ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆಯ ಅಂತಿಮ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ ಬೆನ್ನಲ್ಲೇ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ.
ಇದೇ ಮೊದಲ ಬಾರಿಗೆ ಒಂದೊಂದು ಕೋರ್ಸ್‌ಗೂ ಪ್ರತೇಕ ಪ್ರವೇಶ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಆ ಪ್ರಕಾರ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಕಾಲೇಜುಗಳಿಗೆ ಪ್ರವೇಶ ಪಡೆಯಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ಛಾಯ್ಸ್-1 ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಶುಲ್ಕ ಪಾವತಿ, ನಂತರ ಸೀಟು ಖಾತರಿಯ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಆಗಸ್ಟ್ 8ರವರೆಗೆ ಅವಕಾಶ ಇದೆ. ಕಾಲೇಜಿನಲ್ಲಿ ವರದಿ ಮಾಡಿಕೊಳ್ಳಲು ಆಗಸ್ಟ್ 9 ಕೊನೆಯ ದಿನ.
ಕೃಷಿ ವಿಜ್ಞಾನ, ಪಶುವೈದ್ಯಕೀಯ, ಬಿ-ಫಾರ್ಮಾ, ಫಾರ್ಮಾ-ಡಿ ಕೋರ್ಸ್‌ಗಳ ಪ್ರವೇಶಕ್ಕೆ ಛಾಯ್ಸ್‌ಗಳನ್ನು ಆಯ್ಕೆ ಮಾಡಲು ಆಗಸ್ಟ್ 4ರಿಂದ ಅವಕಾಶ ನೀಡಲಾಗಿದೆ. ಛಾಯ್ಸ್-1 ಆಯ್ಕೆ ಮಾಡಿದವರು ಆಗಸ್ಟ್ 4ರಿಂದ 8ರವರೆಗೆ ಶುಲ್ಕ ಪಾವತಿಸಿ, ಆಗಸ್ಟ್ 9ರೊಳಗೆ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು.
ಯೋಗ ಮತ್ತು ನ್ಯಾಚುರೋಪತಿ, ಬಿಪಿಟಿ, ಬಿಪಿಒ, ಅಲೈಡ್ ಹೆಲ್ತ್ ಸೈನ್ಸ್, ವಾಸ್ತುಶಿಲ್ಪ ಕೋರ್ಸ್‌ಗೆ ಸೇರಬಯಸುವ ಅಭ್ಯರ್ಥಿಗಳು ಆಗಸ್ಟ್ 5ರಿಂದ ಛಾಯ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಛಾಯ್ಸ್-1 ಆಯ್ಕೆ ಮಾಡಿದವರು ಆಗಸ್ಟ್ 11ರೊಳಗೆ ಶುಲ್ಕ ಪಾವತಿಸಬೇಕು. ಆಗಸ್ಟ್ 12ರೊಳಗೆ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ.
ಬಿಎಸ್‌ಸಿ ನರ್ಸಿಂಗ್ ಕೋರ್ಸ್‌ಗೆ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಆಗಸ್ಟ್ 6ರಿಂದ ಛಾಯ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಛಾಯ್ಸ್- 1 ಆಯ್ಕೆ ಮಾಡಿದವರು, ಆ.11ರೊಳಗೆ ಶುಲ್ಕ ಪಾವತಿಸಿ, ಆ.12ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು.
ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಹೋಮಿಯೋಪಥಿ ಕೋರ್ಸ್‌ಗಳಿಗೆ ಸೀಟು ಹಂಚಿಕೆಯಾಗಿರುವವರು ಆಗಸ್ಟ್ 7ರಿಂದ ಛಾಯ್ಸ್‌ಗಳನ್ನು ಆಯ್ಕೆ ಮಾಡಬಹುದು. ಅವರು ಆಗಸ್ಟ್ 11ರೊಳಗೆ ಶುಲ್ಕ ಪಾವತಿಸಿ, ಆಗಸ್ಟ್ 12ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು. ಎಂಸಿಸಿ ಸೀಟು ಹಂಚಿಕೆ ಫಲಿತಾಂಶವನ್ನು ಆ.6ರಂದು ಪ್ರಕಟಿಸಲಿದ್ದು, ಅದರ ನಂತರವೇ ರಾಜ್ಯದಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅವರು ವಿವರಿಸಿದ್ದಾರೆ.
ಕೌನ್ಸೆಲಿಂಗ್ ನಡೆಸಲು ವೇಳಾಪಟ್ಟಿ ಪ್ರಕಾರ ಲಭ್ಯವಿರುವ ಸೀಮಿತ ಸಮಯವನ್ನು ಗಮನದಲ್ಲಿ ಇಟ್ಟುಕೊಂಡು, ಎಲ್ಲ ಕಾಲೇಜುಗಳು ಶನಿವಾರ ಮತ್ತು ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳನ್ನು ಕೂಡ ಕೆಲಸದ ದಿನಗಳೆಂದು ಪರಿಗಣಿಸಲು ಪ್ರಸನ್ನ ಅವರು ಸೂಚಿಸಿದ್ದಾರೆ.
ಸೀಟು ಸಿಗದವರು ಛಾಯ್ಸ್ ಆಯ್ಕೆ ಮಾಡುವ ಅಗತ್ಯವಿಲ್ಲ. ಮುಂದಿನ ಸುತ್ತಿನಲ್ಲಿ ಸೀಟು ಸಿಕ್ಕರೆ ಆಗ ಛಾಯ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.