ADVERTISEMENT

ಅಕ್ರಮ ಕಲಬುರಗಿಗಷ್ಟೇ ಸೀಮಿತವಲ್ಲ; ಉಳಿದೆಡೆಯೂ ತನಿಖೆ ನಡೆಸಿ:  ಪ್ರಿಯಾಂಕ್‌ ಖರ್ಗೆ

​ಪ್ರಜಾವಾಣಿ ವಾರ್ತೆ
Published 2 ಮೇ 2022, 19:19 IST
Last Updated 2 ಮೇ 2022, 19:19 IST
 ಪ್ರಿಯಾಂಕ್‌ ಖರ್ಗೆ
 ಪ್ರಿಯಾಂಕ್‌ ಖರ್ಗೆ   

ಮೈಸೂರು: ‘ಪಿಎಸ್‌ಐ ನೇಮಕಾತಿ ಅಕ್ರಮವನ್ನು ಕಲಬುರಗಿಗೆ ಸೀಮಿತಗೊಳಿಸಿ ಆರ್‌.ಡಿ.ಪಾಟೀಲ, ದಿವ್ಯಾ ಹಾಗರಗಿ ಅವರನ್ನು ಹಿಡಿದಿರುವುದಾಗಿ ಬಿಜೆಪಿ ಸರ್ಕಾರ ಬೆನ್ನು ತಟ್ಟಿಕೊಳ್ಳುತ್ತಿದೆ. ಇನ್ನೂ ಹಲವಾರು ಪರೀಕ್ಷಾ ಕೇಂದ್ರಗಳ ಬಗ್ಗೆ ಅಭ್ಯರ್ಥಿಗಳು ಅನುಮಾನ ವ್ಯಕ್ತಪಡಿಸಿದ್ದು, ಆ ಬಗ್ಗೆ ತನಿಖೆಯೇ ನಡೆಸಿಲ್ಲ’ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಟೀಕಿಸಿದರು.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಲಬುರಗಿ ಬಿಟ್ಟು ಬೆಂಗಳೂರು, ಬೆಳಗಾವಿಗೆ ಬಂದರೆ ತನಿಖೆ ಚುರುಕಾಗುತ್ತದೆ. ಆಗ ಸರ್ಕಾರದ ಮಟ್ಟದಲ್ಲಿ ಯಾರಿಗೆ ದುಡ್ಡು ಹೋಗಿದೆ ಎಂಬುದು ಗೊತ್ತಾಗುತ್ತದೆ. ಮಧ್ಯವರ್ತಿಗಳಾಗಿರುವ ಆರ್‌.ಡಿ.ಪಾಟೀಲ, ದಿವ್ಯಾ ಹಾಗರಗಿ ಯಾರ ಪರ ಕೆಲಸ ಮಾಡುತ್ತಿದ್ದರು? ಅಭ್ಯರ್ಥಿಗಳಿಂದ ಹಣ ಸಂಗ್ರಹಿಸಿದ್ದು ಯಾರ ಪಾಲಾಗಿದೆ’ ಎಂದು ಪ್ರಶ್ನಿಸಿದರು.

‘ದಿವ್ಯಾ ಹಾಗರಗಿ ಸಿಕ್ಕಿದ ತಕ್ಷಣ ಮೂರು ತಾಸುಗಳಲ್ಲಿ ಮರು ಪರೀಕ್ಷೆ ಎಂದರು. ಮರುಪರೀಕ್ಷೆ ಮಾಡುವ ಉದ್ದೇಶವಿದ್ದರೆ 545 ಮಂದಿಯ ಓಎಂಆರ್‌ ಶೀಟ್‌ ತರಿಸಿಕೊಂಡಿದ್ದು ಏಕೆ? ಪ್ರಾಮಾಣಿಕರೂ ಈಗ ಧರಣಿ ಕುಳಿತಿದ್ದಾರೆ. ಪರೀಕ್ಷೆ ಬರೆದ 57 ಸಾವಿರ ಮಂದಿಯೂ ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದರು.

ADVERTISEMENT

‘545 ಅಭ್ಯರ್ಥಿಗಳಲ್ಲಿ ಸುಮಾರು 300 ಮಂದಿ ಅಕ್ರಮ ನಡೆಸಿದ್ದಾರೆ ಎಂದು ಸರ್ಕಾರವೇ ಹೇಳುತ್ತಿದೆ. ಆದರೆ, 19 ಜನರನ್ನು ಮಾತ್ರ ಬಂಧಿಸಲಾಗಿದೆ. ಇನ್ನುಳಿದವರು ಎಲ್ಲಿ ಹೋದರು? ಎಲ್ಲರೂ ಕಲಬುರಗಿಯಲ್ಲಿ ಪರೀಕ್ಷೆ ಬರೆಯಲು ಸಾಧ್ಯವೇ? ಬೆಳಗಾವಿಯಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ವಿಚಾರವಾಗಿ ದಾಖಲಾದ ಪ್ರಕರಣದ ತನಿಖೆ ಏನಾಯಿತು’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.