ADVERTISEMENT

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ: ಸಾಕ್ಷ್ಯಾಧಾರ ಸಂಗ್ರಹ ಸಿಐಡಿಗೆ ಸವಾಲು

ಕಾರ್ಬನ್‌ ಕಾಪಿ ನಾಶ ಮಾಡಿದ ಮಂಜುನಾಥ ಮೇಳಕುಂದಿ

​ಪ್ರಜಾವಾಣಿ ವಾರ್ತೆ
Published 14 ಮೇ 2022, 1:07 IST
Last Updated 14 ಮೇ 2022, 1:07 IST
ಸಿಐಡಿ ಅಧಿಕಾರಿಗಳ ವಶದಲ್ಲಿ ವೈಜನಾಥ ರೇವೂರ
ಸಿಐಡಿ ಅಧಿಕಾರಿಗಳ ವಶದಲ್ಲಿ ವೈಜನಾಥ ರೇವೂರ   

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಬರೆದ ಕೆಲ ಅಭ್ಯರ್ಥಿಗಳ ಒಎಂಆರ್‌ ಶೀಟ್‌ನ ಕಾರ್ಬನ್‌ ಕಾಪಿಗಳನ್ನು, ಆರೋಪಿ ಮಂಜುನಾಥ ಮೇಳಕುಂದಿ ನಾಶಪಡಿಸಿದ್ದು, ಸಾಕ್ಷ್ಯಾಧಾರ ಸಂಗ್ರಹಿಸುವುದೇ ಸಿಐಡಿ ಅಧಿಕಾರಿಗಳಿಗೆ ಸವಾಲಾಗಿದೆ.

‘2021ರ ಅ. 3ರಂದು ನಡೆದಿದ್ದ 545 ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲೂ ಇದೇ ರೀತಿ ವ್ಯವಹಾರ ಕುದುರಿಸಿದ್ದ. ನೇಮಕಾತಿ ಆದೇಶ ಬರುವವರೆಗೂ ಅಭ್ಯರ್ಥಿಗಳ ಒಎಂಆರ್‌ ಶೀಟಿನ ಕಾರ್ಬನ್‌ ಕಾಪಿ ಹಾಗೂ ಕೆಲ ಶೈಕ್ಷಣಿಕ ದಾಖಲೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದ. ಅಕ್ರಮ ಹೊರಬೀಳುತ್ತಿದ್ದಂತೆಯೇ ಕಾರ್ಬನ್‌ ಕಾಪಿಗಳನ್ನು ಹರಿದು, ನಾಲೆಗೆ ಬಿಸಾಕಿದ’ ಎಂದು ಮೂಲಗಳು ತಿಳಿಸಿವೆ.

‘ಒಎಂಆರ್‌ ಶೀಟಿನಲ್ಲಿ ವ್ಯತ್ಯಾಸ ಕಂಡುಬಂದ ಮೂವರು ಅಭ್ಯರ್ಥಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಇವರೆಲ್ಲ ನಗರದ ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿನ ಕೇಂದ್ರದಲ್ಲೇ ಪರೀಕ್ಷೆ ಬರೆದವರು. ಆದರೆ, ರಾಜ್ಯದ ಬೇರೆ ಬೇರೆ ಪರೀಕ್ಷಾ ಕೇಂದ್ರಗಳಲ್ಲೂ ಮಂಜುನಾಥ ಮೇಳಕುಂದಿ ಇದೇ ರೀತಿಯ ಅಕ್ರಮ ಎಸಗಿದ ಸಾಧ್ಯತೆ ಯಿದ್ದು, ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ಅಲ್ಲದೇ, ಎಂ.ಎಸ್. ಇರಾನಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದ ಅಕ್ರಮ ಆರೋಪದಡಿ ಬಂಧಿತರಾದ ಅಭ್ಯರ್ಥಿ ಪ್ರಭು, ಅವರ ತಂದೆ ಶರಣಪ್ಪ, ಮಧ್ಯವರ್ತಿ ಚಂದ್ರಕಾಂತ ‌ಕುಲಕರ್ಣಿ ಅವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ADVERTISEMENT

ಮಂಜುನಾಥ ಮೇಳಕುಂದಿಯ ತಮ್ಮ ರವೀಂದ್ರ ಮೇಳಕುಂದಿ ಕೂಡ ಆರೋಪಿಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ. ಶಾಂತಿಬಾಯಿ ಕೂಡ ಸಿಕ್ಕಿಲ್ಲ.

ಡಿವೈಎಸ್‌ಪಿ ವೈಜನಾಥ ಕರೆತಂದು ಮಹಜರು
ಕಲಬುರಗಿ:
ಬ್ಲೂಟೂತ್‌ ಬಳಸಿ ನಡೆಸಿದ ಅಕ್ರಮಕ್ಕೆ ಸಂಬಂಧಿಸಿ ಬಂಧಿತ ಇಲ್ಲಿನ 6ನೇ ಕೆಎಸ್‌ಆರ್‌ಪಿ ಬಟಾಲಿಯನ್‌ನ ಸಹಾಯಕ ಕಮಾಂಡೆಂಟ್ (ಡಿವೈಎಸ್ಪಿ) ವೈಜನಾಥ ರೇವೂರಗೆ ಸಿಐಡಿ ಅಧಿಕಾರಿಗಳು ಶುಕ್ರವಾರ ಕೆಲ ಸ್ಥಳಗಳಿಗೆ ಕರೆದೊಯ್ದು ಮಹಜರು ನಡೆಸಿದರು.

ನಗರದ ಹೊರವಲಯದ ಉದನೂರ ಕ್ರಾಸ್‌ ಬಳಿ ಕರೆತಂದು ಸ್ಥಳದ ಮಹಜರು ಮಾಡಿಸಿದರು. ಪ್ರಮುಖ ಆರೋಪಿ ರುದ್ರಗೌಡ ಡಿ. ಪಾಟೀಲ, ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ ಸೇರಿ ಇದೇ ಸ್ಥಳದಲ್ಲಿ ‘ಹಣಕಾಸಿನ ಡೀಲ್‌’ ನಡೆಸಿದ್ದಾಗಿ ವೈಜನಾಥ ತಿಳಿಸಿದ್ದ’ ಎಂದು ಮೂಲಗಳು ತಿಳಿಸಿವೆ.

ಪತ್ನಿ ಜೈಲರ್‌; ಪತಿ ಕೈದಿ:ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣದಲ್ಲಿ ಬಂಧಿತ, ಇಲ್ಲಿನ ಕೆಎಸ್‌ಆರ್‌ಪಿ ಸಹಾಯಕ ಕಮಾಂಡೆಂಟ್‌ (ಡಿವೈಎಸ್ಪಿ) ವೈಜನಾಥ ಕಲ್ಯಾಣಿ ರೇವೂರಗೆ ಶುಕ್ರವಾರ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ವೈಜನಾಥ ಪತ್ನಿ ಸುನಂದಾ ಇದೇ ಕಾರಾಗೃಹದ ಜೈಲರ್‌ ಆಗಿದ್ದಾರೆ.

ಪೊಲೀಸ್‌ ವಾಹನದಲ್ಲಿ ಕರೆತಂದ ಸಿಐಡಿ ಅಧಿಕಾರಿಗಳು ಜೈಲಿನ ಮುಂದೆ ನಿಲ್ಲಿಸಿದ ಕೂಡಲೇ ಇಳಿದ ವೈಜನಾಥ, ಲಗುಬಗೆಯಿಂದ ಜೈಲಿನೊಳಗೆ ಧಾವಿಸಿದ. ಜೈಲು ಸಿಬ್ಬಂದಿ ತಡೆದು, ತಪಾಸಣೆ ಬಳಿಕ ಒಳಗೆ ಬಿಟ್ಟರು.

ಪತಿ ಜೈಲು ಸೇರಿದ್ದರಿಂದ ಸುನಂದಾ ಅವರಿಗೆ ತಾತ್ಕಾಲಿಕ ರಜೆ ನೀಡಲಾಗಿದೆ ಎಂದು ಕಾರಾಗೃಹ ಮೂಲಗಳು ತಿಳಿಸಿವೆ. ಸಿಐಡಿ ಕಸ್ಟಡಿ ಶುಕ್ರವಾರ (ಮೇ 13) ಮುಗಿದ ಕಾರಣ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. 3ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಸಹಾಯಕ ಸರ್ಕಾರಿ ಅಭಿಯೋಜಕ ಶಿವಶರಣಪ್ಪ ಹೋತಪೇಟ ಅವರು ಸಿಐಡಿ ಪರ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.