ADVERTISEMENT

ಪೊಲೀಸರು ‘ಕ್ವಾರಂಟೈನ್‌ ಅವಧಿ’ಯಲ್ಲಿದ್ದರೆ ಇನ್ಮುಂದೆ ಅದು ‘ಕರ್ತವ್ಯದ ಅವಧಿ’

ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಆದೇಶ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 11:27 IST
Last Updated 9 ಜೂನ್ 2020, 11:27 IST
ಕರ್ನಾಟಕ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್ ಸೂದ್
ಕರ್ನಾಟಕ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್ ಸೂದ್   

ಬೆಂಗಳೂರು: ಕೊರೊನಾ ವಾರಿಯರ್ಸ್‌ ಆಗಿ ಕೆಲಸ ನಿರ್ವಹಿಸುವ ಪೊಲೀಸರು ಇನ್ನು ಮುಂದೆ ಕ್ವಾರಂಟೈನ್‌ನಲ್ಲಿ ಇದ್ದರೆ, ಆ ಅವಧಿಯನ್ನು ‘ಕರ್ತವ್ಯದ ಅವಧಿ’ ಎಂದು ಪರಿಗಣಿಸುವಂತೆ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್ ಸೂದ್ ಎಲ್ಲ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ, ಪೊಲೀಸ್‌ ಕಮಿಷನರ್‌ಗಳಿಗೆ ಮತ್ತು ಎಲ್ಲ ವಲಯಗಳ ಮಹಾ ನಿರೀಕ್ಷಕರಿಗೆ ಆದೇಶ ಹೊರಡಿಸಿದ್ದಾರೆ.

ಇತ್ತೀಚೆಗೆ ಕರ್ತವ್ಯ ನಿರ್ವಹಣೆ ಸಮಯದಲ್ಲಿ ಕೊರೊನಾ ಸೋಂಕಿತರ ಜೊತೆ ಪೊಲೀಸರು ಸಂಪರ್ಕಕ್ಕೆ ಬಂದಿರುತ್ತಾರೆ. ಕೋವಿಡ್‌ 19 ತಡೆಯುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವ ವೇಳೆಯಲ್ಲೂ ಸಾರ್ವಜನಿಕರ ಜೊತೆ ಪೊಲೀಸ್‌ ಸಿಬ್ಬಂದಿ ನಿಕಟ ಸಂಪರ್ಕದಲ್ಲಿ ಇರುತ್ತಾರೆ. ಕೆಲವರು ಸೋಂಕಿತರ ಜೊತೆ ಸಂಪರ್ಕ ಹೊಂದಿ ಕ್ವಾರಂಟೈನ್ ಆಗುತ್ತಿದ್ದಾರೆ. ಪೊಲೀಸರು ಹೋಂ ಕ್ವಾರಂಟೈನ್ ಅಥವಾ ಸಾಂಸ್ಥಿಕ ಕ್ವಾರಂಟೈಗೆ ಒಳಗಾದ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದವರು ಹಾಗೂ ತರಬೇತಿಗಾಗಿ ಹೊರ ಜಿಲ್ಲೆಗಳಿಗೆ ಮತ್ತು ಹೊರರಾಜ್ಯಕ್ಕೆ ತೆರಳಿ ಅಲ್ಲಿ ಕ್ವಾರಂಟೈನ್‌ಗೆ ಒಳಗಾದ ಪೊಲೀಸ್‌ ಸಿಬ್ಬಂದಿಗೂ ಈ ಆದೇಶ ಅನ್ವಯವಾಗುತ್ತದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.