ADVERTISEMENT

‘ಮತ ಕಳ್ಳತನ’ |5ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ: ಡಿ.ಕೆ. ಶಿವಕುಮಾರ್

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 15:25 IST
Last Updated 31 ಜುಲೈ 2025, 15:25 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ನಡೆದಿರುವ ‘ಮತ ಕಳ್ಳತನ’ದ ವಿರುದ್ಧ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಗರದ‌ ಸ್ವಾತಂತ್ರ್ಯ ಉದ್ಯಾನದಲ್ಲಿ ಆಗಸ್ಟ್ 5ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬಳಿಕ ಮುಖ್ಯ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸ್ವಾತಂತ್ರ್ಯ ಉದ್ಯಾನದ ಬಳಿ ಪೂರ್ವಸಿದ್ಧತೆಗೆ ಸಂಬಂಧಿಸಿದಂತೆ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲಾ ಜೊತೆ ಸ್ಥಳ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜೊತೆ ಡಿ.ಕೆ. ಶಿವಕುಮಾರ್ ಮಾತನಾಡಿದರು.

‘ನಾವು ಪಾದಯಾತ್ರೆ ಹಮ್ಮಿಕೊಂಡಿಲ್ಲ. ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನಾ ಸಭೆ ನಡೆಸಿದ ಬಳಿಕ ಐದಾರು ನಾಯಕರು ಚುನಾವಣಾ ಆಯೋಗ ಕಚೇರಿಗೆ ತೆರಳುತ್ತೇವೆ. ಆಯೋಗದವರೆಗೆ ನಡೆದುಕೊಂಡು ಹೋಗುವ ಬಗ್ಗೆ ಪೊಲೀಸರು ನೀಡುವ ಸಲಹೆಯಂತೆ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.

ADVERTISEMENT

‘ಯಾವ ಕ್ಷೇತ್ರಗಳ ಮತದಾರ ಪಟ್ಟಿಯಲ್ಲಿನ ಅಕ್ರಮದ ದಾಖಲೆಗಳನ್ನು ಪ್ರತಿಭಟನೆಯ ಸಂದರ್ಭದಲ್ಲಿ ಬಿಡುಗಡೆ ಮಾಡಬೇಕೆಂದು ರಾಹುಲ್ ಗಾಂಧಿಯವರು ತೀರ್ಮಾನಿಸಿ, ಬಹಿರಂಗಪಡಿಸಲಿದ್ದಾರೆ’ ಎಂದೂ ಹೇಳಿದರು.

‘ಮತ ಕಳ್ಳತನ’ದ ವಿರುದ್ಧ ಕರ್ನಾಟಕದ ನೆಲದಿಂದಲೇ ಹೋರಾಟ ಆರಂಭಿಸಿದರೆ ಹೆಚ್ಚಿನ ಶಕ್ತಿ ಸಿಗಲಿದೆ ಎಂದು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ. ಚುನಾವಣೆ ವೇಳೆ ಆಗಿರುವ ಲೋಪದೋಷಗಳನ್ನು ಪಕ್ಷದ ನಾಯಕರು ಎತ್ತಿ ತೋರಿಸಲಿದ್ದಾರೆ’ ಎಂದರು.

‘ನಮ್ಮ ಸರ್ಕಾರವೇ ಮಾಡಿರುವ ನಿಯಮಗಳು ಹಾಗೂ ನ್ಯಾಯಾಲಯ ನೀಡಿರುವ ನಿರ್ದೇಶನ ಪಾಲಿಸಿ ಪ್ರತಿಭಟನೆ ನಡೆಸುತ್ತೇವೆ. ಈ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸುವಂತೆ ಮನವಿ ಮಾಡಲಾಗಿದೆ. ಎಲ್ಲ ಬ್ಲಾಕ್ ಘಟಕಗಳಿಂದ ಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು’ ಎಂದರು.

‘ಕರಡು ಮತದಾರರ‌ ಪಟ್ಟಿಗೆ ಹಿಂದೆ ಆಕ್ಷೇಪಣೆ ಏಕೆ ಸಲ್ಲಿಸಿಲ್ಲ’ ಎಂಬ ಪ್ರಶ್ನೆಗೆ, ‘ನಮ್ಮ ಆಕ್ಷೇಪಣೆಯನ್ನು ಚುನಾವಣಾ ಆಯೋಗ ಸ್ವೀಕರಿಸಿಲ್ಲ. ಮತದಾರ ಪಟ್ಟಿಯಲ್ಲಿನ ಅಕ್ರಮದ ಬಗ್ಗೆ ಮಹದೇವಪುರ ಕ್ಷೇತ್ರದ ಅಭ್ಯರ್ಥಿ ನಾಗೇಶ್ ಮತ್ತು ಅವರ ಪುತ್ರ ದಾಖಲೆಗಳನ್ನು ತೋರಿಸಿದ್ದಾರೆ. ದಿನೇಶ್ ಗುಂಡೂರಾವ್ ಪ್ರತಿನಿಧಿಸುವ ಗಾಂಧಿನಗರ ಕ್ಷೇತ್ರದಲ್ಲೂ ಇದೇ ರೀತಿ ಅಕ್ರಮ ನಡೆದಿದೆ. ಅಲ್ಲಿ ಒಂದು ವಾರ್ಡ್‌ನಲ್ಲಿ ಏಳು ಸಾವಿರ ಮತದಾರರನ್ನು ಸೇರ್ಪಡೆ ಮಾಡಲಾಗಿದೆ’ ಎಂದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.