ADVERTISEMENT

ಪರೀಕ್ಷಾ ಕೇಂದ್ರಗಳತ್ತ ವಿದ್ಯಾರ್ಥಿಗಳು: ಇಂಗ್ಲಿಷ್ ಪರೀಕ್ಷೆ ಬರೆಯಲು ಕ್ಷಣಗಣನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 4:26 IST
Last Updated 18 ಜೂನ್ 2020, 4:26 IST
ಓದಿನಲ್ಲಿ ನಿರತರಾಗಿರುವ ವಿದ್ಯಾರ್ಥಿನಿಯರು –ಪ್ರಜಾವಾಣಿ ಚಿತ್ರ
ಓದಿನಲ್ಲಿ ನಿರತರಾಗಿರುವ ವಿದ್ಯಾರ್ಥಿನಿಯರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೊರೊನಾ ಲಾಕ್‌ಡೌನ್‌ನಿಂದಾಗಿ ಮುಂದೂಡಲಾಗಿದ್ದ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಜ್ಯದ ಎಲ್ಲೆಡೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳತ್ತ ಬರತೊಡಗಿದ್ದಾರೆ.

ಕೆಲವು ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಅಂತರ ಕಾಪಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಸಿಬ್ಬಂದಿ ವಿದ್ಯಾರ್ಥಿಗಳಿಗೆ ಅಂತರ ಕಾಪಾಡುವಂತೆ ಮನವೊಲಿಸುತ್ತಿದ್ದಾರೆ.

ಥರ್ಮಲ್ ಸ್ಕ್ರೀನಿಂಗ್ ನಡೆಸಿದ ಬಳಿಕವಷ್ಟೇ ಪರೀಕ್ಷಾ ಕೇಂದ್ರದೊಳಗೆ ತೆರಳಲು ಅವಕಾಶ ನೀಡಲಾಗುತ್ತಿದೆ. ಕೇರಳ, ಆಂಧ್ರ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾ ಗಡಿ ಭಾಗದಿಂದ ವಿದ್ಯಾರ್ಥಿಗಳು ಈಗಾಗಲೇ ವಿಶೇಷ ಪಾಸ್ ಪಡೆದು ರಾಜ್ಯದೊಳಗೆ ಬಂದಿದ್ದಾರೆ.

ADVERTISEMENT

ಪದವಿಪೂರ್ಣ ಶಿಕ್ಷಣ ಇಲಾಖೆಯು 2019-20ನೇ ಶೈಕ್ಷಣಿಕ ಸಾಲಿನ ಮಾರ್ಚ್-2020ರ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ದಿನಾಂಕ: 04-03-2020 ರಿಂದ 23-03-2020ರವರೆಗೆ ರಾಜ್ಯದ 1016 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲು ವೇಳಾಪಟ್ಟಿಯನ್ನು ನಿಗದಿಪಡಿಸಿ, ಒಟ್ಟು 38 ವಿಷಯಗಳ ಪರೀಕ್ಷೆಯನ್ನು ನಡೆಸಲಾಗಿತ್ತು. ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದಿನಾಂಕ: 23-03-2020 ರಂದು ನಿಗದಿಯಾಗಿದ್ದ ಆಂಗ್ಲಭಾಷಾ ಪರೀಕ್ಷೆಯನ್ನು ಮುಂದೂಡಲಾಗಿತ್ತು.

ಸ್ಯಾನಿಟೈಸರ್ ವ್ಯವಸ್ಥೆ:ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಹಾಗೂ ಹೆಚ್ಚುವರಿ ಬ್ಲಾಕ್ಗಳನ್ನು ಮತ್ತು ಕಟ್ಟಡದ ಎಲ್ಲಾ ಕೊಠಡಿಗಳನ್ನು ಸಾನಿಟೈಜರ್ ಮಾಡಿಸಲಾಗಿದೆ.

ಥರ್ಮಲ್ ಸ್ಕ್ಯಾನರ್‌ಗಳ ವ್ಯವಸ್ಥೆ:ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಪ್ರಾರಂಭವಾಗುವುದಕ್ಕಿಂತ ಪೂರ್ವದಲ್ಲಿ ಎಲ್ಲಾ ಮಕ್ಕಳನ್ನು ಥರ್ಮಲ್ ಸ್ಕ್ಯಾನರ್‌ಗಳನ್ನು 200 ವಿದ್ಯಾರ್ಥಿಗಳಿಗೆ ಒಂದರಂತೆ ಖರೀದಿಸಿ ಸ್ಕ್ಯಾನಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿ/ಸಿಬ್ಬಂದಿಗಳ ಸಹಿತ ಎಲ್ಲಾ ಮಕ್ಕಳನ್ನು ಪರೀಕ್ಷೆ ಮಾಡಲಾಗುತ್ತಿದ್ದು, ಹೀಗಾಗಿ ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಬೇಗನೆ ಆಗಮಿಸಲು ತಿಳಿಸಲಾಗಿದೆ.

ಪ್ರತ್ಯೇಕ ಕೊಠಡಿ ವ್ಯವಸ್ಥೆ:ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ವಿದ್ಯಾರ್ಥಿಗಳು ಅನಾರೋಗ್ಯದಿಂದ ಬಳಲುತ್ತಿದ್ದಲ್ಲಿ, ಅಂತಹ ವಿದ್ಯಾರ್ಥಿಗಳನ್ನು ಪ್ರತ್ಯೇಕವಾದ ಕೊಠಡಿಯಲ್ಲಿ ಪರೀಕ್ಷೆಯನ್ನು ಬರೆಯಲು ಅವಕಾಶ ಕಲ್ಪಿಸಲಾಗಿದೆ.

ಪೂರಕ ಪರೀಕ್ಷೆಯಲ್ಲಿ ಅವಕಾಶ:ಕೋವಿಡ್-19 ಹಿನ್ನೆಲೆಯಲ್ಲಿ ಯಾವುದಾದರೂ ಕಾರಣಗಳಿಂದ ಪ್ರಸ್ತುತ ನಡೆಯಲಿರುವ ಆಂಗ್ಲಭಾಷಾ ಪರೀಕ್ಷೆಗೆ ವಿದ್ಯಾರ್ಥಿಗಳು ಗೈರುಹಾಜರಾದಲ್ಲಿ ಹಾಗೂ ಅಂತಹ ವಿದ್ಯಾರ್ಥಿಗಳು ಮುಂಬರುವ ಪೂರಕ ಪರೀಕ್ಷೆಗೆ ಹಾಜರಾದಲ್ಲಿ ಅಂತಹ ವಿದ್ಯಾಗಳನ್ನು ರೆಗ್ಯುಲರ್ ವಿದ್ಯಾರ್ಥಿ ಎಂದೇ ಪರಿಗಣಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕಪಡಬೇಕಾಗಿರುವುದಿಲ್ಲ.

ಪರೀಕ್ಷಾ ಕೇಂದ್ರ ಬದಲಾಯಿಸಿಕೊಂಡಿರುವವರು ಮೂಲ ಪರೀಕ್ಷಾ ಕೇಂದ್ರ ಅಥವಾ ಹೊಸ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಲು ಅವಕಾಶ ಕಲ್ಪಿಸಿರುವ ಬಗ್ಗೆ.ಪರೀಕ್ಷಾ ಕೇಂದ್ರದ ಬದಲಾವಣೆ ಬಯಸಿದ್ದ ವಿದ್ಯಾರ್ಥಿಗಳು ತಾಂತ್ರಿಕ ಕಾರಣಗಳಿಂದ ಕೇಂದ್ರ ಬದಲಾವಣೆ ಆಗದಿದ್ದ ಪಕ್ಷದಲ್ಲಿ ಅಥವಾ ಬದಲಾವಣೆಗೊಂಡ ಪರೀಕ್ಷಾ ಕೇಂದ್ರಕ್ಕೆ ಹೋಗಲು ಅಸಾಧ್ಯವಾದರೆ ತಮ್ಮ ಮೂಲ ಹಿಂದಿನ ಪರೀಕ್ಷಾ ಕೇಂದ್ರದಲ್ಲಿಯೂ ಕೂಡಾ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ.

ಮೊಬೈಲ್‌ ನಿಷೇಧ:ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್‌ಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಪರೀಕ್ಷಾ ಕೇಂದ್ರದ ಮುಖ್ಯಅಧೀಕ್ಷಕರು ತುರ್ತು ಸಂದರ್ಭಗಳಿಗಾಗಿ ಮಾತ್ರ ಬೇಸಿಕ್ ಮೊಬೈಲ್ ಸೆಟ್(ಕ್ಯಾಮರಾ ಇಲ್ಲದಿರುವ)ನ್ನು ಬಳಸಲು ಅನುಮತಿ ನೀಡಿದ್ದು, ಉಳಿದಂತೆ ಯಾರೂ ಮೊಬೈಲ್‌ಗಳನ್ನು ತೆಗೆದುಕೊಂಡು ಹೋಗದಂತೆ ನಿಷೇಧಿಸಿದೆ.

ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶ ನಿಷೇಧಿತ ಪ್ರದೇಶವಾಗಿರುತ್ತದೆ.ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವಾಗಿ ಸ್ಥಳೀಯ ಜಿಲ್ಲಾಡಳಿತ ಘೋಷಣೆ ಮಾಡಲು ಕ್ರಮವಹಿಸಿದ್ದು, ಸದರಿ ಪ್ರದೇಶದೊಳಗೆ ಯಾವುದೇ ಅನಧಿಕೃತ ವ್ಯಕ್ತಿಗಳು ಪ್ರವೇಶಿಸುವುದನ್ನು ನಿಷೇಧಿಸಿದೆ.

ವಿಶೇಷ ಸೂಚನೆಗಳು:ಯಾವುದೇ ರೀತಿಯ ವಿದ್ಯುನ್ಮಾನ ಉಪಕರಣಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವಂತಿಲ್ಲ.
ವಿದ್ಯಾರ್ಥಿಗಳು ಕಡ್ಡಾಯವಾಗಿ ತಮ್ಮೊಂದಿಗೆ ಇಟ್ಟುಕೊಳ್ಳಬಹುದಾದ ವಸ್ತುಗಳು: ಪರೀಕ್ಷಾ ಪ್ರವೇಶ ಪತ್ರ, ಕಾಲೇಜು ಗುರುತಿನ ಚೀಟಿ, ವಾಟರ್ ಬಾಟಲ್, ಅಗತ್ಯವಿರುವ ಔಷಧಿಗಳು, ಮಾಸ್ಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.