ADVERTISEMENT

ವಸತಿ ಹಂಚಿಕೆ ಕಾರ್ಯಕ್ರಮದಲ್ಲಿ ಕುಡಿತಕ್ಕೆ ಪ್ರಚೋದನೆ: ಆರ್‌.ಅಶೋಕ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 19:41 IST
Last Updated 3 ಫೆಬ್ರುವರಿ 2026, 19:41 IST
ವಿಧಾನಸಭೆಯಲ್ಲಿ ಆರ್‌.ಅಶೋಕ ಮಾತನಾಡಿದರು.
ವಿಧಾನಸಭೆಯಲ್ಲಿ ಆರ್‌.ಅಶೋಕ ಮಾತನಾಡಿದರು.   

ಬೆಂಗಳೂರು: ‘ಹುಬ್ಬಳ್ಳಿಯಲ್ಲಿ ವಸತಿ ಹಂಚಿಕೆ ಕಾರ್ಯಕ್ರಮದಲ್ಲಿ ಸುಮಾರು ಎರಡು ಲಕ್ಷ ಜನ ಸೇರುವುದರಿಂದ ಮದ್ಯದ ಲೈಸೆನ್ಸ್‌ ಹೊಂದಿರುವ ಎಲ್ಲ ಅಂಗಡಿ–ಮಳಿಗೆಯವರು ಹೆಚ್ಚು ಪ್ರಮಾಣದಲ್ಲಿ ಮದ್ಯ ಮಾರಾಟ ಮಾಡಬೇಕು ಎಂದು ಅಬಕಾರಿ ಇಲಾಖೆ ಅಧಿಕಾರಿ ಪ್ರಕಾಶ್‌ ಪಾಟೀಲ ವಾಟ್ಸ್‌ಆ್ಯಪ್  ಮೂಲಕ ಸಂದೇಶ ಕಳುಹಿಸಿದ್ದರು’ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರು ವಿಧಾನಸಭೆಯ ಗಮನಕ್ಕೆ ತಂದರು.

‘ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಚಿವರು ಭಾಗವಹಿಸುತ್ತಿದ್ದಾರೆ. ಭಾರಿ ಪ್ರಮಾಣದಲ್ಲಿ ಜನರ ಸೇರುವ ಸಾಧ್ಯತೆ ಇದೆ. ಹೀಗಾಗಿ ನಿಮ್ಮ ಮಾರಾಟ ಮಳಿಗೆಗಳಲ್ಲಿ ಸಾಕಷ್ಟು ಮದ್ಯ ಮತ್ತು ಬಿಯರ್‌ ಅನ್ನು ಕೆಎಸ್‌ಟಿಡಿಎಲ್ ಡಿಪೊದಿಂದ ತಂದು ಸಂಗ್ರಹಿಸಿ ಇಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ. ಇದು ಸರ್ಕಾರದ ನಿರ್ದೇಶನದ ಮೇರೆಗೆ ಅವರು ಸಂದೇಶ ಕಳುಹಿಸಿರಬಹುದು’ ಎಂದು ಅವರು ತರಾಟೆಗೆ ತೆಗೆದುಕೊಂಡರು.

‘ಈ ಅಧಿಕಾರಿ ಪ್ರಾಯಶಃ ಹೆಚ್ಚು ಲಂಚ ಕೊಟ್ಟು ಆ ಸ್ಥಾನಕ್ಕೆ ಬಂದಿರಬೇಕು. ಒಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಹೆಚ್ಚು ಕುಡಿಸಿ ಹಣ ಲೂಟಿ ಮಾಡಬೇಕು ಎಂಬುದೇ ಇವರ ಉದ್ದೇಶ’ ಎಂದು ವ್ಯಂಗ್ಯವಾಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.