ಪ್ರಿಯಾಂಕ್ ಖರ್ಗೆ
ಕಲಬುರಗಿ: ‘ಆರ್‌ಎಸ್‌ಎಸ್‌ನವರು ಪಥಸಂಚಲನ ನಡೆಸುವ ಬಗ್ಗೆ ಮಾಹಿತಿ ನೀಡಿದ್ದಾರೆ, ಅನುಮತಿ ಕೇಳಿಲ್ಲ. ಮಾಹಿತಿ ಕೊಟ್ಟ ತಕ್ಷಣ ಹೋಗಿ ರಕ್ಷಣೆ ಕೊಡಲು ಗೃಹ ಇಲಾಖೆ, ಸರ್ಕಾರದವರೇನು ಅವರ ಆಳು ಮಕ್ಕಳಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಇಲ್ಲಿ ಪ್ರಶ್ನಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚಿತ್ತಾಪುರ ಯುವಕರ ಭವಿಷ್ಯದ ಪ್ರಶ್ನೆ ಬಂದಾಗ ಕಾನೂನು ಕ್ರಮ ಜರುಗಿಸಲಾಗಿದೆ. ನೋಂದಣಿಯಾಗದ ಒಂದು ಸಂಸ್ಥೆಯ ಕಾರ್ಯಕರ್ತರು ಲಾಠಿ ಹಿಡಿದು ಪಥಸಂಚಲನ ಮಾಡಿದರೆ, ಜನರಲ್ಲಿ ಭೀತಿ ಮೂಡುವುದಿಲ್ಲವೇ? ಹೆಚ್ಚುಕಮ್ಮಿ ಆದರೆ ಯಾರು ಹೊಣೆ’ ಎಂದು ಪ್ರಶ್ನಿಸಿದರು.
‘ಆರ್‌ಎಸ್‌ಎಸ್‌ನವರು ಚಿತ್ತಾಪುರದಲ್ಲಿಪಥಸಂಚಲನ ನಡೆಸುವ ವಿಚಾರ ಪ್ರತಿಷ್ಠೆ ಮಾಡಿಕೊಂಡಿದ್ದಾರೆ. ಅವರು ಮಾಹಿತಿ ಕೊಡುವುದನ್ನು ಬಿಟ್ಟು, ಅನುಮತಿ ಕೇಳಿದರೆ, ಪರಿಸ್ಥಿತಿ ನೋಡಿಕೊಂಡು ಸ್ಥಳೀಯ ಆಡಳಿತವೇ ನಿರ್ಧಾರ ಕೈಗೊಳ್ಳುತ್ತದೆ’ ಎಂದರು.
‘ಆರ್‌ಎಸ್‌ಎಸ್ ನೋಂದಣಿ ಪತ್ರದ ವಿಚಾರ ಕುರಿತು ಹೈಕೋರ್ಟ್‌ನಲ್ಲಿ ಸಕಾಲದಲ್ಲಿ ಪ್ರಶ್ನಿಸಲಾಗುವುದು. ಈಗ ಪಥಸಂಚಲನದ ವಿಚಾರ ಮಾತ್ರ ಬಂದಿದೆ’ ಎಂದರು. ‘ಸೇಡಂನಲ್ಲಿ ಕಾನೂನು ಉಲ್ಲಂಘಿಸಿ ಆರ್‌ಎಸ್‌ಎಸ್ ಪಥಸಂಚಲನ ನಡೆಸಿದೆ. ಅದನ್ನೂ ಕೋರ್ಟ್ ಗಮನಕ್ಕೆ ತರಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.