ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಸಚಿವ, ಮಾಜಿ ಸಿಎಂ ಮಗ ಭಾಗಿ: ಸಿಎಸ್‌ಗೆ ದೂರು

​ಪ್ರಜಾವಾಣಿ ವಾರ್ತೆ
Published 5 ಮೇ 2022, 5:17 IST
Last Updated 5 ಮೇ 2022, 5:17 IST
ಸಿಐಡಿ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದ ವಕೀಲರ ನಿಯೋಗ 
ಸಿಐಡಿ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದ ವಕೀಲರ ನಿಯೋಗ    

ಬೆಂಗಳೂರು:ಪಿಎಸ್‌ಐ ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮಗಳಲ್ಲಿ ಪ್ರಭಾವಿ ವ್ಯಕ್ತಿಗಳೂ ಭಾಗಿಯಾಗಿರುವ ಅನುಮಾನವಿದೆ. ಈ ದಿಕ್ಕಿನಲ್ಲೂ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ವಕೀಲರ ನಿಯೋಗವು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಿಐಡಿ ಡಿಜಿಪಿಗೆ ದೂರು ನೀಡಿದೆ.

ಎ.ಪಿ.ರಂಗನಾಥ್, ಕೆ.ಎನ್.ಜಗದೀಶ್ ಕುಮಾರ್, ಬಾಲನ್ ಹಾಗೂ ಇತರರಿದ್ದ ನಿಯೋಗವು ಸಿಐಡಿ ಕಚೇರಿಗೆ ತೆರಳಿ ಬುಧವಾರ ದೂರು ಸಲ್ಲಿಸಿತು.

‘545 ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಸುಮಾರು ₹500 ಕೋಟಿಯ ವ್ಯವಹಾರ ನಡೆದಿರುವ ಸಾಧ್ಯತೆ ಇದೆ. ಇದರಲ್ಲಿ ಪ್ರಭಾವಿಗಳಿಗೂ ಪಾಲು ಹೋಗಿದೆ. ಕೆಲವು ವ್ಯಕ್ತಿಗಳ ಹೆಸರು ಮುಖ್ಯವಾಗಿ ಕೇಳಿಬಂದಿದೆ. ಅವರೆಲ್ಲರಿಗೂ ನೋಟಿಸ್‌ ನೀಡಿ ವಿಚಾರಣೆ ನಡೆಸಬೇಕು’ ಎಂದು ವಕೀಲ ಎ.‍ಪಿ.ರಂಗನಾಥ್‌ ಆಗ್ರಹಿಸಿದರು.

ADVERTISEMENT

ಮಾಜಿ ಮುಖ್ಯಮಂತ್ರಿಯೊಬ್ಬರ ಮಗ, ನಂಬಿಕಸ್ತ ಮಧ್ಯವರ್ತಿಯೊಬ್ಬನ ಮೂಲಕ ಒಟ್ಟು 63 ಅಭ್ಯರ್ಥಿಗಳಿಂದ ಹಣ ಪಡೆದಿದ್ದಾರೆ. ಒಬ್ಬರಿಂದ ₹50 ಲಕ್ಷ, ಮತ್ತೊಬ್ಬರಿಂದ ₹70 ಲಕ್ಷ ಪಡೆದಿರುವುದು ಗೊತ್ತಾಗಿದೆ.ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೂ ಹಣ ಸಂದಾಯವಾಗಿದೆ ಎಂಬ ಸುದ್ದಿ ಇದೆ. ಸಚಿವರ ಸಹೋದರ ಸತೀಶ್‌ ‘ಹೊಂಬಾಳೆ ಕನ್‌ಸ್ಟ್ರಕ್ಷನ್‌’ ಹೆಸರಿನ ಕಂಪನಿ ನಡೆಸುತ್ತಿದ್ದಾರೆ. ಸತೀಶ್‌ ಮೂಲಕ ಅಭ್ಯರ್ಥಿಗಳು ಸಚಿವರಿಗೆ ಹಣ ನೀಡಿದ್ದಾರೆ ಎಂದು ಹೇಳಾಗುತ್ತಿದೆ. ಹೀಗಾಗಿ ಇಬ್ಬರಿಗೂ ನೋಟಿಸ್‌ ನೀಡಿ ವಿಚಾರಣೆಗೆ ಕರೆಸಬೇಕು’ ಎಂದು ದೂರಿನಲ್ಲಿ ಕೋರಲಾಗಿದೆ.

‘ಪೊಲೀಸ್‌ ನೇಮಕಾತಿ ವಿಭಾಗದ ಎಡಿಜಿ‍ಪಿ ಆಗಿದ್ದ ಅಮೃತ್‌ ಪಾಲ್‌ ಈ ಪ್ರಕರಣದ ಸೂತ್ರಧಾರಿ. ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಬಂಧಿಸಬೇಕು.ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮವೇ ಆಗಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ತನಿಖೆ ಪ್ರಗತಿಯಲ್ಲಿರುವಾಗಲೇ ಅವರು ಮಾಧ್ಯಮಗಳ ಎದುರು ಆ ರೀತಿ ಹೇಳಿರುವುದು ತಪ್ಪು. ಯಾವ ಆಧಾರದಲ್ಲಿ ಹಾಗೆ ಹೇಳಿದ್ದಾರೆ. ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ್ದೇಕೆ ಎಂಬುದರ ಕುರಿತು ವಿಚಾರಣೆ ನಡೆಸಬೇಕು’ ಎಂದು ಆಗ್ರಹಿಸಲಾಗಿದೆ.

‘ಸಿಐಡಿ ಎಸ್.ಪಿ.ರವಿ ಡಿ. ಚನ್ನಣ್ಣನವರ ಅವರು ಪ್ರಕರಣದ ಮುಖ್ಯಆರೋಪಿಯಾಗಿರುವ ದಿವ್ಯಾ ಹಾಗರಗಿ ಜೊತೆ ತೆಗೆಸಿಕೊಂಡಿರುವ ಭಾವಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇವರ ಭೇಟಿಯ ಹಿಂದಿನ ಉದ್ದೇಶ ಏನು ಎಂಬುದು ಗೊತ್ತಾಗಬೇಕು. ಹೀಗಾಗಿ ಅವರಿಗೂ ನೋಟಿಸ್‌ ನೀಡಿ ವಿಚಾರಣೆ ನಡೆಸಬೇಕು. ರವಿ ಚನ್ನಣ್ಣನವರ ಅವರ ಕುಟುಂಬದವರು ರಾಜ್ಯದ ವಿವಿಧೆಡೆ ಐಎಎಸ್‌–ಐಪಿಎಸ್‌ ತರಬೇತಿ ಕೇಂದ್ರಗಳನ್ನು ನಡೆಸುತ್ತಿದ್ದಾರೆ. ನೇಮಕಾತಿ ಹಗರಣಕ್ಕೂ ಅವರ ಕುಟುಂಬದ ಒಡೆತನದ ಕೇಂದ್ರಗಳಿಗೂ ಸಂಬಂಧವಿದೆ ಎಂದು ಹೇಳಲಾಗುತ್ತಿದೆ. ಈ ಕುರಿತೂ ತನಿಖೆಯಾಗಬೇಕು’ ಎಂದೂ ಒತ್ತಾಯಿಸಲಾಗಿದೆ.

‘ಡಿಕೆಶಿ ಭ್ರಷ್ಟಾಚಾರದ ಗ್ಯಾಂಗ್‌ ಲೀಡರ್‌’

ಬೆಂಗಳೂರು: ‘ಡಿ.ಕೆ. ಶಿವಕುಮಾರ್‌ ಜೈಲಿಗೆ ಹೋಗಿ ಬಂದಿರುವ ಆಸಾಮಿ, ಭ್ರಷ್ಟಾಚಾರದ ಗ್ಯಾಂಗ್‌ ಲೀಡರ್‌’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಹೇಳಿದರು.

ಕಾಂಗ್ರೆಸ್‌ ನಾಯಕರ ಅರೋಪಕ್ಕೆ ಬುಧವಾರ ಪ್ರತಿಕ್ರಿಯಿಸಿದ ಅವರು, ‘ನಾನು ಶಿವಕುಮಾರ್‌ ರೀತಿ ಜೀವನ ಮಾಡುತ್ತಿರುವವನಲ್ಲ. ನನ್ನ ಜೀವನ ತೆರೆದ ಪುಸ್ತಕದಂತಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶಿವಕುಮಾರ್‌ ಮಟ್ಟಕ್ಕೆ ಇಳಿಯಬಾರದಿತ್ತು’ ಎಂದರು.

ಶಿವಕುಮಾರ್‌, ಸಿದ್ದರಾಮಯ್ಯ, ಉಗ್ರಪ್ಪ ಸೇರಿ ಕಾಂಗ್ರೆಸ್ ನಾಯಕರು ನನ್ನ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಭ್ರಷ್ಟಾಚಾರದ ಮೂಲ. ಹಗರಣ ಮುಚ್ಚಿ ಹಾಕುವುದು ಅದರ ಸಂಸ್ಕೃತಿ ಎಂದು ಹೇಳಿದರು.

‘ಮಾಗಡಿ ತಾಲ್ಲೂಕಿನವರು ಪಿಎಸ್‌ಐ ಹುದ್ದೆಗೆ ನೇಮಕ ಆಗಬಾರದು ಎಂದು ಹೇಳಲಾಗದು. ದರ್ಶನ್‌ ಗೌಡ ಸೇರಿದಂತೆ ಗೌಡರೆಲ್ಲರೂ ನಮ್ಮ ನೆಂಟರೇ ಆಗಿದ್ದಾರೆ. ಈ ವಿಚಾರದಲ್ಲಿ ಆಧಾರರಹಿತ ಆರೋಪ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇನೆ’ ಎಂದರು.

‘ಪೊಲೀಸರಿಂದಲೇ ಅಕ್ರಮ ಬಯಲು’

ರಾಮನಗರ: ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್‌ವಿರುದ್ಧ ಬಿಜೆಪಿಯವರು ಮಾತನಾಡಿದ್ದರಿಂದ ಪೊಲೀಸ್ ಇಲಾಖೆಯವರೇ ಪಿಎಸ್ಐ ನೇಮಕಾತಿ ಹಗರಣವನ್ನು ಬಯಲಿಗೆ ಎಳೆದಿದ್ದಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ಚಂದ್ರು ಹತ್ಯೆ ಪ್ರಕರಣಕ್ಕೂ ಮತ್ತು ಪಿಎಸ್ಐ ಅಕ್ರಮ ನೇಮಕಾತಿ ಹಗರಣ ಬಯಲಿಗೆ ಬರುವುದಕ್ಕೂ ನೇರವಾದ ನಂಟಿದೆ. ಪೊಲೀಸ್ ಇಲಾಖೆ ಇದನ್ನು ಅಪಘಾತ ಎಂದು ಹೇಳಿತ್ತು. ಆದರೆ ಬಿಜೆಪಿ ನಾಯಕರು ಉರ್ದು ವಿಚಾರವಾಗಿ ಆದ ಗಲಾಟೆ ಎಂದು ಕತೆ ಕಟ್ಟಿದ್ದರು ಎಂದರು.

ಬಿಜೆಪಿ ವಕ್ತಾರರೊಬ್ಬರು ಕಮಲ್ ಪಂತ್‌ ವಿರುದ್ಧ ಆರೋಪ ಮಾಡಿದ್ದರು. ಅದೇ ವಕ್ತಾರರಿಗೆ ಕಲಬುರಗಿಯಲ್ಲಿ ಬಂಧನ ಆದ ಪಿಎಸ್‌ಐ ನೇಮಕಾತಿ ಹಗರಣದ ಆರೋಪಿಗಳ ಜೊತೆ ನಂಟು ಇತ್ತು. ಹೀಗಾಗಿ‌ ನಿಷ್ಠಾವಂತ ಅಧಿಕಾರಿಗೆ ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಮತ್ತು ಸರ್ಕಾರಕ್ಕೆ ಬುದ್ಧಿ ಕಲಿಸಲು ಪಂತ್‌ ಅಭಿಮಾನಿಗಳೇ ಇದನ್ನು ಬಯಲಿಗೆ ಎಳೆದರು ಎಂದು ವಿಶ್ಲೇಷಿಸಿದರು.

ಡಿವೈಎಸ್‌ಪಿ, ಪಿಐ ಅಮಾನತು

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಶಾಮೀಲಾದ ಆರೋಪದ ಮೇಲೆ ಕಲಬುರಗಿ ಬೆರಳಚ್ಚು ವಿಭಾಗದ ಡಿವೈಎಸ್‌ಪಿ ಆರ್‌.ಆರ್‌. ಹೊಸಮನಿ ಮತ್ತು ಮಹಿಳಾ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ದಿಲೀಪ್‌ ಸಾಗರ್‌ ಅವರನ್ನು ಬುಧವಾರ ಅಮಾನತು ಮಾಡಲಾಗಿದೆ.

ಪರೀಕ್ಷಾ ಅಕ್ರಮ ನಡೆದಿರುವ ಕಲಬುರಗಿಯ ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರದ ಉಸ್ತುವಾರಿಯಾಗಿ ಆರ್‌.ಆರ್‌. ಹೊಸಮನಿ ಮತ್ತು ಮೇಲ್ವಿಚಾರಕರಾಗಿ ದಿಲೀಪ್‌ ಸಾಗರ್‌ ಕಾರ್ಯನಿರ್ವಹಿಸಿದ್ದರು. ಈ ಇಬ್ಬರೂ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವುದು ಕಂಡುಬಂದಿರುವ ಕಾರಣದಿಂದ ಅಮಾನತು ಮಾಡಲಾಗಿದೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.

ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರದ ಉಸ್ತುವಾರಿಯಾಗಿ ಡಿವೈಎಸ್‌ಪಿ ಹುಲ್ಲೂರು ಅವರನ್ನು ನೇಮಿಸಲಾಗಿತ್ತು.ಸಂಬಂಧಿಕರೊಬ್ಬರು ನಿಧನರಾಗಿದ್ದಾರೆ ಎಂಬ ಕಾರಣ ನೀಡಿ ಪರೀಕ್ಷೆ ಆರಂಭವಾದ ಅರ್ಧ ಗಂಟೆಯಲ್ಲೇ ಹುಲ್ಲೂರು ಕರ್ತವ್ಯದಿಂದ ಬಿಡುಗಡೆಯಾಗಿದ್ದರು. ಬಳಿಕ ಹೊಸಮನಿ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಇಬ್ಬರೂ ಪೂರ್ವಯೋಜಿತವಾಗಿ ಅಕ್ರಮದಲ್ಲಿ ಭಾಗಿಯಾಗಿದ್ದರು. ಹುಲ್ಲೂರು ಇತ್ತೀಚೆಗಷ್ಟೇ ನಿವೃತ್ತರಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.