ADVERTISEMENT

ಕೋವಿಡ್ ನಿಯಂತ್ರಣ ಉಪಕರಣ ಖರೀದಿ: ₹34.97 ಕೋಟಿ ಅಧಿಕ ವೆಚ್ಚ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 20:31 IST
Last Updated 17 ಆಗಸ್ಟ್ 2021, 20:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌ ನಿಯಂತ್ರಣಕ್ಕಾಗಿ ಖರೀದಿಸಿದ ಉಪಕರಣಗಳಿಗಾಗಿ ₹34.97 ಕೋಟಿ ಅಧಿಕ ಮೊತ್ತ ಪಾವತಿ ಮಾಡಲಾಗಿರುವ ಬಗ್ಗೆ ಸೂಕ್ತ ಮಾಹಿತಿ ಒದಗಿಸುವಂತೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ, ಆರೋಗ್ಯ ಇಲಾಖೆಗೆ ಅಧಿಕಾರಿಗಳಿಗೆ ಒಂದು ವಾರ ಗಡುವು ನೀಡಿದೆ.

ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮೂರು ಉಪಕರಣಗಳ ಖರೀದಿಯ ಬಗ್ಗೆ ಚರ್ಚಿಸಲಾಯಿತು. ಉಳಿದ 15 ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಅಧಿಕಾರಿಗಳಿಂದ ಸೂಕ್ತ ಉತ್ತರ ಸಿಗದ ಕಾರಣ ಮತ್ತೊಮ್ಮೆ ಪರಿಪೂರ್ಣ ಉತ್ತರ ನೀಡುವಂತೆಯೂ ನಿರ್ದೇಶನ ನೀಡಲಾಯಿತು.

ರ್‍ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ ಕಿಟ್‌ಗಳ ಖರೀದಿಯಲ್ಲೂ ಲೋಪಗಳಾಗಿವೆ. ಇಲಾಖೆ ಖರೀದಿಸಿರುವ 30 ಲಕ್ಷ ಕಿಟ್‌ಗಳಿಗೆ ₹3.79 ಕೋಟಿ ಅಧಿಕ ಪಾವತಿ ಮಾಡಲಾಗಿದೆ ಎಂದು ಸಮಿತಿ ದೂರಿದೆ.

ADVERTISEMENT

ಹಿಮಾಚಲಪ್ರದೇಶ ಮತ್ತು ಕೇರಳ ರಾಜ್ಯಕ್ಕೆ ಸಂಬಂಧಿಸಿದ ಬ್ರೇಕ್ ಅಪ್‌ವಿವರಗಳನ್ನು (ಸಲಕರಣೆಗಳ ಮೂಲ ವೆಚ್ಚ, ಪರೀಕ್ಷೆಗಳಿಗೆ ಅಗತ್ಯವಿರುವ ರಾಸಾಯನಿಕ ಹಾಗೂ ಪರಿಕರಗಳ ಸಾಗಾಣಿಕೆ ವೆಚ್ಚ) ನೀಡಲಾಗಿದೆ. ಆದರೆ, ರಾಜ್ಯಕ್ಕೆ ಸಂಬಂಧಿಸಿದ ಬ್ರೇಕ್‌ ಅಪ್‌ ವಿವರ ನೀಡದಿರುವ ಬಗ್ಗೆ ಸಮಿತಿಯು ಅಸಮಾಧಾನ ವ್ಯಕ್ತಪಡಿಸಿ, ಒಂದು ವಾರದೊಳಗೆ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ರ್‍ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ ಕಿಟ್‌ ಖರೀದಿಯಲ್ಲಿ ಆಗಿರುವ ಲೋಪದೋಷಗಳನ್ನು ಸಭೆಯಲ್ಲಿ ಪಟ್ಟಿ ಮಾಡಲಾಯಿತು. ಮೊದಲ ಬಾರಿಗೆ ಕಿಟ್‌ ಖರೀದಿಸಲು ಆಹ್ವಾನಿಸಿದ್ದ ದರ ಪಟ್ಟಿಯನ್ನು ಯಾಕೆ ಅಂತಿಮಗೊಳಿಸಲಿಲ್ಲ? ಬಹುಪಾಲು ಮೊದಲ ಬಾರಿ ದರಪಟ್ಟಿ ಸಲ್ಲಿಸಿದ್ದ ಕಂಪನಿಗಳೇ ಎರಡನೇ ಬಾರಿ ದರಪಟ್ಟಿ ಆಹ್ವಾನದ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರೂ ಟೆಂಡರ್‌ ಪ್ರಕ್ರಿಯೆ ಅಂತಿಮಗೊಳಿಸುವಲ್ಲಿ ತಡ ಏಕಾಯಿತು? ಉತ್ತರಪ್ರದೇಶ ರಾಜ್ಯ ದರ ಪಟ್ಟಿಯ ಪ್ರಕಾರವೇ ದರ ನಿಗದಿಪಡಿಸಿದ್ದು ಏಕೆ ಎಂದು
ಪ್ರಶ್ನಿಸಲಾಯಿತು.

ಕೇರಳಕ್ಕೆ ಹೋಲಿಸಿದರೆ ದುಪ್ಪಟ್ಟು ದರ!:

* ಕರ್ನಾಟಕ ಸರ್ಕಾರವು ಟೆಂಡರ್ ಮೂಲಕಹೆಮಟಾಲಜಿ ಸೆಲ್‌ ಕೌಂಟ್ಸ್‌ನ (ಪಾರ್ಟ್‌ 3) ಪ್ರತಿ ಯೂನಿಟ್‌ ಅನ್ನು ₹2,96,180 ನೀಡಿ 1,195 ಯೂನಿಟ್‌ಗಳನ್ನು ಖರೀದಿಸಿದೆ. ಹಿಮಾಚಲ ಪ್ರದೇಶ ಸರ್ಕಾರ ಒಂದು ಯೂನಿಟ್‌ಗೆ ಕೇವಲ ₹1.30 ಲಕ್ಷ ನೀಡಿದೆ. ಇದರಿಂದ ರಾಜ್ಯ ಸರ್ಕಾರ ₹25 ಕೋಟಿಯಷ್ಟು ಅಧಿಕ ವೆಚ್ಚ ಮಾಡಿದೆ.

* ಹೆಮಟಾಲಜಿ ಸೆಲ್‌ ಕೌಂಟ್ಸ್‌ (ಪಾರ್ಟ್‌5 ) ಅನ್ನು ಕರ್ನಾಟಕ ಸಿಸ್ಮೆಕ್‌ ಕಾರ್ಪೊರೇಷನ್‌ನಿಂದ ಪ್ರತಿ ಯೂನಿಟ್‌ಗೆ ₹8.35 ಲಕ್ಷ ನೀಡಿ 165 ಯೂನಿಟ್‌ಗಳನ್ನು ಖರೀದಿಸಿತ್ತು. ಇದೇ ವೈಶಿಷ್ಟ್ಯ ಹೊಂದಿರುವ ಸಾಮಗ್ರಿಗೆ ಕೇರಳ ಪ್ರತಿ ಯೂನಿಟ್‌ಗೆ ಕೇವಲ ₹4,60,200 ನೀಡಿದೆ. ಕೇರಳಕ್ಕೆ ಹೋಲಿಸಿದರೆ ₹6.18 ಕೋಟಿ ಅಧಿಕ ದರ ಪಾವತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.