ADVERTISEMENT

ಕಾಯ್ದೆ ಪುಸ್ತಕ ಮುದ್ರಣ: ದೋಷವಿದ್ದರೆ ನ್ಯಾಯಾಂಗ ನಿಂದನೆ ಮೊಕದ್ದಮೆ; ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 15:51 IST
Last Updated 6 ಏಪ್ರಿಲ್ 2024, 15:51 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ‘ಶಾಸನಗಳ ಕಂತೆಯನ್ನು ಒಳಗೊಂಡ ಕಾನೂನು ಪುಸ್ತಕಗಳನ್ನು ಮುದ್ರಿಸುವ ಪ್ರಕಾಶಕರು ಮೈಯೆಲ್ಲಾ ಕಣ್ಣಾಗಿರಬೇಕು. ಒಂದು ವೇಳೆ ಮುದ್ರಣ ದೋಷದಿಂದಾಗಿ ತಪ್ಪುಗಳು ಉಳಿದುಕೊಂಡಿದ್ದರೆ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾಗುತ್ತದೆ’ ಎಂದು ಹೈಕೋರ್ಟ್ ಆದೇಶಿಸಿದೆ.

ಸಾಗುವಳಿ ಚೀಟಿ ನೀಡಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ನಾರಾವಿಯ ಪಾದ್ರಿ ವಲೇರಿಯನ್‌ ಫರ್ನಾಂಡೀಸ್‌ (55) ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಪುರಸ್ಕರಿಸಿದೆ.

ADVERTISEMENT

ಅರ್ಜಿದಾರರ ಪರ ವಕೀಲ ಎ.ಕೇಶವ ಭಟ್ ಅವರ ವಾದವನ್ನು ಮಾನ್ಯ ಮಾಡಿರುವ ನ್ಯಾಯಪೀಠ, ‘ಯಾರೂ ಕೂಡಾ ಕಾನೂನನ್ನು ತಪ್ಪಾಗಿ ಭಾವಿಸಿ ಯಾತನೆ ಅನುಭವಿಸುವಂತೆ ಆಗಬಾರದು. ಅದೇ ರೀತಿ ಪ್ರಕಾಶಕರ ತಪ್ಪಿಗಾಗಿ ತೊಂದರೆಯನ್ನೂ ಅನುಭವಿಸಬಾರದು. ಶಾಸನ ಪುಸ್ತಕಗಳನ್ನು ಮುದ್ರಿಸಿ, ಪ್ರಕಾಶನ ಮಾಡುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲು ಇದು ಸೂಕ್ತ ಸಮಯ’ ಎಂದು ಅಭಿಪ್ರಾಯಪಟ್ಟಿದೆ.

‘ಒಂದು ವೇಳೆ ಇಂತಹ ದೋಷಗಳು ಕಂಡು ಬಂದರೆ ಹೊಣೆ ಹೊತ್ತವರು ನ್ಯಾಯಾಂಗ ನಿಂದನೆಯನ್ನೂ ಒಳಗೊಂಡಂತೆ ಕಾನೂನಾತ್ಮಕ ಸಮಸ್ಯೆಗಳಿಗೆ ಈಡಾಗಬೇಕಾಗುತ್ತದೆ. ಅಂತಹ ಪ್ರಕಾಶನ ಸಂಸ್ಥೆಯನ್ನು ಪುಸ್ತಕಗಳ ಪೂರೈಕೆಗೆ ಸಾರ್ವಜನಿಕ ಟೆಂಡರ್‌ನಲ್ಲಿ ಭಾಗವಹಿಸದಂತೆ ಕಪ್ಪು ಪಟ್ಟಿಗೆ ಸೇರ್ಪಡೆ ಮಾಡುವುದಕ್ಕೂ ಅವಕಾಶ ನೀಡಬಹುದಾಗಿದೆ’ ಎಂದು ನ್ಯಾಯಪೀಠ ವಿವರಿಸಿದೆ.

‘ಈ ಆದೇಶದ ಪ್ರತಿಯನ್ನು ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ, ಹೈಕೋರ್ಟ್‌ನ ಪ್ರಧಾನ ಗ್ರಂಥಪಾಲಕರು‌ ಮತ್ತು ಕರ್ನಾಟಕ ಕಾನೂನು ನಿಯತಕಾಲಿಕೆ ಪ್ರಕಾಶಕರಿಗೆ ತ್ವರಿತ ಅಂಚೆಯ ಮೂಲಕ ಕಳುಹಿಸಿಕೊಡಬೇಕು’ ಎಂದು ತಾಕೀತು ಮಾಡಿದೆ.

ಭೋಗ್ಯದ ಕರಾರನ್ನು ಬದಿಗೆ ಸರಿಸದೇ ಎಷ್ಟು ಹಣ ಪಾವತಿಸಬೇಕು ಎಂಬುದನ್ನು ನಿರ್ಧರಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ್ದ ರಾಜ್ಯ ಮೇಲ್ಮನವಿ ನ್ಯಾಯಮಂಡಳಿಯ ಆದೇಶವನ್ನು ವಲೇರಿಯನ್ ಫರ್ನಾಂಡಿಸ್ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.