
ಬೆಂಗಳೂರು: ಆರೋಗ್ಯ ಇಲಾಖೆಯು ರಾಜ್ಯದಾದ್ಯಂತ ಭಾನುವಾರ (ಡಿ.21) ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, 5 ವರ್ಷದೊಳಗಿನ 62.40 ಲಕ್ಷ ಮಕ್ಕಳನ್ನು ತಲುಪುವ ಗುರಿ ಹಾಕಿಕೊಂಡಿದೆ.
ಪೋಲಿಯೊ ಹನಿ ಹಾಕಲು 33,258 ಬೂತ್‌ಗಳನ್ನು ಗುರುತಿಸಲಾಗಿದೆ. 1,030 ಸಂಚಾರಿ ತಂಡಗಳು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ಲಸಿಕೆ ವಿತರಿಸಲಿವೆ. 2,096 ಟ್ರಾನ್ಸಿಟ್ ತಂಡಗಳನ್ನೂ ರಚಿಸಲಾಗಿದೆ. ಈ ಕಾರ್ಯಕ್ರಮಕ್ಕೆ 1.13 ಲಕ್ಷ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗುತ್ತಿದೆ. 7,322 ಮೇಲ್ವಿಚಾರಕರನ್ನು ನೇಮಿಸಲಾಗಿದೆ.
ರಾಜ್ಯದ ಎಲ್ಲ ಆಸ್ಪತ್ರೆಗಳು, ಗ್ರಾಮೀಣ ಪ್ರದೇಶ, ಗುಡ್ಡಗಾಡು ಪ್ರದೇಶ ಸೇರಿದಂತೆ ವಿವಿಧೆಡೆ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ. ಹತ್ತಿರದ ಲಸಿಕಾ ಕೇಂದ್ರ ಪತ್ತೆಗೆ ‘Nearby Vaccination centre Karnataka’ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡು, ಕೇಂದ್ರ ಹುಡುಕಬಹುದು.
21ರಂದು ಪೋಲಿಯೊ ಹನಿ ಪಡೆಯದ ಮಕ್ಕಳಿಗೆ, ಡಿ.22 ಮತ್ತು ಡಿ.23ರಂದು ಮನೆ ಮನೆಗೆ ತೆರಳಿ ಕಾರ್ಯಕರ್ತರು ಪೋಲಿಯೊ ಹನಿ ಹಾಕುತ್ತಾರೆ. ಸಾರ್ವಜನಿಕರು ಸಹಕರಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಐದು ವರ್ಷದೊಳಗಿನ ಎಲ್ಲ ಮಕ್ಕಳೂ ಲಸಿಕೆ ಪಡೆದುಕೊಳ್ಳಬೇಕು. ಈ ಮೂಲಕ ಪೋಲಿಯೊ ವಿರುದ್ಧದ ಹೋರಾಟದಲ್ಲಿ ವಿಜಯ ಸಾಧಿಸುವುದನ್ನು ಮುಂದುವರಿಸಲು ಕೈಜೋಡಿಸಬೇಕು.- ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.