ಪ್ರಿಯಾಂಕ್ ಖರ್ಗೆ
ಬೆಂಗಳೂರು: ಸರ್ಕಾರಿ ಸ್ಥಳಗಳಲ್ಲಿ ಶಾಖೆ, ಸಾಂಘಿಕ್ ಅಥವಾ ಬೈಠಕ್ ಹೆಸರಿನಲ್ಲಿ ಆರ್‌ಎಸ್‌ಎಸ್ ನಡೆಸುವ ಎಲ್ಲ ಬಗೆಯ ಚಟುವಟಿಕೆಗಳಿಗೂ ನಿಷೇಧ ಹೇರಬೇಕೆಂದು ಮುಖ್ಯಮಂತ್ರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದ ನಂತರ ಅವರಿಗೆ ಬರುತ್ತಿರುವ ಬೆದರಿಕೆ ಕರೆಗಳ ಒಂದು ವಿಡಿಯೊ ತುಣುಕನ್ನು ಪ್ರಿಯಾಂಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬೆದರಿಕೆ ಕರೆ ಮಾಡಿದ ವ್ಯಕ್ತಿ ಹಿಂದಿಯಲ್ಲಿ ಮಾತನಾಡಿದ್ದು, ಆರ್‌ಎಸ್‌ಎಸ್ ನಿಷೇಧ ಕುರಿತ ಹೇಳಿಕೆಗೆ ಪ್ರಿಯಾಂಕ್ ಹಾಗೂ ಅವರ ಸೋದರ ರಾಹುಲ್ ಅವರನ್ನು ಕೆಟ್ಟಪದಗಳನ್ನು ಬಳಸಿ ನಿಂದಿಸಿದ್ದಾನೆ. ತಾಯಿ, ಸಹೋದರಿಯರ ಹೆಸರು ಹಿಡಿದು ಅತ್ಯಂತ ತುಚ್ಚವಾಗಿ ಮಾತನಾಡಿದ್ದಾನೆ.
ಈ ಕುರಿತು ‘ಎಕ್ಸ್’ನಲ್ಲಿ ವಿಡಿಯೊ ಸಹಿತ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಯುವಕರು, ಮಕ್ಕಳ ಮನಸುಗಳಲ್ಲಿ ಕಲ್ಮಶ ತುಂಬುವ ಕೆಲಸವನ್ನು ಆರ್‌ಎಸ್‌ಎಸ್ ಮಾಡುತ್ತಿದೆ ಎಂದಿದ್ದೆ, ಅವರು ತುಂಬಿದ ಕಲ್ಮಶವು ಹೇಗಿರುತ್ತದೆ ಎಂಬುದಕ್ಕೆ ಈ ಕರೆ ಒಂದು ಸಣ್ಣ ಉದಾಹರಣೆ. ಕೆಲವು ದಿನಗಳಿಂದ ನನಗೆ ನಿರಂತರವಾಗಿ ಬರುತ್ತಿದ್ದ ಬೆದರಿಕೆ ಮತ್ತು ನಿಂದನೆಯ ಕರೆಗಳಲ್ಲಿ ಇದೂ ಒಂದು. ತಾಯಿ, ಸಹೋದರಿಯರ ಹೆಸರು ಹಿಡಿದು ಅತ್ಯಂತ ತುಚ್ಚವಾಗಿ ನಿಂದಿಸುವುದು ಶಾಖೆಗಳಲ್ಲಿ ನೀಡುವ ಸಂಸ್ಕಾರವೇ’ ಎಂದು ಪ್ರಶ್ನಿಸಿದ್ದಾರೆ.
‘ಆರ್‌ಎಸ್‌ಎಸ್‌ನ ಕಾಲಾಳುಗಳಾಗಿರುವ ಜನರನ್ನು ವಿಕಾರಧಾರೆಯಿಂದ ವಿಚಾರಧಾರೆಯೆಡೆಗೆ ಕರೆತರಬೇಕಿದೆ. ಬುದ್ಧ, ಬಸವ, ಅಂಬೇಡ್ಕರ್ ಅವರ ಮೌಲ್ಯಯುತ ಚಿಂತನೆಗಳನ್ನು ಪರಿಚಯಿಸಬೇಕಿದೆ. ಮುಗ್ದ ಮಕ್ಕಳು, ಯುವ ಸಮುದಾಯವನ್ನು ಇಂತಹ ಕಲುಷಿತ ವ್ಯವಸ್ಥೆಗೆ ಬಲಿಯಾಗದಂತೆ ತಡೆಯುವ ಸಲುವಾಗಿಯೇ ಹೋರಾಡುತ್ತೇನೆ ಮತ್ತು ದೃಢವಾದ ಹೆಜ್ಜೆಗಳನ್ನು ಇಡುತ್ತೇನೆ’ ಎಂದು ಹೇಳಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್‌ಎಸ್‌ಎಸ್ ಸರಸಂಚಾಲಕ ಮೋಹನ್ ಭಾಗವತ್ ಅವರ ತಾಯಿಯಂದಿರಿಗೆ ಇದೇ ಬಗೆಯಲ್ಲಿ ನಿಂದಿಸುವುದನ್ನು ರಾಜ್ಯದ ಬಿಜೆಪಿ ನಾಯಕರಾದ ಬಿ.ವೈ.ವಿಜಯೇಂದ್ರ, ಆರ್.ಅಶೋಕ, ಸಿ.ಟಿ.ರವಿ, ವಿ.ಸುನಿಲ್‌ಕುಮಾರ್, ಪ್ರತಾಪ್ ಸಿಂಹ, ಛಲವಾದಿ ನಾರಾಯಣಸ್ವಾಮಿ ಮೊದಲಾದ ನಾಯಕರು ಒಪ್ಪುತ್ತಾರೆಯೇ? ಬಿಜೆಪಿ ನಾಯಕರ ಮಕ್ಕಳು ತಮ್ಮ ಭವ್ಯ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ. ಬಡವರ ಮಕ್ಕಳನ್ನು ಹೀಗೆ ನಿಂದಿಸುವುದಕ್ಕೆ, ಬೆದರಿಸುವುದಕ್ಕೆ ಮತ್ತು ಬಲಿಯಾಗುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ಕುರಿತು ದೂರು ನೀಡಿದರೆ ಆ ವ್ಯಕ್ತಿಯ ಬದುಕಿನಲ್ಲಿ ಹಾನಿಯಾಗುತ್ತದೆಯೇ ಹೊರತು, ಆತನನ್ನು ಇಂತಹ ಮನಸ್ಥಿತಿಗೆ ತಳ್ಳಿದವರಿಗೆ ಯಾವ ಹಾನಿಯೂ ಆಗುವುದಿಲ್ಲ. ನಮ್ಮದು ವ್ಯಕ್ತಿಗಳ ವಿರುದ್ಧ ಹೋರಾಟವಲ್ಲ, ಆರ್‌ಎಸ್‌ಎಸ್ ಪಸರಿಸುತ್ತಿರುವ ಕೊಳಕು ಮನಸ್ಥಿತಿಯ ವಿರುದ್ಧ ಹೋರಾಟ. ಮುಗ್ಧರ ತಲೆಕೆಡಿಸಿ ಅವರ ಚಿಂತನೆಗಳನ್ನು ಕಲುಷಿತಗೊಳಿಸುತ್ತಿರುವ ಕ್ಷುದ್ರ ಶಕ್ತಿಗಳ ವಿರುದ್ಧದ ಹೋರಾಟ’ ಎಂದಿದ್ದಾರೆ.
ನಾವು ಹೆಚ್ಚು ಶಕ್ತಿಶಾಲಿಯಾದಷ್ಟು, ಶತ್ರುಗಳು ಹೆಚ್ಚು. ಕಡಿಮೆ ಶಕ್ತಿ ಇದ್ದರೆ ಕಡಿಮೆ ಶತ್ರುಗಳು, ಶಕ್ತಿಯೇ ಇಲ್ಲದಿದ್ದರೆ, ಶತ್ರುಗಳೂ ಇರುವುದಿಲ್ಲಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
ತನಿಖೆಗೆ ಸೂಚನೆ: ಪರಮೇಶ್ವರ
‘ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಬಂದಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸಲು ಸೂಚಿಸಿದ್ದೇನೆ’ ಎಂದು ಗೃಹ ಸಚಿವ
ಜಿ. ಪರಮೇಶ್ವರ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿ, ‘ಯಾರು ಬೆದರಿಕೆ ಕರೆ ಮಾಡಿದ್ದಾರೆ, ಎಲ್ಲಿಂದ ಕರೆ ಬಂದಿದೆ ಎಂಬುದನ್ನು ತನಿಖೆ ಮಾಡುತ್ತೇವೆ. ಆರ್‌ಎಸ್‌ಎಸ್ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಆ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ. ಅಭಿಪ್ರಾಯ ತಿಳಿಸಿದ್ದಕ್ಕೇ ಅವರಿಗೆ ಬೆದರಿಕೆ ಹಾಕುವುದು ಸರಿಯಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.