ADVERTISEMENT

ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿಗೆ ಸಂಪುಟ ಅಸ್ತು

ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿಗೆ ಸಂಪುಟ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 16:20 IST
Last Updated 4 ಸೆಪ್ಟೆಂಬರ್ 2025, 16:20 IST
ಎಸ್.ಮಧು ಬಂಗಾರಪ್ಪ
ಎಸ್.ಮಧು ಬಂಗಾರಪ್ಪ   

ಬೆಂಗಳೂರು: ಪದವಿ, ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಪ್ರಮಾಣ ಪತ್ರ ಹೊಂದಿದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಒಂದು ಬಾರಿ ವೇತನ ಬಡ್ತಿ ಹಾಗೂ  ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿಗೆ ಅವಕಾಶ ಕಲ್ಪಿಸಲು ವೃಂದ ಮತ್ತು ನೇಮಕಾತಿ ನಿಯಮ–2017ಕ್ಕೆ ತಿದ್ದುಪಡಿ ತರಲು ಗುರುವಾರ ನಡೆದ ಸಂಪುಟ ಸಭೆ ಸಮ್ಮತಿಸಿದೆ.

ವೃಂದ ಮತ್ತು ನೇಮಕಾತಿ ನಿಯಮಕ್ಕೆ 2017ರಲ್ಲಿ ತಿದ್ದುಪಡಿ ತರುವುದಕ್ಕೆ ಮೊದಲು ಜಾರಿಯಲ್ಲಿದ್ದಂತೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 6 ಮತ್ತು 7ನೇ ತರಗತಿಯವರೆಗೂ ಬೋಧಿಸಲು ಅವಕಾಶ ಸಿಗಲಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸುಗಳಿಗೆ ಅನುಗುಣವಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯ ಪದನಾಮ ಬದಲಾಯಿಸಿ, ಹೊಸ ವೃಂದ ಮತ್ತು ನೇಮಕಾತಿ ನಿಯಮವನ್ನು ರೂಪಿಸಲಾಗಿತ್ತು. ಇದರಿಂದ 1ರಿಂದ 5ನೇ ತರಗತಿಯವರೆಗೆ ಬೋಧಿಸುವ ಶಿಕ್ಷಕರನ್ನು ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ 6 ರಿಂದ 8ನೇ ತರಗತಿ ಬೋಧಿಸುವ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪ್ರತ್ಯೇಕಗೊಳಿಸಲಾಗಿತ್ತು. ಇದರ ಪರಿಣಾಮ 2016ಕ್ಕಿಂತ ಮೊದಲು 1ರಿಂದ 7 ಹಾಗೂ 1ರಿಂದ 8ರ ವೃಂದಕ್ಕೆ ನೇಮಕವಾಗಿದ್ದ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರು 1ರಿಂದ 5ನೇ ತರಗತಿಗೆ ಸೀಮಿತಗೊಂಡಿದ್ದರು.  

ADVERTISEMENT

ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರ ಹುದ್ದೆ ಹಾಗೂ ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಗಳ ಬಡ್ತಿಯಲ್ಲೂ ಪದವೀಧರ ಶಿಕ್ಷಕರಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಹಲವಾರು ವರ್ಷಗಳಿಂದ ಕರ್ತವ್ಯ ಸಲ್ಲಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರು, ಇತ್ತೀಚಿಗೆ ಬಂದ ಪದವೀಧರ ಶಿಕ್ಷಕರ ಕೈಕೆಳಗೆ ಕೆಲಸ ಸಲ್ಲಿಸುವಂತಾಗಿತ್ತು. ಹುದ್ದೆಗಳ ಮರುವಿಂಗಡಣೆಯಲ್ಲೂ ಪದವೀಧರ ಶಿಕ್ಷಕರಿಗೆ ಆದ್ಯತೆ ನೀಡಿದ್ದರಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹುದ್ದೆಗಳ ಕೊರತೆ ಎದುರಾಗಿತ್ತು. 

ಅನ್ಯಾಯ ಖಂಡಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ 2017ರಿಂದಲೂ ಹೋರಾಟ ನಡೆಸುತ್ತಾ ಬಂದಿತ್ತು.  ಇದೇ ಸೆ. 3ರಂದು ತರಗತಿ ಬಹಿಷ್ಕರಿಸಿ, ‘ಫ್ರೀಡಂ ಪಾರ್ಕ್‌ ಚಲೋ’ ಚಳವಳಿ ಹಮ್ಮಿಕೊಂಡಿತ್ತು. ಸೆ.5ರಂದು ನಡೆಯುವ ಶಿಕ್ಷಕರ ದಿನಾಚರಣೆಯನ್ನು ಬಹಿಷ್ಕರಿಸಲು ಸಂಘ ನಿರ್ಧರಿಸಿತ್ತು. ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಂಪುಟ ಸಭೆಯ ಮುಂದೆ ಈ ಪ್ರಸ್ತಾವ ತಂದು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು.

ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರ ಸ್ವಾಗತಿಸಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿದಂತೆ ಸಂಪುಟದ ಎಲ್ಲ ಸಚಿವರು, ಅಧಿಕಾರಿಗಳಿಗೆ ಪ್ರಾಥಮಿಕ ಶಾಲೆಯ ಎಲ್ಲ ಶಿಕ್ಷಕರ ಪರವಾಗಿ ಧನ್ಯವಾದ ಸಲ್ಲಿಸಿದ್ದಾರೆ. 

ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆ ಅರ್ಥ ಮಾಡಿಕೊಂಡು ಕಾನೂನು ತೊಡಕುಗಳನ್ನು ನಿವಾರಿಸಿ ಬಹು ವರ್ಷಗಳ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿರುವೆ. 
ಮಧು ಬಂಗಾರಪ್ಪ ಶಾಲಾ ಶಿಕ್ಷಣ ಸಚಿವ
ವೃಂದ ಮತ್ತು ನೇಮಕಾತಿ ನಿಯಮದ ತಿದ್ದುಪಡಿಗೆ ಸಂಪುಟ ಸಭೆಯು ಸಮ್ಮತಿ ನೀಡಿದ್ದು ಸುಮಾರು 1.50 ಲಕ್ಷ ಶಿಕ್ಷಕರಿಗೆ ಅನುಕೂಲವಾಗಲಿದೆ. ಎಂಟು ವರ್ಷಗಳ ಹೋರಾಟ ಸಾರ್ಥಕವಾಗಿದೆ
ಚಂದ್ರಶೇಖರ ನುಗ್ಗಲಿ ಅಧ್ಯಕ್ಷ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.