ADVERTISEMENT

ಆರ್‌ಎಸ್‌ಎಸ್‌ ಕುರಿತು ಪ್ರಿಯಾಂಕ್ ಹೇಳಿಕೆಗೆ ಪರ–ವಿರುದ್ಧ ಧ್ವನಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 0:30 IST
Last Updated 17 ಫೆಬ್ರುವರಿ 2026, 0:30 IST
<div class="paragraphs"><p>ಬಿ.ವೈ.ವಿಜಯೇಂದ್ರ ಮತ್ತು&nbsp;ಪ್ರಿಯಾಂಕ್ ಖರ್ಗೆ</p></div>

ಬಿ.ವೈ.ವಿಜಯೇಂದ್ರ ಮತ್ತು ಪ್ರಿಯಾಂಕ್ ಖರ್ಗೆ

   

ಆರ್‌ಎಸ್‌ಎಸ್‌ ಕುರಿತಂತೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಕಾರ್ಯಕ್ರಮವೊಂದರಲ್ಲಿ ಆಡಿರುವ ಮಾತುಗಳ ಬಗ್ಗೆ ಬಿಜೆಪಿ, ವಿಎಚ್‌ಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರೆ, ಕಾಂಗ್ರೆಸ್‌ ನಾಯಕರು ಅವರ ಪರ ಧ್ವನಿ ಎತ್ತಿದ್ದಾರೆ

ದ್ವೇಷ, ಹತಾಶೆಯ ಪ್ರತೀಕ: ವಿಜಯೇಂದ್ರ

ADVERTISEMENT

ಆರ್‌ಎಸ್‌ಎಸ್‌ ಕುರಿತು ಸದಾ ತಲೆಹರಟೆ ಮತ್ತು ಉಡಾಫೆ ಮಾತುಗಳನ್ನಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರು ನಾಗಪುರಕ್ಕೆ ಹೋಗಿ ಆರು ತಿಂಗಳು ಆರ್‌ಎಸ್‌ಎಸ್‌ ಕುರಿತು ಅಧ್ಯಯನ ಮಾಡಿ,  ಬಳಿಕ ಮಾತನಾಡಲಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣಕನ್ನಡ ಜಿಲ್ಲೆಯ ವಿರುದ್ಧ ಪ್ರಿಯಾಂಕ್ ಮಾತನಾಡಿದ್ದಾರೆ. ಕಳೆದ 50 ವರ್ಷಗಳಿಂದ ಕಲಬುರಗಿ ಮಾತ್ರವಲ್ಲ, ಇಡೀ ಕಲ್ಯಾಣ ಕರ್ನಾಟಕ ಇವರ ಕುಟುಂಬದ ಹಿಡಿತದಲ್ಲಿದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್‌ ಖರ್ಗೆ ಸುದೀರ್ಘ ಅಧಿಕಾರ ಅನುಭವಿಸುತ್ತಲೇ ಬಂದಿದ್ದಾರೆ. ರಾಜ್ಯದ 59 ಅತಿ ಹೆಚ್ಚು ಹಿಂದುಳಿದ ತಾಲ್ಲೂಕುಗಳೆಲ್ಲವೂ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲೇ ಇವೆ. ಶಿವಮೊಗ್ಗ ಬಗ್ಗೆಯೂ ಸವಾಲು ಹಾಕಿದ್ದಾರೆ. ಶಿವಮೊಗ್ಗ ಮತ್ತು ಕಲಬುರ್ಗಿ ಅಭಿವೃದ್ಧಿ ಚರ್ಚೆಗೂ ಸಿದ್ಧ ಎಂದರು.

ಕಲಬುರಗಿಯಲ್ಲಿ 12 ದಿನಗಳಿಂದ 9 ಬಡಾವಣೆಗಳಲ್ಲಿ ಕುಡಿಯುವ ನೀರು ಬಂದಿಲ್ಲ. ಆ ಕಡೆ ಗಮನಹರಿಸಲು ಇವರಿಗೆ ಪುರುಸೊತ್ತಿಲ್ಲ. ಕಳೆದ ಎರಡೂವರೆ ವರ್ಷದಲ್ಲಿಎಷ್ಟು ಕೆಡಿಪಿ ಸಭೆಗಳನ್ನು ನಡೆಸಿದ್ದಾರೆ ಎಂಬ ಮಾಹಿತಿ ನೀಡಲಿ ಎಂದು ಆಗ್ರಹಿಸಿದರು.

‘ಕಲ್ಯಾಣ’ಕ್ಕೆ ದೆವ್ವಗಳನ್ನು ಓಡಿಸೋ ದಿನ ದೂರವಿಲ್ಲ: ಆರ್‌.ಅಶೋಕ

‘ಆರ್‌ಎಸ್‌ಎಸ್‌ ಅನ್ನು ವಾಚಾಮ ಗೋಚರವಾಗಿ ಬೈದರೆ, ನಿರಂತರವಾಗಿ ನಿಂದಿಸಿದರೆ ಹೈಕಮಾಂಡ್‌ನ ನಾಯಕರನ್ನು ಮೆಚ್ಚಿಸಿ ಯಾವುದಾದರೂ ಸ್ಥಾನಮಾನ ಪಡೆಯಬಹುದು. ಇನ್ನೂ ಹೆಚ್ಚಿನ ಅಧಿಕಾರ ಸಿಗಬಹುದು ಎಂಬ ಭ್ರಮೆಯಲ್ಲಿರುವ ಪ್ರಿಯಾಂಕ್‌ ಅದನ್ನೇ ನಿತ್ಯ ಚಾಳಿ ಮಾಡಿಕೊಂಡಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಟೀಕಿಸಿದ್ದಾರೆ.

ನಾಲ್ಕು ದಶಕಗಳಿಂದ ಕಲ್ಯಾಣ ಕರ್ನಾಟಕದ ಜನರ ಕೃಪಾಕಟಾಕ್ಷದಿಂದ ಅಧಿಕಾರ ಅನುಭವಿಸಿ, ಅಭಿವೃದ್ಧಿಗೆ ಮಾತ್ರ ನಾಳೆ ಬಾ ಎಂಬ ಶಾ‌ಶ್ವತವಾದ ಬೋರ್ಡ್‌ ಹಾಕಿಕೊಂಡಿದ್ದಾರೆ. ಕಲ್ಯಾಣ
ಕರ್ನಾಟಕದ ಜನತೆಗೆ ನಂಬಿಕೆ ದ್ರೋಹ ಮಾಡುತ್ತಿರುವ ದೆವ್ವಗಳನ್ನು ಓಡಿಸುವ ದಿನ ದೂರವಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಕಾಂಗ್ರೆಸ್‌ ‘ಡೆವಿಲ್ಸ್‌ ವರ್ಕ್‌ಶಾಪ್’: ಛಲವಾದಿ

‘ಕಾಂಗ್ರೆಸ್ ದೇಶದ ಪರವಾಗಿದ್ದರೆ ಆರ್‌ಎಸ್‌ಎಸ್‌ ಆ ಪಕ್ಷಕ್ಕೂ ಬೆಂಬಲ ನೀಡುತ್ತದೆ’ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. 

‘ಆರ್‌ಎಸ್‌ಎಸ್‌ ದೆವ್ವದ ಸಂಘಟನೆ ಅಲ್ಲ. ಅದು ದೇಶ ಭಕ್ತರ ಕೂಟ. ಕಾಂಗ್ರೆಸ್‌ ಅನ್ನು  ಯಾವಾಗಲೂ ‘ಡೆವಿಲ್ಸ್‌ ವರ್ಕ್‌ಶಾಪ್‌’ ಎಂದು ಕರೆಯಲಾಗುತ್ತದೆ. ಹೀಗಾಗಿ ಅವರು ದೆವ್ವಕ್ಕೆ ಹೋಲಿಸಿದ್ದಾರೆ. ಸಂಘವು ದೇವರ ಆಶೀರ್ವಾದದಿಂದ ಇರುವ ಕೂಟ. ದೇವರ ನೆರಳಿನಲ್ಲಿ ಈ ಪ್ರಪಂಚದಲ್ಲಿರುವ ಪ್ರತಿಯೊಂದು ಜೀವಿಯೂ ಜೀವಿಸುತ್ತದೆ’ ಎಂದಿದ್ದಾರೆ.

ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ– ರಮೇಶ್ ಬಾಬು

‘ಪ್ರಿಯಾಂಕ್‌ ಖರ್ಗೆ ಮತ್ತು ಅವರ ಕುಟುಂಬದ ವಿರುದ್ಧ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಮ್ಮ ಪಟಾಲಾಂ ಜೊತೆ ಅಲವತ್ತುಕೊಂಡಿರುವುದು ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಟೀಕಿಸಿದ್ದಾರೆ.

‘ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಪದೇ ಪದೇ ದೆಹಲಿಗೆ ದಂಡಯಾತ್ರೆ ಮಾಡುತ್ತಿರುವ ವಿಜಯೇಂದ್ರ ಅವರಿಗೆ, ಆರ್‌ಎಸ್‌ಎಸ್‌
ಅನ್ನು ಸಮರ್ಥಿಸುವ ಅನಿವಾರ್ಯ ಸೃಷ್ಟಿ ಆಗಿರುವುದು ದೊಡ್ಡ ವಿಪರ್ಯಾಸ’
ಎಂದಿದ್ದಾರೆ.
‘ಪ್ರಿಯಾಂಕ್ ಅವರು ಸಂಘ ಪರಿವಾರದ ಅಸ್ತಿತ್ವ, ನೋಂದಣಿ ಕಾರ್ಯ ಮತ್ತು ಚಟುವಟಿಕೆಯನ್ನು ಪ್ರಶ್ನಿಸುತ್ತಿದ್ದಾರೆ. ನೋಂದಣಿ ಕುರಿತು ಸಮರ್ಪಕವಾದ ಉತ್ತರ ನೀಡಲು ಸಂಘ ಪರಿವಾರದವರಿಗೆ ಸಾಧ್ಯವಾಗಿಲ್ಲ. ಪ್ರತಿಪಾದನೆಗೆ ಅಥವಾ ಸಮರ್ಥನೆಗೆ ನಿಲ್ಲುವ ಮೂಲಕ ಸಂಘ ಪರಿವಾರದ ಮತ್ತೊಂದು ಮುಖವನ್ನು ಕಳಂಕಿತ ನಾಯಕ ವಿಜಯೇಂದ್ರ ಜನರ ಮುಂದೆ ತೆರೆದಿಟ್ಟಿದ್ದಾರೆ’ ಎಂದು ಕುಟುಕಿದ್ದಾರೆ.

‘ಪ್ರಿಯಾಂಕ್‌ ಅವರನ್ನಾಗಲಿ, ಖರ್ಗೆಯವರ ಕುಟುಂಬವನ್ನಾಗಲಿ, ಸಿದ್ಧಾಂತವನ್ನಾಗಲಿ ಅಥವಾ ಕರ್ನಾಟಕಕ್ಕೆ ಅವರು ಕೊಟ್ಟಿರುವ ಕೊಡುಗೆಗಳನ್ನಾಗಲಿ ಪ್ರಶ್ನಿಸುವ ಯಾವುದೇ ನೈತಿಕತೆಯನ್ನು ವಿಜಯೇಂದ್ರ ಉಳಿಸಿಕೊಂಡಿಲ್ಲ. ಅವರಿಂದ ನೈತಿಕತೆಯ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ಖರ್ಗೆ ಕುಟುಂಬಕ್ಕೆ, ಕಾಂಗ್ರೆಸ್‌ಗೆ ಅಥವಾ ಕರ್ನಾಟಕದ ಜನರಿಗೆ ಇಲ್ಲ’ ಎಂದೂ ಆಕ್ರೋಶ ವ್ಯಕ್ತಪ‍ಡಿಸಿದ್ದಾರೆ.

ಆರ್‌ಎಸ್‌ಎಸ್‌ ಕಚೇರಿ ಮೇಲೆ ದಾಳಿ ಮಾಡಲಿ: ಸಚಿವ ಶಿವರಾಜ ತಂಗಡಗಿ

ಕೊಪ್ಪಳ: ‘ಆರ್‌ಎಸ್‌ಎಸ್‌ ಕುರಿತು ಸಚಿವ ಪ್ರಿಯಾಂಕ್‌ ಖರ್ಗೆ ದೆವ್ವ ಎಂದು ಸರಿಯಾಗಿ ಹೇಳಿದ್ದಾರೆ. ಕೇಂದ್ರ ಸರ್ಕಾರ ಮತ್ತೊಬ್ಬರ ಮೇಲೆ ಇಡಿ, ಐಟಿ, ಸಿಬಿಐ ದಾಳಿ ಮಾಡುವ ಬದಲು ಆರ್‌ಎಸ್‌ಎಸ್‌ ಕಚೇರಿ ಮೇಲೆ ಮೊದಲು ದಾಳಿ ನಡೆಸಲಿ’ ಎಂದು ಹಿಂದುಳಿದ ವರ್ಗಗಳ ಖಾತೆ ಸಚಿವ ಶಿವರಾಜ ತಂಗಡಗಿ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಯಾವತ್ತಿದ್ದರೂ ಆರ್‌ಎಸ್‌ಎಸ್‌ ಲೆಕ್ಕ ಕೊಡಲೇಬೇಕು. ನೂರು ವರ್ಷಗಳನ್ನು ಪೂರೈಸಿರುವ ಸಂಸ್ಥೆಗೆ ದೊಡ್ಡಮೊತ್ತ ಎಲ್ಲಿಂದ ಬರುತ್ತದೆ. ಯಾರೆಲ್ಲ ಹಣ ಕೊಡುತ್ತಾರೆ ಎನ್ನುವುದು ಬಹಿರಂಗವಾಗಬೇಕು’ ಎಂದು ಪ್ರತಿಪಾದಿಸಿದರು.

‘ದೊಡ್ಡ ಸಂಸ್ಥೆಯಾದರೂ ಆರ್‌ಎಸ್‌ಎಸ್‌ ಏಕೆ ನೋಂದಣಿಯಾಗಿಲ್ಲ, ಆರ್‌ಎಸ್‌ಎಸ್‌ ಕಚೇರಿ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ದಾಳಿ ನಡೆಸಿ ಹಣದ ಮೂಲ ಪತ್ತೆ ಹಚ್ಚಲಿ’ ಎಂದು ವಾಗ್ದಾಳಿ ನಡೆಸಿದರು.

‘ರಾಜ್ಯ ಹಾಗೂ ದೇಶದಲ್ಲಿ ಕೋಮುವಾದ ಹೆಚ್ಚುತ್ತಿದೆ. ದೊಡ್ಡ ಪ್ರಮಾಣದ ಹೂಡಿಕೆಗೆ ಉತ್ತಮ ವಾತಾವರಣ ಇರಬೇಕು. ಹೂಡಿಕೆದಾರರು ಇದನ್ನು ವಿಚಾರ ಮಾಡುತ್ತಾರೆ. ಅದಕ್ಕೆ ಕರಾವಳಿ ಭಾಗಕ್ಕೆ ಐಟಿ, ಬಿಟಿ ಬರುತ್ತಿಲ್ಲ. ಬಿಜೆಪಿಗರಿಗೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದರು.

ದೇಶಭಕ್ತರನ್ನು ಅವಮಾನಿಸುವ ಕುತಂತ್ರದ ಭಾಗ: ವಿಎಚ್‌ಪಿ

ನಾಗಪುರ (ಪಿಟಿಐ): ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಟೀಕೆ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸೋಮವಾರ ತರಾಟೆಗೆ ತೆಗೆದುಕೊಂಡಿದ್ದು, ‘ಸಚಿವರ ಹೇಳಿಕೆಯು ದೇಶಭಕ್ತರನ್ನು ಅವಮಾನಿಸುವ ಕುಂತಂತ್ರದ ಭಾಗ’ ಎಂದು ಹೇಳಿದೆ.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಎಚ್‌ಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮಿಲಿಂದ್‌ ಪರಾಂಡೆ, ‘ಹಿಂದೂಗಳು ಜಾಗೃತರಾಗುವುದನ್ನು ಸಹಿಸದ ಅನೇಕ ವ್ಯಕ್ತಿಗಳು ಭಾರತದಲ್ಲಿ ಇದ್ದಾರೆ. ಅವರು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಕೆಟ್ಟ ಪದಗಳನ್ನು ಬಳಸಿ ದೇಶಭಕ್ತ ಸಂಘಟನೆಗಳನ್ನು ಅವಮಾನಿಸುವುದು ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ’ ಎಂದು ವಾಗ್ದಾಳಿ ನಡೆಸಿದರು.

‘ಅವರು (ಖರ್ಗೆ) ಹೇಳಿದ್ದು ಸಂಪೂರ್ಣ ಸುಳ್ಳು ಮತ್ತು ಅದು ಅವರಿಗೂ ತಿಳಿದಿದೆ. ಆದರೆ, ದೇಶಭಕ್ತರ ಮಾನಹಾನಿ ಮಾಡುವ ಉದ್ದೇಶದಿಂದ ಆ ಕೆಲಸ ಮಾಡುತ್ತಾರೆ. ಅಂಥವರನ್ನು ಮತ್ತೆ ಅಧಿಕಾರಕ್ಕೆ ತರಬೇಕೇ ಎಂದು ಕರ್ನಾಟಕದ ಜನರು ಯೋಚಿಸಬೇಕು’ ಎಂದರು.

‘ಹಿಂದೂಗಳ ಹಿತಾಸಕ್ತಿಯಲ್ಲಿ ನಂಬಿಕೆ ಇರುವವರು ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರದಲ್ಲಿರಬೇಕು ಎಂದು ವಿಎಚ್‌ಪಿ ಯಾವಾಗಲೂ
ಪ್ರತಿಪಾದಿಸುತ್ತದೆ’ ಎಂದು ಹೇಳಿದರು.

ಪ್ರಿಯಾಂಕ್ ಖರ್ಗೆಗೆ ಆರ್‌ಎಸ್‌ಎಸ್‌ ಕುರಿತು ಸದಾ ನಕಾರಾತ್ಮಕವಾಗಿ (ನೆಗೆಟಿವ್) ಮಾತನಾಡುವುದು ಚಟವಾಗಿದೆ. ಇವರೊಂದು ರೀತಿಯಲ್ಲಿ ನೆಗೆಟಿವ್‌ ದೆವ್ವ
ಎನ್.ರವಿಕುಮಾರ್‌,ವಿಧಾನಪರಿಷತ್‌ನ ವಿರೋಧಪಕ್ಷದಮುಖ್ಯ ಸಚೇತಕ 
ಸಂವಿಧಾನದ ಆಶೋತ್ತರಗಳನ್ನು ವೈಯಕ್ತಿಕ ಲಾಭಕ್ಕೆ ಬಳಸಿಕೊಂಡಿರುವ ನೀವು ‘ಇದಿ ಅಮೀನ್’ ಮಾದರಿಯಲ್ಲಿ ಕಲಬುರಗಿ ಜನರ ಜೀವ ಹೀರುವ ದೆವ್ವಗಳಾಗಿದ್ದೀರಿ
ವಿ.ಸುನಿಲ್‌ಕುಮಾರ್,ಬಿಜೆಪಿ ಶಾಸಕ
ಆರ್‌ಎಸ್‌ಎಸ್ ಒಂದು ನೋಂದಾಯಿತ ಸಂಸ್ಥೆಯಲ್ಲ ಎಂದು ಸ್ವತಃ ಮೋಹನ್ ಭಾಗವತ್ ಹೇಳಿದ್ದಾರೆ. ನೋಂದಣಿಯಾಗದ ಸಂಸ್ಥೆಯನ್ನು ‘ಘೋಸ್ಟ್‌’ ಎನ್ನಬೇಕಾಗುತ್ತದೆ
ಬಿ.ಕೆ. ಹರಿಪ್ರಸಾದ್‌ ವಿಧಾನ ಪರಿಷತ್‌ ಕಾಂಗ್ರೆಸ್ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.