ADVERTISEMENT

ಪಿಎಸ್‌ಐ: 20 ಕೇಂದ್ರಗಳಲ್ಲಿ ಅಕ್ರಮ, ಡಿವೈಎಸ್ಪಿ, ಸಿಪಿಐ ಸೇರಿ ಆರು ಮಂದಿ ಬಂಧನ

ಇನ್ನಷ್ಟು ಅಧಿಕಾರಿಗಳಿಗೆ ನೋಟಿಸ್?

​ಪ್ರಜಾವಾಣಿ ವಾರ್ತೆ
Published 5 ಮೇ 2022, 19:32 IST
Last Updated 5 ಮೇ 2022, 19:32 IST
ಅಮ್ರಿತ್ ಪೌಲ್
ಅಮ್ರಿತ್ ಪೌಲ್   

ಬೆಂಗಳೂರು/ಕಲಬುರಗಿ: ಪಿಎಸ್‌ಐ ನೇಮಕಾತಿ ಅಕ್ರಮದ ಸಂಬಂಧ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು, ರಾಜಧಾನಿ ಬೆಂಗಳೂರಿನ 20 ಕೇಂದ್ರಗಳಲ್ಲಿ ಅಕ್ರಮ ನಡೆದಿರುವುದನ್ನು ಪತ್ತೆ ಮಾಡಿದ್ದಾರೆ. ಈ ಮಧ್ಯೆಯೇ ಡಿವೈಎಸ್ಪಿ ಹಾಗೂ ಸಿಪಿಐ ಸೇರಿದಂತೆ ಆರು ಮಂದಿಯನ್ನು ಗುರುವಾರ ಬಂಧಿಸಲಾಗಿದೆ.

‘ಕಲಬುರ್ಗಿ ಚೌಕ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ರಾಯಚೂರು ಜಿಲ್ಲೆಯ ಲಿಂಗಸುಗೂರು ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಕಲಬುರಗಿ ಬೆರಳಚ್ಚು ವಿಭಾಗದ ಸಿಪಿಐ ಆನಂದ ವಿಜಯಕುಮಾರ ಮೇತ್ರಿ ಹಾಗೂ ಬೆಂಗಳೂರು ಹೈಗ್ರೌಂಡ್ಸ್ ಠಾಣೆ ಪ್ರಕರಣದಲ್ಲಿ ಅಭ್ಯರ್ಥಿಗಳಾದ ಸಿ.ಎಸ್. ನಾಗೇಶ್‌ ಗೌಡ, ಜಿ.ಸಿ. ರಾಘವೇಂದ್ರ, ಸೋಮನಾಥ್ ಮಲ್ಲಿಕಾರ್ಜುನಯ್ಯ ಹಿರೇಮಠ ಹಾಗೂ ಜಿ.ಸಿ. ರಘುವೀರ್ ಅವರನ್ನು ಬಂಧಿಸಲಾಗಿದೆ. ಈ ಮೂಲಕ ಎರಡೂ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 47ಕ್ಕೆ ಏರಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಬಂಧಿತ ಆನಂದ ಮೇತ್ರಿ, ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಪಡನೂರ ಗ್ರಾಮದವರು. 2009ನೇ ಸಾಲಿನಲ್ಲಿ ಬೆರಳಚ್ಚು ವಿಭಾಗದ ಪಿಎಸ್‍ಐ ಆಗಿ ನೇಮಕಗೊಂಡಿದ್ದರು. ಇನ್‌ಸ್ಪೆಕ್ಟರ್‌ ಹುದ್ದೆಗೆ ಪದೋನ್ನತಿ ಹೊಂದಿ, 12 ವರ್ಷಗಳಿಂದ ಕಲಬುರಗಿಯಲ್ಲಿ ಕೆಲಸ ಮಾಡುತ್ತಿದ್ದರು’ ಎಂದೂ ಮೂಲಗಳು ತಿಳಿಸಿವೆ.

ADVERTISEMENT

ಕೇಂದ್ರದ ಸಿಬ್ಬಂದಿಗೆ ನೋಟಿಸ್: ಅಕ್ರಮ ನಡೆದಿರುವ ಬೆಂಗಳೂರಿನ 20 ಕೇಂದ್ರಗಳಲ್ಲಿ ಕೆಲಸ ಮಾಡಿದ್ದ ಸಿಬ್ಬಂದಿ ಹಾಗೂ ಭದ್ರತೆ ನೀಡಿದ್ದ ಪೊಲೀಸರಿಗೆ ನೋಟಿಸ್‌ ನೀಡಲು ಸಿಐಡಿ ತಯಾರಿ ನಡೆಸಿದೆ.

‘ಕೇಂದ್ರದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಕೇಂದ್ರದಲ್ಲಿ ಕೆಲಸ ಮಾಡಿದ್ದ ಸಿಬ್ಬಂದಿ, ಮೇಲ್ವಿಚಾರಕರು ಹಾಗೂ ಭದ್ರತೆ ಕರ್ತವ್ಯದಲ್ಲಿದ್ದ ಪೊಲೀಸರ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಅವರೆಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿದೆ. ಪರೀಕ್ಷೆ ದಿನದಂದು ಏನಾಯಿತು? ಎಂಬುದನ್ನು ತಿಳಿಯಬೇಕಿದೆ’ ಎಂದೂ ಮೂಲಗಳು ವಿವರಿಸಿವೆ.

10ನೇ ರ‍್ಯಾಂಕ್‌ ಪಡೆದಿದ್ದ ಕಾನ್‌ಸ್ಟೆಬಲ್: ‘ನೆಲಮಂಗಲ ಸಂಚಾರ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿದ್ದ ನಾಗೇಶ್‌ ಗೌಡ, 545 ಪಿಎಸ್‌ಐ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 10ನೇ ರ‍್ಯಾಂಕ್ ಪಡೆದಿದ್ದ. ಈತನ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾ ಗಿದ್ದ ಪ್ರಕರಣದಲ್ಲಿ ಆರೋಪಿ ಆಗಿದ್ದ ನಾಗೇಶ್, ಬಂಧನ ಭೀತಿಯಲ್ಲಿ ತಲೆಮರೆ ಸಿಕೊಂಡಿದ್ದ. ನೋಟಿಸ್ ನೀಡಲಾಗಿತ್ತು. ವಿಚಾರಣೆಗೆ ಬಂದಿದ್ದಾಗಲೇ ಈತನನ್ನು ಬಂಧಿಸಲಾಗಿದೆ’ ಎಂದರು.

‘ಕುಣಿಗಲ್ ತಾಲ್ಲೂಕಿನ ಚಿಕ್ಕಮಾವತ್ತೂರಿನ ನಾಗೇಶ್‌, ಪತ್ರಿಕೆ–1ರಲ್ಲಿ (ಪ್ರಬಂಧ, ಭಾಷಾಂತರ, ಸಾರಾಂಶ ಬರಹ) 29.5 ಅಂಕ ಹಾಗೂ ಪತ್ರಿಕೆ –2ರಲ್ಲಿ (ಸಾಮಾನ್ಯ ಅಧ್ಯಯನ) 127.875 ಅಂಕ ಪಡೆದಿದ್ದ’.

‘ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 62ನೇ ರ‍್ಯಾಂಕ್ ಪಡೆದಿದ್ದ ಜಿ.ಸಿ.ರಾಘವೇಂದ್ರ, ಒಎಂಆರ್ ತಿದ್ದಿ ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಗೊತ್ತಾಗಿತ್ತು. ಈತನೂ ಹೈಗ್ರೌಂಡ್ಸ್ ಠಾಣೆ ಪ್ರಕರಣದ ಆರೋಪಿ’ ಎಂದೂ ಸಿಐಡಿ ಮೂಲಗಳು ಹೇಳಿವೆ.

ಎಡಿಜಿಪಿ ಅಮ್ರಿತ್ ಪೌಲ್‌ಗೆ ನೋಟಿಸ್ ?

ಪಿಎಸ್‌ಐ ನೇಮಕಾತಿ ಅಕ್ರಮ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಪ್ರಕರಣ ದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳನ್ನು ಸಿಐಡಿ ಪೊಲೀಸರು ಬಂಧಿಸುತ್ತಿದ್ದಾರೆ. ನೇಮಕಾತಿ ವಿಭಾಗದ ಅಧಿಕಾರಿಗಳೂ ಪೊಲೀಸರನ್ನು ಬಳಸಿಕೊಂಡು ವ್ಯವಸ್ಥಿತವಾಗಿ ಅಕ್ರಮ ನಡೆಸಿರುವ ಶಂಕೆ ಸಿಐಡಿಗೆ ಬಂದಿದೆ.

ನೇಮಕಾತಿ ವಿಭಾಗದ ಮೇಲೆ ಕಣ್ಣಿಟ್ಟಿರುವ ಸಿಐಡಿ, ಮಾಹಿತಿ ಕಲೆಹಾಕುತ್ತಿದೆ. ನೇಮಕಾತಿ ವಿಭಾಗದ ಎಡಿಜಿಪಿ ಆಗಿ ಕೆಲಸ ಮಾಡಿದ್ದ ಅಮ್ರಿತ್ ಪೌಲ್‌ ಅವರಿಗೂ ನೋಟಿಸ್ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ಗೊತ್ತಾಗಿದೆ.

‘ಅಮ್ರಿತ್ ಪೌಲ್ ಅಧೀನದಲ್ಲಿ ಕೆಲಸ ಮಾಡಿದ್ದ ಡಿವೈಎಸ್ಪಿ ಶಾಂತಕುಮಾರ್ ಹಾಗೂ ಇತರೆ ಸಿಬ್ಬಂದಿ ಅಕ್ರಮದಲ್ಲಿ ಭಾಗಿಯಾಗಿರುವ ಅನುಮಾನವಿದೆ. ಆದರೆ, ಪುರಾವೆಗಳು ಸಿಕ್ಕಿಲ್ಲ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಗೃಹ ಇಲಾಖೆಗೆ ಮಾಹಿತಿ ನೀಡಿ, ಎಲ್ಲರನ್ನೂ ವಿಚಾರಣೆ ನಡೆಸಬೇಕಿದೆ’ ಎಂದೂ ಮೂಲಗಳು ಹೇಳಿವೆ.

‘ಕಲಬುರಗಿಯಲ್ಲಿ ಬಂಧಿಸಲಾಗಿರುವ ಆರೋಪಿಗಳಿಗೂ ಎಡಿಜಿಪಿ ಅಮ್ರಿತ್ ಪೌಲ್ ಅವರಿಗೂ ಒಡನಾಟವಿರುವ ಶಂಕೆಯೂ ಇದೆ’ ಎಂದೂ ತಿಳಿಸಿವೆ.

‘ಸಚಿವರ ಸಂಬಂಧಿ‘

‘ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದ ಕಾನ್‌ಸ್ಟೆಬಲ್‌ ಸಿ.ಎಸ್. ನಾಗೇಶ್‌ ಗೌಡ, ಸಚಿವ ಸಿ.ಎನ್‌. ಅಶ್ವತ್ಥನಾರಾಯಣ ಅವರ ಸಂಬಂಧಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೂರಿದ್ದರು. ಇದೀಗ ನಾಗೇಶ್ ಗೌಡ ಬಂಧನವಾಗಿದ್ದು, ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವುದಾಗಿ ಸಿಐಡಿ ಮೂಲಗಳು ಹೇಳಿವೆ.

ಸಿಐಡಿ ಕಚೇರಿಯಲ್ಲಿ ಬಂಧನ:

ರಾಮನಗರ: ಕುಂಬಳಗೋಡು ಠಾಣೆಯಲ್ಲಿ ಕಾನ್‌ಸ್ಟೆಬಲ್‌ ಆಗಿದ್ದ ಸೋಮನಾಥ್ ಹಿರೇಮಠ ಅವರನ್ನು ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಬಂಧಿಸಲಾಗಿದೆ.

ವಿಜಯಪುರ ಜಿಲ್ಲೆಯ ಸೋಮನಾಥ್‌, ಎರಡು ವರ್ಷಗಳಿಂದ ಕುಂಬಳಗೋಡು ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇಲಾಖೆಗೆ ಸೇರುವ ಮುನ್ನ ಉಪನ್ಯಾಸಕರಾಗಿ ಕೆಲಸ ಮಾಡಿದ್ದರು.

ಪಿಎಸ್‌ಐ ನೇಮಕಾತಿಗಾಗಿ ಲಿಖಿತ ಪರೀಕ್ಷೆ ಬರೆದಿದ್ದ ಸೋಮನಾಥ್, ಪತ್ರಿಕೆ –1ರಲ್ಲಿ 28.5 ಅಂಕ ಹಾಗೂ ಪತ್ರಿಕೆ–2ರಲ್ಲಿ 122.25 ಅಂಕ ಪಡೆದಿದ್ದರು. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 20ನೇ ರ‍್ಯಾಂಕ್ ಗಿಟ್ಟಿಸಿಕೊಂಡಿದ್ದರು. ಇವರ ಒಎಂಆರ್ ಪ್ರತಿಗಳನ್ನು ಗಮನಿಸಿದಾಗ ವ್ಯತ್ಯಾಸ ಕಂಡುಬಂದಿತ್ತು. ಹೀಗಾಗಿ, ಇವರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಸಿಐಡಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು.

ರಾಮನಗರ ಜಿಲ್ಲಾ ಎಸ್ಪಿ ಸಂತೋಷ್ ಬಾಬು ಎದುರು ಸೋಮನಾಥ್ ವಿಚಾರಣೆಗೆ ಹಾಜರಾಗಿದ್ದರು. ನಂತರ, ವಿಚಾರಣೆಗೆಂದು ಸಿಐಡಿ ಕಚೇರಿಗೆ ತೆರಳಿದ್ದಾಗ ಅವರನ್ನು ಬಂಧಿಸಿರುವುದಾಗಿ ಮೂಲಗಳು ಹೇಳಿವೆ.

‘ಪಿಎಸ್‌ಐ’ ಸಮವಸ್ತ್ರ: ಕಾನ್‌ಸ್ಟೆಬಲ್ ಅಮಾನತು:

ಪಿಎಸ್‌ಐ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 27ನೇ ರ‍್ಯಾಂಕ್‌ ಪಡೆಯುತ್ತಿದ್ದಂತೆ ಎರಡು ಸ್ಟಾರ್ ಸಮೇತ ಸಮವಸ್ತ್ರ ಧರಿಸಿದ್ದ ಆರೋಪದಡಿ ಬೆಂಗಳೂರಿನ ವಿವೇಕನಗರ ಠಾಣೆ ಕಾನ್‌ಸ್ಟೆಬಲ್ ಬಸನಗೌಡ ಟಿ. ಕರೇಗೌಡರ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಪಿಎಸ್‌ಐ ನೇಮಕಾತಿ ಆದೇಶಕ್ಕೂ ಮುನ್ನವೇ ಬಸನಗೌಡ, ಸಮವಸ್ತ್ರ ಧರಿಸಿ ತಮ್ಮೂರಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ್ದ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್, ಕಾನ್‌ಸ್ಟೆಬಲ್ ಬಸನಗೌಡ ಅವರನ್ನು ಅಮಾನತು ಮಾಡಿದ್ದಾರೆ.

ಅಕ್ರಮದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಬಸನಗೌಡ ಅವರನ್ನೂ ವಿಚಾರಣೆ ಮಾಡಿದ್ದರು. ಒಎಂಆರ್ ಪ್ರತಿ ಹಾಗೂ ಇತರೆ ದಾಖಲೆಗಳನ್ನು ಪಡೆದಿದ್ದರು. ವಿಚಾರಣೆ ಎದುರಿಸಿದ್ದ ಬಸನಗೌಡ, ನಂತರ ಕರ್ತವ್ಯಕ್ಕೆ ಹಾಜರಾಗಿದ್ದರು.

ನಾಲ್ವರಿಂದ ₹ 2 ಕೋಟಿ ಸಂಗ್ರಹ ?:

ಕಲಬುರಗಿ: ‘ಅಕ್ರಮಕ್ಕೆ ಅನುಕೂಲ ಕಲ್ಪಿಸುವುದಕ್ಕಾಗಿ ರುದ್ರಗೌಡ ಹಾಗೂ ಸಿಪಿಐ ಸೇರಿಕೊಂಡು, ನಾಲ್ವರು ಅಭ್ಯರ್ಥಿಗಳಿಂದ ₹ 2 ಕೋಟಿ ಪಡೆದಿದ್ದರು. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು ಬಂದ ತಕ್ಷಣ ಸಿಪಿಐ ಕೈಗೆ ₹ 2 ಕೋಟಿ ಬಂದಿತ್ತು. ಅದರಲ್ಲಿ ರುದ್ರಗೌಡಗೆ ₹ 25 ಲಕ್ಷ ಮಾತ್ರ ನೀಡಲಾಗಿತ್ತು. ಉಳಿದ ₹ 75 ಲಕ್ಷ ವಿಚಾರವಾಗಿ ರುದ್ರಗೌಡ ಹಾಗೂ ಸಿಪಿಐ ನಡುವೆ ಮುಸುಕಿನ ಗುದ್ದಾಟ ಇತ್ತು’ ಎಂದು ಮೂಲಗಳು ಹೇಳಿವೆ.

ಪ್ರಕರಣದಲ್ಲಿ ಜಿಲ್ಲೆಯ ಬಿಜೆಪಿ ಮುಖಂಡರೊಬ್ಬರ ಹೆಸರು ಕೇಳಿಬಂದಿದೆ. ನಾಲ್ವರು ಅಭ್ಯರ್ಥಿಗಳನ್ನು ಅವರೇ ರುದ್ರಗೌಡನಿಗೆ ಪರಿಚಯ ಮಾಡಿಸಿದ್ದರೆಂಬು ಗೊತ್ತಾಗಿದೆ.

ದೈಹಿಕ ಸಹಿಷ್ಣುತಾ ಪರೀಕ್ಷೆಯಿಂದ ಹೊರಕ್ಕೆ: ಸದ್ಯ ಬಂಧಿತರಾದ ಆನಂದ ಮೇತ್ರಿ ಅವರಿಗೆ ‘ಕೆಎಸ್‌ಆರ್‌ಪಿ ವಿಶೇಷ ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿಗೆ ದೈಹಿಕ ಪರೀಕ್ಷೆ’ ನಡೆಸುವ ಜವಾಬ್ದಾರಿ ಹೊರಿಸಲಾಗಿತ್ತು. ಎರಡು ದಿನಗಳ ಹಿಂದೆ ನಡೆದ 70 ಹುದ್ದೆಗಳ ನೇಮಕಾತಿಗೆ ಓಟದ ಉಸ್ತುವಾರಿ ವಹಿಸಲಾಗಿತ್ತು. ಆದರೆ, ಪಿಎಸ್‌ಐ ನೇಮಕಾತಿಯ ಅಕ್ರಮದಲ್ಲಿ ಭಾಗಿಯಾದ ಆರೋಪ ಕೇಳಿಬಂದ ತಕ್ಷಣ; ಹಿರಿಯ ಅಧಿಕಾರಿಗಳು ಅವರನ್ನು ಉಸ್ತುವಾರಿಯಿಂದ ಹೊರಗಿಟ್ಟಿದ್ದರು.

‘ಮೇತ್ರಿ ಅವರನ್ನು ಪೊಲೀಸ್‌ ಠಾಣೆ ಅಥವಾ ಅವರ ಮನೆಯಲ್ಲಿ ವಶಕ್ಕೆ ತೆಗೆದುಕೊಳ್ಳಬೇಡಿ. ಹೊರಗಡೆ ಎಲ್ಲಿಯಾದರೂ ಹಿಡಿಯಿರಿ’ ಎಂದು ಹಿರಿಯ ಅಧಿಕಾರಿಯೊಬ್ಬರು ಸಿಐಡಿ ತಂಡಕ್ಕೆ ನಿರ್ದೇಶನ ನೀಡಿದ್ದರು. ಪೊಲೀಸ್‌ ಸಿಬ್ಬಂದಿ ಹಾಗೂ ಕುಟುಂಬದವರಿಗೆ ಮುಜುಗರ ಮಾಡುವುದು ಬೇಡ ಎಂಬ ಉದ್ದೇಶದಿಂದ ಹೀಗೆ ಮಾಡಿದ್ದಾಗಿ ಮೂಲಗಳು ಹೇಳಿವೆ.

₹ 10 ಲಕ್ಷ ಪ‍ಡೆದ ಡಿವೈಎಸ್ಪಿ: ಪರೀಕ್ಷೆಯಲ್ಲಿ ನಡೆದ ಅಕ್ರಮದ ಮಾಹಿತಿ ತಿಳಿದುಕೊಂಡ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಅವರು, ಮೂವರು ಪ್ರಮುಖ ಆರೋಪಿಗಳನ್ನು ‘ಬ್ಲ್ಯಾಕ್‌ಮೇಲ್‌’ ಮಾಡಿ ₹ 10 ಲಕ್ಷ ಪಡೆದಿದ್ದಾರೆ ಎಂಬ ಆರೋಪವಿದೆ.

ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ, ಬ್ಲೂಟೂತ್‌ ಬಳಸಿ ಅಕ್ರಮ ನಡೆಸಿದ ರುದ್ರಗೌಡ ಡಿ. ಪಾಟೀಲ ಹಾಗೂ ಒಎಂಆರ್‌ ಶೀಟ್‌ ತಿದ್ದಿಸಿದ ಮಂಜುನಾಥ ಮೇಳಕುಂದಿ; ಈ ಮೂವರಿಗೂ ಡಿವೈಎಸ್ಪಿ ಬೆದರಿಕೆ ಹಾಕಿದ್ದರು. ‘ನಿಮ್ಮ ಅವ್ಯವಹಾರ ಎಲ್ಲ ನನಗೆ ಗೊತ್ತಿದೆ. ಸುಮ್ಮನಿರಬೇಕೆಂದರೆ ಇಂತಿಷ್ಟು ಹಣ ನೀಡಬೇಕು’ ಎಂದು ಕೇಳಿದ್ದಾಗಿ ಮೂಲಗಳು ತಿಳಿಸಿವೆ.

ನಿವೃತ್ತ ಡಿವೈಎಸ್ಪಿ ಮೊಬೈಲ್ ಜಪ್ತಿ: ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಡಿವೈಎಸ್ಪಿ ಒಬ್ಬರ ಎರಡು ಮೊಬೈಲ್‌ಗಳನ್ನು ಸಿಐಡಿ ಅಧಿಕಾರಿಗಳು ಸುಪರ್ದಿಗೆ ಪಡೆದಿದ್ದಾರೆ. ಅವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.