ADVERTISEMENT

ಪ್ರತ್ಯೇಕ ನಿಗಮಕ್ಕಾಗಿ ಹಡಪದ ಸಮುದಾಯದವರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 18:48 IST
Last Updated 17 ಡಿಸೆಂಬರ್ 2019, 18:48 IST
ಅಖಿಲ ಕರ್ನಾಟಕ ಹಡಪದ (ಕ್ಷೌರಿಕ) ಸಮಾಜ ಯುವಕ ಸಂಘದ ನೇತೃತ್ವದಲ್ಲಿ ಸಮಾಜದವರು ನಗರದ ಪುರಭವನ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ
ಅಖಿಲ ಕರ್ನಾಟಕ ಹಡಪದ (ಕ್ಷೌರಿಕ) ಸಮಾಜ ಯುವಕ ಸಂಘದ ನೇತೃತ್ವದಲ್ಲಿ ಸಮಾಜದವರು ನಗರದ ಪುರಭವನ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹಡಪದ (ಕ್ಷೌರಿಕ) ಸಮಾಜದ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಪ್ರತ್ಯೇಕ ನಿಗಮ ಸ್ಥಾಪಿಸಬೇಕು’ ಎಂದು ಒತ್ತಾಯಿಸಿ ಸಮಾಜದವರು ನಗರದ ಪುರಭವನ ಎದುರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.

ಅಖಿಲ ಕರ್ನಾಟಕ ಹಡಪದ (ಕ್ಷೌರಿಕ) ಸಮಾಜ ಯುವಕ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಹಲವು ಜಿಲ್ಲೆಗಳ ಮುಖಂಡರು ಸೇರಿ 100ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

‘ರಾಜ್ಯದಲ್ಲಿ ಸುಮಾರು ಹಡಪದ ಸಮಾಜಕ್ಕೆ ಸೇರಿದ 25 ಲಕ್ಷ ಜನರಿದ್ದಾರೆ. ಅವರೆಲ್ಲರೂ ಸರ್ವ ಜನರಿಗೂ ಸಮಾನವಾಗಿ ಸೇವೆ ನೀಡುತ್ತಿದ್ದಾರೆ. ನಿಜಶರಣ ಹಡಪದ ಅಪ್ಪಣ್ಣನವರ ವಂಶಸ್ಥರಾದ ಸಮಾಜವು ಇಂದಿಗೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ’ ಎಂದು ಪ್ರತಿಭಟನಾಕಾರರು ಹೇಳಿದರು.

ADVERTISEMENT

‘ಸಮಾಜದ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಜನಪ್ರತಿನಿಧಿಗಳು ಹಾಗೂ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಇನ್ನಾದರೂ ಎಚ್ಚೆತ್ತು ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಬೇಡಿಕೆ ಈಡೇರಿಸಬೇಕು’ ಎಂದು ಆಗ್ರಹಿಸಿದರು.

‘ಹಡಪದ ಸಮಾಜದ ಬಗೆಗಿನ ನಿಷೇಧಿತ ಪದವನ್ನು ಬಳಕೆ ಮಾಡುವವರ ವಿರುದ್ಧ ಜಾತಿ ನಿಂದನೆ ಕಾನೂನು ಜಾರಿ ಮಾಡಬೇಕು. ಹಡಪದ ಅಪ್ಪಣ್ಣ ಅವರ ಜನ್ಮಸ್ಥಳವನ್ನು ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಿ ಅಭಿವೃದ್ಧಿಪಡಿಸಬೇಕು. ಶೈಕ್ಷಣಿಕ ಸಂಸ್ಥೆ ಪ್ರಾರಂಭಿಸಲು ಬೆಂಗಳೂರಿನಲ್ಲಿ 5 ಎಕರೆ ಜಾಗ ಮಂಜೂರು ಮಾಡಬೇಕು. ಹಳ್ಳಿಗಳಲ್ಲಿ ಕ್ಷೌರಿಕ ಕುಟೀರ ನಿರ್ಮಾಣ ಮಾಡಬೇಕು. ಕ್ಷೌರಿಕ ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.