ADVERTISEMENT

ಖಾಸಗಿ ಶಾಲಾ ಶುಲ್ಕ: 31ಕ್ಕೆ ಪೋಷಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 16:46 IST
Last Updated 28 ಜನವರಿ 2021, 16:46 IST

ಬೆಂಗಳೂರು: ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ಪಡೆಯುವ ಶುಲ್ಕ ನಿಗದಿಪಡಿಸುವ ವಿಷಯದಲ್ಲಿ ಶಿಕ್ಷಣ ಇಲಾಖೆ ಯಾವುದೇ ತೀರ್ಮಾನ ಪ್ರಕಟಿಸದಿರುವುದನ್ನು ಖಂಡಿಸಿ ಇದೇ 31ರಂದು ಪ್ರತಿಭಟನೆ ಹಮ್ಮಿಕೊಳ್ಳಲು ಕರ್ನಾಟಕ ಖಾಸಗಿ ಶಾಲಾ ಪೋಷಕರ ಸಂಘಟನೆಗಳ ಸಮನ್ವಯ ಸಮಿತಿ ನಿರ್ಧರಿಸಿದೆ.

‘ಶುಲ್ಕ ವಿಷಯದಲ್ಲಿ ಗುರುವಾರ (ಜ. 28) ಸಂಜೆಯೊಳಗೆ ಸರ್ಕಾರ ನಿರ್ಧಾರ ಪ್ರಕಟಿಸದಿದ್ದರೆ 31ರಂದು ಹೋರಾಟ ನಡೆಸುವುದಾಗಿ ಬುಧವಾರವೇ ಗಡುವು ನೀಡಲಾಗಿತ್ತು. ಆದರೆ, ಈ ವಿಷಯದಲ್ಲಿ ಶಿಕ್ಷಣ ಇಲಾಖೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಖಾಸಗಿ ಶಾಲೆಗಳು ಶುಲ್ಕ ನಿಗದಿಪಡಿಸುವ ವಿಷಯದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದೂ ಸಮಿತಿ ದೂರಿದೆ.

‘ಸಮನ್ವಯ ಸಮಿತಿಯ ಸಭೆ ಶುಕ್ರವಾರ ಬೆಳಿಗ್ಗೆ 11 ಗಂಟೆ ನಡೆಯಲಿದೆ. ಈ ಸಭೆಯಲ್ಲಿ ಪ್ರತಿಭಟನೆಯ ರೂಪುರೇಷೆಯ ಬಗ್ಗೆ ಚರ್ಚೆ ನಡೆಯಲಿದೆ‘ ಎಂದು ಸಮಿತಿಯ ಸದಸ್ಯ ಬಿ.ಎಸ್‌. ಯೋಗಾನಂದ ತಿಳಿಸಿದರು.

ADVERTISEMENT

‘ಕೆಲವು ಖಾಸಗಿ ಶಾಲೆಗಳು ಈಗಾಗಲೇ ಶೇ 20ರಿಂದ 25ರಷ್ಟು ಶುಲ್ಕ ಕಡಿಮೆ ಮಾಡುವ ಭರವಸೆ ನೀಡಿವೆ. ಕೇವಲ ಆನ್‌ಲೈನ್‌ ತರಗತಿ ಕ್ಲಾಸ್ ನಡೆಸಿರುವುದರಿಂದ ಶೇ 75ರಷ್ಟು ಕಡಿತ ಮಾಡಬಹುದು ಎಂದು ಪೋಷಕರು ಬೇಡಿಕೆ ಮುಂದಿಟ್ಟಿದ್ದಾರೆ. ಆದರೆ, ಕೆಲವು ಶಾಲೆಯವರು ಆನ್‌ಲೈನ್‌ ತರಗತಿ ನಡೆಸಿ ಪೂರ್ಣ ಪ್ರಮಾಣದ ಶುಲ್ಕ ಪಡೆದಿದ್ದಾರೆ. ಇದು ಸರಿಯಲ್ಲ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.