ADVERTISEMENT

ಬಯೊಮೆಟ್ರಿಕ್‌ ಹಾಜರಾತಿ ಇದ್ದರೆ ಸಂಬಳ

ಇ–ಹಾಜರಾತಿ ಅಳವಡಿಕೆಗೆ ನಿರ್ಲಕ್ಷ್ಯ : ಅನುದಾನಿತ ಕಾಲೇಜುಗಳ ವಿರುದ್ಧ ಕ್ರಮ

ಪೀರ್‌ ಪಾಶ, ಬೆಂಗಳೂರು
Published 10 ಜನವರಿ 2019, 20:04 IST
Last Updated 10 ಜನವರಿ 2019, 20:04 IST

ಬೆಂಗಳೂರು: ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿಯ ಹಾಜರಾತಿಗಾಗಿ ಬಯೊಮೆಟ್ರಿಕ್‌ ವ್ಯವಸ್ಥೆ ಅಳವಡಿಸಿಕೊಳ್ಳದ ಪಿ.ಯು. ಕಾಲೇಜುಗಳ ಸಿಬ್ಬಂದಿಯ ಜನವರಿ ತಿಂಗಳ ವೇತನವನ್ನು ತಡೆಹಿಡಿಯಲು ಶಿಕ್ಷಣ ಇಲಾಖೆ ಮುಂದಾಗಿದೆ.

ಉಪನ್ಯಾಸಕರು ಕಾಲೇಜುಗಳಿಗೆ ಚಕ್ಕರ್‌ ಹೊಡೆಯುವುದನ್ನು ತಪ್ಪಿಸಲು, ನಿಗದಿತ ಕಾಲಾವಧಿವರೆಗೂ ಪಾಠ–ಪ್ರವಚನಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಪದವಿಪೂರ್ವ ಶಿಕ್ಷಣ ಇಲಾಖೆಯು ಇ–ಹಾಜರಾತಿಗೆ ತೀರ್ಮಾನಿಸಿತ್ತು. ಬಯೊಮೆಟ್ರಿಕ್‌ ಸಾಧನಗಳ ಅಳವಡಿಕೆಗೆ2018ರ ಜುಲೈನಲ್ಲಿ ಚಾಲನೆ ನೀಡಿತ್ತು.

ಸರ್ಕಾರಿ ಪಿ.ಯು.ಕಾಲೇಜುಗಳಲ್ಲಿ ಅಳವಡಿಸಬೇಕಾದ ಬಯೊಮೆಟ್ರಿಕ್‌ ಉಪಕರಣಗಳನ್ನು ರಾಜ್ಯ ಸರ್ಕಾರದ ಇ–ಆಡಳಿತ ವಿಭಾಗದಿಂದ ಖರೀದಿಸಿ ವಿತರಿಸಲಾಗಿತ್ತು. ಅನುದಾನಿತ ಕಾಲೇಜುಗಳಿಗೆ ಸ್ವಂತ ವೆಚ್ಚದಲ್ಲಿ ಸಾಧನಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿತ್ತು.

ADVERTISEMENT

ಕಳೆದ ವರ್ಷದ ಅಕ್ಟೋಬರ್‌ ಅಂತ್ಯದೊಳಗೆ ಹಾಜರಾತಿಯ ತಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಗಡುವನ್ನು ನಿಗದಿಪಡಿಸಲಾಗಿತ್ತು. ಅದನ್ನು ಡಿಸೆಂಬರ್‌ ಅಂತ್ಯದವರೆಗೂ ವಿಸ್ತರಿಸಲಾಗಿತ್ತು. ಆದರೂ, ಶೇ 70ರಷ್ಟು ಅನುದಾನಿತ ಕಾಲೇಜುಗಳು ಇನ್ನೂ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿಲ್ಲ. ಹಾಗಾಗಿ ಕಾಲೇಜು ಸಿಬ್ಬಂದಿಯ ಜನವರಿ ತಿಂಗಳ ಸಂಬಳ ತಡೆಹಿಡಿಯಲಾಗುವುದು ಎಂದು ಇಲಾಖೆಯು ಇತ್ತೀಚಿನ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿದೆ.

‘ಉಪನ್ಯಾಸಕರು ಕಾಲೇಜಿಗೆ ಬಂದಾಗ ಮತ್ತು ಮರಳಿ ಹೋಗುವಾಗ ಬೆರಳಚ್ಚು ಮೂಲಕ ಇ–ಹಾಜರಾತಿಯನ್ನು ದೃಢಪಡಿಸಬೇಕು. ಈ ತಾಂತ್ರಿಕತೆಯಲ್ಲಿ ಇಲಾಖೆಯ ಕೇಂದ್ರ ಕಚೇರಿಯಿಂದಲೇ ಹಾಜರಾತಿ ಮೇಲೆ ಕಣ್ಣಿಡಬಹುದು. ಇದರಿಂದ ಬೇಕಾದಾಗ ಮನೆ ಕಡೆಗೆ ಹೋಗಲು ಆಗುವುದಿಲ್ಲವೆಂದು ಉಪನ್ಯಾಸಕರೇ ಬಯೊಮೆಟ್ರಿಕ್‌ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಬಹುತೇಕ ಸರ್ಕಾರಿ ಕಾಲೇಜುಗಳಲ್ಲಿ ಅಳವಡಿಸಿರುವ ಬಯೊಮೆಟ್ರಿಕ್‌ ಸಹ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

ಹಾಗಾಗಿ ಹಾಜರಾಗಿರುವ ಕುರಿತು ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಪ್ರತಿದಿನ ಮಾಹಿತಿ ನೀಡುವ ಪ್ರಮೇಯ ಉಪನ್ಯಾಸಕರಿಗೆ ಒದಗಿ ಬಂದಿದೆ.

ಅಂಕಿ ಅಂಶ

1,231:ರಾಜ್ಯದಲ್ಲಿನ ಸರ್ಕಾರಿ ಪಿ.ಯು.ಕಾಲೇಜುಗಳು

753:ಅನುದಾನಿತ ಪಿ.ಯು.ಕಾಲೇಜುಗಳು

₹3,000:ಪ್ರತಿ ಬಯೊಮೆಟ್ರಿಕ್‌ ಸಾಧನದ ಬೆಲೆ

**

ಮೊದಲು ವಿದ್ಯುತ್‌, ಅಂತರ್ಜಾಲ ಸಂಪರ್ಕ ಕಲ್ಪಿಸಬೇಕು. ನಂತರ ಬಯೊಮೆಟ್ರಿಕ್‌ ಅನುಷ್ಠಾನಕ್ಕೆ ತರಬೇಕು.

–ತಿಮ್ಮಯ್ಯ ಪುರ್ಲೆ, ಅಧ್ಯಕ್ಷ, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.