ತು ತಂತ್ರಜ್ಞಾನ ಆಧಾರಿತ ಅನ್ವೇಷಣೆ ವೇಗಗತಿಯಲ್ಲಿ ನಡೆಯುತ್ತಿದೆ. ಮಾನವನ ಆರೋಗ್ಯ ಮತ್ತು ರೋಗಕಾರಕ ವೈರಸ್‌ಗಳ ಹವ್ಯಾಸಗಳನ್ನು ಪತ್ತೆ ಹಚ್ಚುವ ಡಿ-ಕೋಡಿಂಗ್ ವ್ಯವಸ್ಥೆಯೂ ಬಂದಿದೆ’ ಎಂದರು.

‘ಆರೋಗ್ಯ ಕ್ಷೇತ್ರದ ಸಮಸ್ಯೆಗೆ ಭಾರತದಲ್ಲಿ ಕಂಡುಕೊಳ್ಳುವ ಪರಿಹಾರ ಇಡೀ ವಿಶ್ವದ ಮೇಲೆ ಪ್ರಭಾವ ಬೀರುತ್ತಿದೆ. ಆಧುನಿಕ ತಂತ್ರಜ್ಞಾನದ ನೆರವಿನಲ್ಲಿ ಜ್ಞಾನ ಮತ್ತು ಕೌಶಲವನ್ನು ಉನ್ನತೀಕರಿಸಿಕೊಳ್ಳುತ್ತಿರಬೇಕು. ಆ ಮೂಲಕ, ವೃತ್ತಿಯಲ್ಲಿ ನಾಯಕರಾಗಿ ಬೆಳೆಯಲು ಸಾಧ್ಯ’ ಎಂದೂ ಅಭಿಪ್ರಾಯ ಪಟ್ಟರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಕುಲಪತಿ ಡಾ.ಎಸ್. ಸಚ್ಚಿದಾನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.