ADVERTISEMENT

ಪಿಎಸ್ಐ ನೇಮಕಾತಿ ಅಕ್ರಮ: ಚರ್ಚೆ ಆರಂಭಕ್ಕೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 16:09 IST
Last Updated 15 ಸೆಪ್ಟೆಂಬರ್ 2022, 16:09 IST
   

ಬೆಂಗಳೂರು: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಅಕ್ರಮದ ಕುರಿತು ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿ ಕಾಂಗ್ರೆಸ್ ಶಾಸಕರು ಸಲ್ಲಿಸಿದ್ದ ನೋಟಿಸ್‌ ಅನ್ನು ಪರಿವರ್ತಿಸಿದ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ನಿಯಮ 69ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ಪ್ರಕಟಿಸಿದರು.

ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಪಿಎಸ್‌ಐ ನೇಮಕಾತಿ ಹಗರಣ ಬಹಳ ಸದ್ದು ಮಾಡುತ್ತಿದೆ. ಈಗ ನಾವು ಹೇಗೆ ಮೌನವಾಗಿರಲು ಸಾಧ್ಯ. ಜನರು ಏನು ಭಾವಿಸುತ್ತಾರೆ? ನಿಲುವಳಿ ಸೂಚನೆ ಮಂಡಿಸಿ, ಚರ್ಚಿಸಲು ಅವಕಾಶ ನೀಡಬೇಕು’ ಎಂದರು.

‘ಹಳೆಯ ಪ್ರಕರಣವಾಗಿರುವುದು ಮತ್ತು ಇದಕ್ಕೆ ಸಂಬಂಧಿಸಿದ ವಿಷಯಗಳು ನ್ಯಾಯಾಲಯಗಳ ಮುಂದಿರುವುದರಿಂದ ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲ’ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ‘ಇಂತಹ ಪ್ರಕರಣಗಳ ಕುರಿತು ಹಿಂದೆ ಚರ್ಚೆಗೆ ಅವಕಾಶ ಕಲ್ಪಿಸಿದ ನಿದರ್ಶನಗಳಿವೆ’ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದರು. ಕಾಂಗ್ರೆಸ್‌– ಬಿಜೆಪಿ ಸದಸ್ಯರ ನಡುವೆ ಕೆಲಕಾಲ ಮಾತಿನ ಸಮರ ನಡೆಯಿತು. ನಿಯಮ–69ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ಸ್ಪೀಕರ್‌ ಪ್ರಕಟಿಸಿದರು.

ADVERTISEMENT

‘ಹಳೆಯ ಪ್ರಕರಣಗಳ ಬಗ್ಗೆಯೂ ಚರ್ಚೆಯಾಗಲಿ’ ಎಂದು ಮಾಧುಸ್ವಾಮಿ ಹೇಳಿದರು. ‘2006ರಿಂದ ಈವರೆಗಿನ ಎಲ್ಲ ನೇಮಕಾತಿಗಳ ಕುರಿತು ತನಿಖೆಗೆ ಆಯೋಗ ನೇಮಿಸಿ’ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.