ADVERTISEMENT

ರಾಹುಲ್‌ ಗಾಂಧಿ ಷಡ್ಯಂತ್ರಕ್ಕೆ ರಾಜಣ್ಣ ಬಲಿ: ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 15:22 IST
Last Updated 11 ಆಗಸ್ಟ್ 2025, 15:22 IST
ವಿ.ಸೋಮಣ್ಣ
ವಿ.ಸೋಮಣ್ಣ   

ನವದೆಹಲಿ: ‘ಕಾಂಗ್ರೆಸ್ ಹೈಕಮಾಂಡ್ ಜುಟ್ಟು ಜನಿವಾರ ಇಲ್ಲದ ಹಾಗೂ ದೇಶದ ವ್ಯವಸ್ಥೆ ಗೊತ್ತಿಲ್ಲದ ನಾಯಕನಿಗೆ ಪಕ್ಷದ ನೇತೃತ್ವ ನೀಡಿದೆ. ರಾಹುಲ್‌ ಗಾಂಧಿ ಷಡ್ಯಂತ್ರಕ್ಕೆ ಸತ್ಯವಂತ ಕೆ.ಎನ್‌.ರಾಜಣ್ಣ ಬಲಿಯಾಗಿದ್ದಾರೆ’ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು. 

ಸೋಮವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ‘ರಾಜಣ್ಣ ಅವರು ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ. ಅವರನ್ನು ಸಿದ್ದರಾಮಯ್ಯ ನಡುನೀರಿನಲ್ಲಿ ಕೈಬಿಟ್ಟರು. ಇದು ಇತರ ಸಚಿವರಿಗೆ ಎಚ್ಚರಿಕೆಯ ಗಂಟೆ. ಕಪ್ಪ ಕಾಣಿಕೆ ಕೊಟ್ಟು ಸರಿಯಾಗಿ ಇರದಿದ್ದರೆ ಎಲ್ಲರಿಗೂ ಇದೇ ಗತಿ’ ಎಂದರು. 

‘ರಣದೀಪ್‌ ಸಿಂಗ್‌ ಸುರ್ಜೇವಾಲಾ ಎಂಬ ವ್ಯಕ್ತಿ ಸುಲಿಗೆ ಮಾಡಲು ಇದ್ದಾರೆ. ಅವರು ರಾಜ್ಯದ ಉಸ್ತುವಾರಿಯಾಗಿ ಇರುವ ತನಕ ಬೇರೆ ನಾಯಕರಿಗೆ ಗ್ಯಾರಂಟಿ ಇಲ್ಲ. ಆ ವ್ಯಕ್ತಿ ಬೆಂಗಳೂರಿಗೆ ಬಂದು ಅಧಿಕಾರಿಗಳ ಸಭೆ ನಡೆಸುತ್ತಾರೆ. ಇದೆಂತಹ ಸರ್ಕಾರ’ ಎಂದು ಅವರು ಪ್ರಶ್ನಿಸಿದರು. 

ADVERTISEMENT

ಸುಳ್ಳು ಹೇಳಿದ ಸಿಎಂ-ಸೋಮಣ್ಣ: 

‘ನಮ್ಮ ಮೆಟ್ರೊ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ. ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಭೂಸ್ವಾಧೀನಕ್ಕೆ ಹಣ ಕೊಟ್ಟಿದೆ ಅಷ್ಟೇ. ಮೆಟ್ರೊ ಯೋಜನೆಗೆ ರಾಜ್ಯ ಹಾಗೂ ಕೇಂದ್ರ ತಲಾ ಶೇ 20 ಭರಿಸುತ್ತವೆ. ಉಳಿದ ಮೊತ್ತವನ್ನು ಸಾಲ ರೂಪದಲ್ಲಿ ಪಡೆಯಲಾಗುತ್ತದೆ’ ಎಂದು ಸೋಮಣ್ಣ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.