ADVERTISEMENT

ಒಳಜಗಳ ಮುಚ್ಚಿ ಹಾಕಲು ಸಿಎಂ ವಿರುದ್ಧ ಕಾಂಗ್ರೆಸ್‌ ಕಮೆಂಟ್‌– ಆರ್. ಅಶೋಕ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 5:03 IST
Last Updated 10 ಆಗಸ್ಟ್ 2022, 5:03 IST
ಕಂದಾಯ ಸಚಿವ ಆರ್. ಅಶೋಕ
ಕಂದಾಯ ಸಚಿವ ಆರ್. ಅಶೋಕ   

ಬೆಂಗಳೂರು: ‘ಬೀದಿಗೆ ಬಂದಿರುವ ಒಳ ಜಗಳವನ್ನು ಮುಚ್ಚಿ ಹಾಕಲು ಕಾಂಗ್ರೆಸ್ಸಿನವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಗ್ಗೆ ಇಲ್ಲ ಸಲ್ಲದ ಕಮೆಂಟ್‌, ಅಂದರೆ ಸಿಎಂ ಬದಲಾಗಲಿದ್ದಾರೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅಥವಾ ಕಾಂಗ್ರೆಸ್‌ ಪಕ್ಷಕ್ಕೆ ಬಿಜೆಪಿ ನೇತೃತ್ವದ ಬಗ್ಗೆಅಥವಾ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಲು ಏನು ಅಧಿಕಾರ ಇದೆ’ ಎಂದು ಕಂದಾಯ ಸಚಿವ ಆರ್. ಅಶೋಕ ಪ್ರಶ್ನಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ದೇಶದಲ್ಲಿ ಕಾಂಗ್ರೆಸ್‌ ಮಣ್ಣು ಮುಕ್ಕುತ್ತಿದೆ. ಕಾಂಗ್ರೆಸ್ಸಿಗೆ ತಳವೇ ಇಲ್ಲ. ಕಾಂಗ್ರೆಸ್ಸಿಗೆ ಯಾವ ಅಧಿಕಾರವಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದಾವಣಗೆರೆ ಸಮಾವೇಶ ಆದ ಬಳಿಕ ಕಾಂಗ್ರೆಸ್ಸಿನಲ್ಲಿ ದೊಡ್ಡ ಬಿರುಕು ಕಾಣಿಸಿದೆ. ಸಿದ್ದರಾಮಯ್ಯ ವರ್ಸಸ್‌ ಡಿ.ಕೆ. ಶಿವಕುಮಾರ್ ಮತ್ತು ಉಳಿದ ಮೂಲ ಕಾಂಗ್ರೆಸ್ಸಿಗರೆಲ್ಲ ಒಂದು ಸಭೆ ಮಾಡಿದ್ದಾರೆ. ಆ ಸಭೆಯಲ್ಲಿ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬದ ಬಗ್ಗೆ ಬೇಸರ ವ್ಯಕ್ತಪಡಿಸಿರುವುದು ನಮ್ಮ ಗಮನಕ್ಕೆ ಬಂದಿದೆ’ ಎಂದರು.

ADVERTISEMENT

‘ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಜಿ. ಪರಮೇಶ್ವರ, ಎಂ.ಬಿ. ಪಾಟೀಲ, ಖರ್ಗೆ ಇವರ ಜಗಳ ಆ ಸಮಾವೇಶದ ಬಳಿಕ ಬೀದಿಗೆ ಬಂದಿದೆ. ಇದೀಗ ಆ ಸಮಾವೇಶಕ್ಕೆ ಕೌಂಟರ್‌ ಆಗಿ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದ ಹೆಸರಿನಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.