ADVERTISEMENT

ಮತಾಂತರ ನಿಷೇಧ ಮಸೂದೆ ಕೈಬಿಡುವಂತೆ ಆಗ್ರಹಿಸಿ ಪ್ರತಿಭಟನೆ

ಪ್ರತಿಭಟನೆಯಲ್ಲಿ 40ಕ್ಕೂ ಅಧಿಕ ಸಂಘಟನೆಗಳು ಭಾಗಿ * ಬಡವರ ಸೇವೆಗೆ ಧಕ್ಕೆ– ಆರ್ಚ್‌ ಬಿಷಪ್‌ ಕಳವಳ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 19:45 IST
Last Updated 22 ಡಿಸೆಂಬರ್ 2021, 19:45 IST
ಮಸೂದೆಯನ್ನು ವಿರೋಧಿಸಿ ಪ್ರತಿಭಟನಾಕಾರರು ಫಲಕಗಳನ್ನು ಪ್ರದರ್ಶಿಸಿದರು. ಆರ್ಚ್‌ ಬಿಷಪ್‌ ಪೀಟರ್‌ ಮಚಾಡೊ (ಮುಂದಿನ ಸಾಲಿನಲ್ಲಿ ಎಡದಿಂದ ಮೂರನೆಯವರು) ಇದ್ದಾರೆ ಪ್ರಜಾವಾಣಿ ಚಿತ್ರ
ಮಸೂದೆಯನ್ನು ವಿರೋಧಿಸಿ ಪ್ರತಿಭಟನಾಕಾರರು ಫಲಕಗಳನ್ನು ಪ್ರದರ್ಶಿಸಿದರು. ಆರ್ಚ್‌ ಬಿಷಪ್‌ ಪೀಟರ್‌ ಮಚಾಡೊ (ಮುಂದಿನ ಸಾಲಿನಲ್ಲಿ ಎಡದಿಂದ ಮೂರನೆಯವರು) ಇದ್ದಾರೆ ಪ್ರಜಾವಾಣಿ ಚಿತ್ರ   

ಬೆಂಗಳೂರು: ಮತಾಂತರ ನಿಷೇಧ ಮಸೂದೆ ಕೈಬಿಡುವಂತೆ ಒತ್ತಾಯಿಸಿ ದಲಿತ, ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದ 40ಕ್ಕೂ ಹೆಚ್ಚು ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಬುಧವಾರ ಭಾರಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮೈಸೂರು ಬ್ಯಾಂಕ್ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ರ‌್ಯಾಲಿ ನಡೆಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ‘ಮಸೂದೆಯ ಮೂಲಕ ಕ್ರೈಸ್ತರನ್ನು ಕಟ್ಟಿಹಾಕುವ ಕೆಲಸ ಮಾಡಲಾಗುತ್ತಿದೆ’ ಎಂದೂ ಕಿಡಿಕಾರಿದರು. ಸಂವಿಧಾನ ವಿರೋಧಿ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.

‘ಮೂಲಭೂತ ಹಕ್ಕಿನ ಮೇಲಿನ ದಾಳಿಯನ್ನು ಖಂಡಿಸುತ್ತೇವೆ’, ‘ನಂಬಿರುವ ದೇವರನ್ನು ಪೂಜಿಸುವುದು ನಮ್ಮ ಹಕ್ಕು’, ‘ಸಂವಿಧಾನವನ್ನು ಎತ್ತಿ ಹಿಡಿಯೋಣ’, ‘ನಿರಪರಾಧಿ ಕ್ರೈಸ್ತರ ಮೇಲಿನ ದೌರ್ಜನ್ಯಗಳನ್ನು ಖಂಡಿಸುತ್ತೇವೆ’, ‘ಧಾರ್ಮಿಕ ಸ್ವಾತಂತ್ರ್ಯ ನಮ್ಮ ಹಕ್ಕು’ ಎಂಬ ಬರಹಗಳಿದ್ದ ಫಲಕಗಳನ್ನು ಪ್ರದರ್ಶಿಸಿದರು.

ADVERTISEMENT

‘ನೀತಿಗೆಟ್ಟ ಸರ್ಕಾರಕ್ಕೆ ಧಿಕ್ಕಾರ’, ‘ಡೌನ್‌ ಡೌನ್‌ ಬಿಜೆಪಿ’, ‘ಆರ್‌ಎಸ್‌ಎಸ್‌ ತೊಲಗಲಿ’ ಎಂಬ ಘೋಷಣೆಗಳೂ ಪ್ರತಿಧ್ವನಿಸಿದವು. ‘ಮಾನವರಾಗೋಣ ನಾವು ಮಾನವರಾಗೋಣ’ ಸೇರಿದಂತೆ ಹಲವು ಹೋರಾಟದ ಗೀತೆಗಳು, ಮತಾಂತರ ಆಗುವ ಹಾಗೂ ಧರ್ಮವನ್ನು ನಿರಾಕರಿಸುವ ಹಕ್ಕು ಬೇಕು ಎಂಬ ಒತ್ತಾಯಗಳೂ ಕೇಳಿ ಬಂದವು.

‘ಈ ಮಸೂದೆಯಿಂದ ಕ್ರೈಸ್ತರ ಖಾಸಗಿ ಬದುಕಿಗೆ ಧಕ್ಕೆಯಾಗಲಿದೆ. ಶೋಷಿತರು, ಬಡವರಿಗೆ ದಾನನೀಡಲು ಅಡ್ಡಿ ಆಗಲಿದೆ. ಹೆಣ್ಣು ಮಕ್ಕಳು ಇಷ್ಟಪಟ್ಟವರನ್ನು ಮದುವೆಯಾಗುವ ಅವಕಾಶ ಕಳೆದುಕೊಳ್ಳಲಿದ್ದಾರೆ. ಬಡವರ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುವರು‘ ಎಂದು ಬೆಂಗಳೂರಿನ ಆರ್ಚ್ ಬಿಷಪ್ ಪೀಟರ್‌ ಮಚಾಡೊ ಹೇಳಿದರು.

‘ಬಲವಂತದ ಮತಾಂತರಕ್ಕೆ ನಮ್ಮ ವಿರೋಧವೂ ಇದೆ. ಅಂತಹ ಪ್ರಕರಣಗಳು ಗಮನಕ್ಕೆ ಬಂದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಮ್ಮ ಅಭ್ಯಂತರವಿಲ್ಲ. ಮತಾಂತರ ನಿಷೇಧಕ್ಕೆ ಸಂವಿಧಾನದಲ್ಲಿ ಹಲವು ನಿಯಮಗಳಿವೆ.

ಹೀಗಿರುವಾಗ ಮತ್ತೊಂದು ಮಸೂದೆ ಮಂಡಿಸುವ ಅಗತ್ಯವಾದರೂ ಏನು’ ಎಂದು ಪ್ರಶ್ನಿಸಿದರು.

‘ಕ್ರೈಸ್ತರ ಮೇಲಿನ ದಾಳಿ ತಡೆಯಲಿ’
‘ರಾಜ್ಯ ಸರ್ಕಾರವು ಮತಾಂತರ ನಿಷೇಧ ಮಸೂದೆ ಜಾರಿಗೊಳಿಸುವುದನ್ನು ಬಿಟ್ಟು ಕ್ರೈಸ್ತರ ಮೇಲೆ ನಡೆಯುತ್ತಿರುವ ದಾಳಿಗಳನ್ನು ತಡೆಯಲು ಸರ್ಕಾರ ಪ್ರಯತ್ನಿಸಲಿ’ ಎಂದು ಪಿಯುಸಿಎಲ್‌ ರಾಜ್ಯ ಘಟಕದ ಅಧ್ಯಕ್ಷ ವೈ.ಜೆ.ರಾಜೇಂದ್ರ ಆಗ್ರಹಿಸಿದರು.

‘ಒಂದು ಧರ್ಮವನ್ನು ಅಪರಾಧಿಯಂತೆ ಬಿಂಬಿಸಲು ಹೊರಟಿರುವುದು ಸರಿಯಲ್ಲ. ಈ ಮಸೂದೆಯು ಕಾಯ್ದೆಯಾಗಿ ಜಾರಿಗೊಂಡರೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುತ್ತದೆ. ಅದನ್ನು ಹಿಂಪಡೆಯುವವರೆಗೂ ಹೋರಾಟ ಮುಂದುವರಿಸುತ್ತೇವೆ’ ಎಂದರು.

ಪ್ರತಿಭಟನೆಯಲ್ಲಿ ಕೇಳಿಬಂದ ಒತ್ತಾಯಗಳು

*ರಾಜ್ಯದಲ್ಲಿ ಕ್ರೈಸ್ತರು ಭಯದ ಸ್ಥಿತಿಯಲ್ಲಿದ್ದಾರೆ. ಅವರಿಗೆ ರಕ್ಷಣೆ ನೀಡಬೇಕು

* ಕ್ರೈಸ್ತರ ಮೇಲೆ ಹಿಂದೂಪರ ಸಂಘಟನೆಗಳ ಮತೀಯ ಗೂಂಡಾಗಿರಿ ನಿಲ್ಲಬೇಕು

* ಬಲವಂತದ ಮತಾಂತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು

*ಕ್ರೈಸ್ತರ ಮೇಲೆ ಹಲ್ಲೆ, ಬೆದರಿಕೆ, ಚರ್ಚ್‌ಗಳ ಮೇಲಿನ ದಾಳಿ ತಡೆಯಬೇಕು

* ಸುಳ್ಳು ಪ್ರಕರಣ ದಾಖಲಿಸುವುದನ್ನು ನಿಲ್ಲಿಸಬೇಕು

*
ಹಿಂದೂ ಧರ್ಮದಲ್ಲಿರುವ ತಾರತಮ್ಯ ಜನರನ್ನು ಮತಾಂತರಗೊಳ್ಳಲು ಪ್ರೇರೇಪಿಸುತ್ತಿದೆ. ಸರ್ಕಾರದ ಏಕಪಕ್ಷೀಯ ನಿರ್ಧಾರ ಖಂಡನೀಯ.
-ಸಿ.ಎಸ್‌.ದ್ವಾರಕಾನಾಥ್‌, ಕಾಂಗ್ರೆಸ್‌ ಮುಖಂಡ.

*
ಈ ಮಸೂದೆಯ ಮೂಲಕ ನಿರ್ದಿಷ್ಟ ಧರ್ಮದ ಜೊತೆಗೆ, ಮಹಿಳೆಯರು ಹಾಗೂ ದಲಿತರ ಮೇಲಿನ ದೌರ್ಜನ್ಯಗಳನ್ನು ಸರ್ಕಾರ ತಡೆಯಲಿ.
-ಗೌರಮ್ಮ, ಜನವಾದಿ ಮಹಿಳಾ ಸಂಘಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.