ಡಿ.ಕೆ ಶಿವಕುಮಾರ್
ಬೆಂಗಳೂರು: ‘ಮತ ಕಳ್ಳತನ ವಿಚಾರವನ್ನು ನಮ್ಮ ಹೈಕಮಾಂಡ್ ನಾಯಕರು ಗಂಭೀರವಾಗಿ ಪರಿಗಣಿಸಿದ್ದು, ಮತದಾರರ ಹಕ್ಕಿನ ರಕ್ಷಣೆ ಮಾಡಬೇಕಾಗಿರುವುದು ರಾಜಕೀಯ ಪಕ್ಷಗಳ ಕರ್ತವ್ಯ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಈ ವಿಚಾರ ಮುಂದಿಟ್ಟುಕೊಂಡು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ (ಆಗಸ್ಟ್ 8) ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದ್ದೇವೆ. ಚುನಾವಣೆ ಸಮಯದಲ್ಲಿ ಆಗಿರುವ ಅಕ್ರಮಗಳ ಬಗ್ಗೆ ದಾಖಲೆಗಳ ಸಮೇತ ಚುನಾವಣಾ ಆಯೋಗಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆ’ ಎಂದರು.
‘ಆಯೋಗಕ್ಕೆ ಯಾವ ದಾಖಲೆಗಳನ್ನು ನೀಡುತ್ತೀರಿ’ ಎಂದು ಕೇಳಿದಾಗ, ‘ಈ ವಿಚಾರವನ್ನು ನಾನು ಬಹಿರಂಗಪಡಿಸುವುದಿಲ್ಲ. ಇದು ರಾಷ್ಟ್ರೀಯ ವಿಚಾರ ಆಗಿರುವ ಕಾರಣ ನಮ್ಮ ನಾಯಕರು ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಲಿದ್ದಾರೆ’ ಎಂದರು.
‘ಮೆರವಣಿಗೆ ನಡೆಯಲಿದೆಯೇ’ ಎಂಬ ಪ್ರಶ್ನೆಗೆ, ‘ಸ್ವಾತಂತ್ರ್ಯ ಉದ್ಯಾನದಲ್ಲಿ ಕಾನೂನು ಚೌಕಟ್ಟಿನಲ್ಲಿ ಪ್ರತಿಭಟನೆ ನಡೆಯಲಿದೆ’ ಎಂದಷ್ಟೆ ಹೇಳಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಮತ್ತು ಡಿ.ಕೆ ಶಿವಕುಮಾರ್ ಅವರು ಪ್ರತಿಭಟನಾ ಸಮಾವೇಶ ನಡೆಯಲಿರುವ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಸಚಿವರಾದ ಎಚ್.ಕೆ. ಪಾಟೀಲ, ಕೆ.ಜೆ. ಜಾರ್ಜ್, ಕೆ.ಎಚ್. ಮುನಿಯಪ್ಪ, ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ಡಾ. ಶರಣ್ ಪ್ರಕಾಶ್ ಪಾಟೀಲ, ಕೆ. ವೆಂಕಟೇಶ್, ಎನ್.ಎಸ್. ಬೋಸರಾಜು, ಡಾ.ಎಂ.ಸಿ. ಸುಧಾಕರ್, ಬೈರತಿ ಸುರೇಶ್, ರಹೀಂ ಖಾನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ದೆಹಲಿಯಲ್ಲಿ ಕರ್ನಾಟಕದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕರು, ಪಕ್ಷದ ಮುಖಂಡರು ಈ ಸಭೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.