ADVERTISEMENT

ರಾಯಚೂರು ಕಲುಷಿತ ನೀರು:ಮೃತರ ಸಂಖ್ಯೆ 7ಕ್ಕೆ, ಟ್ಯಾಂಕ್‌ನಲ್ಲಿ 20 ವರ್ಷಗಳ ಕೊಳಕು!

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 19:42 IST
Last Updated 16 ಜೂನ್ 2022, 19:42 IST
   

ರಾಯಚೂರು: ಕುಡಿಯುವ ನೀರು ಸಂಗ್ರಹಿಸಲು ನಗರಸಭೆಯಿಂದ ನಿರ್ಮಿಸಲಾದ ಓವರ್‌ಹೆಡ್‌ ಟ್ಯಾಂಕ್‌ನಲ್ಲಿ ಕೊಳಕು ತುಂಬಿದ್ದು, ಇದನ್ನು 20 ವರ್ಷಗಳಿಂದ ಸ್ವಚ್ಛಗೊಳಿಸಿಯೇ ಇಲ್ಲ!

‘ಮನೆ ಕಟ್ಟಿಕೊಂಡು ಇಲ್ಲಿ 20 ವರ್ಷಗಳಿಂದ ಇದ್ದೇನೆ. ಆದರೆ, ಟ್ಯಾಂಕ್‌ನ ಸ್ವಚ್ಛತಾ ಕಾರ್ಯ ನಡೆದಿದ್ದು ನಾನು ಒಮ್ಮೆಯೂ ನೋಡಿಲ್ಲ. ಈಗ ನಗರಸಭೆಯವರು ಸ್ವಚ್ಛ ಮಾಡಲು ಬಂದಿದ್ದಾರೆ. ನಗರಸಭೆ ನೀರಿನ ಸಹವಾಸವೇ ಬೇಡವೆಂದು ಶುದ್ಧ ನೀರಿನ ಕ್ಯಾನ್ ಖರೀದಿಸುತ್ತಿದ್ದೇವೆ ‘ ಎಂದು ಇಂದಿರಾನಗರದ (ವಾರ್ಡ್‌ ಸಂಖ್ಯೆ 4) ನಿವಾಸಿ ಉದಯಕುಮಾರ್‌ ‘ಪ್ರಜಾವಾಣಿ‘ ತಿಳಿಸಿದರು.

‘ತುಂಗಭದ್ರಾ ನದಿ ನೀರು ಸಂಸ್ಕರಣೆ ಆಗುವ ರಾಂಪುರ ಶುದ್ಧೀಕರಣ ಘಟಕದಲ್ಲಿ ಹಲವು ವರ್ಷಗಳಿಂದ ಸಂಗ್ರಹವಾಗಿದ್ದ 4 ಅಡಿಗಳಷ್ಟು ಹೂಳನ್ನು ಈಗಷ್ಟೆ ತೆರವು ಮಾಡಲಾಗಿದೆ.ಮೂರು ತಿಂಗಳಿಗೊಮ್ಮೆ ಸಂಸ್ಕರಣೆ ಘಟಕದ ಹೂಳು ತೆರವಾಗಬೇಕು. 20 ವರ್ಷಗಳಿಂದ ಅದರಲ್ಲಿ ಕೊಳಕು ಸಂಗ್ರಹವಾಗುತ್ತಿದ್ದು, ಅದೇ ನೀರು ಪೂರೈಕೆಯಾಗುತ್ತಿದೆ. ವಾಂತಿ ಭೇದಿ ಪ್ರಕರಣ ಉಲ್ಬಣಿಸಲು ಇದೇ ಕಾರಣ’ ಎಂದು ನಿವಾಸಿಗಳು ಹೇಳುತ್ತಾರೆ.

ADVERTISEMENT

ಹಳೆಯ ಘಟಕದ ಪಕ್ಕದಲ್ಲಿ ₹5.3 ಕೋಟಿ ವೆಚ್ಚದಲ್ಲಿ ಹೊಸ ನೀರು ಸಂಸ್ಕರಣಾ ಘಟಕ ನಿರ್ಮಾಣವಾಗಿ ಮೂರು ವರ್ಷಗಳಾದರೂ ನಗರಸಭೆ ತನ್ನ ವ್ಯಾಪ್ತಿಗೆ ಪಡೆದಿರಲಿಲ್ಲ. ಈಗ ಎಚ್ಚೆತ್ತಿರುವ ನಗರಸಭೆಯು ನೂತನ ಘಟಕದ ಬಳಕೆಗೆ ಮುಂದಾಗಿದೆ.

ಮಹಿಳೆ ಸಾವು; ಮೃತರ ಸಂಖ್ಯೆ 7ಕ್ಕೆ

ಕಲುಷಿತ ನೀರು ಕುಡಿದು ವಾಂತಿ ಭೇದಿಯಿಂದ ನರಳುತ್ತಿದ್ದ ವಾರ್ಡ್‌ ಸಂಖ್ಯೆ 14ರ ನಿವಾಸಿ ಶಮೀಮ್‌ ಬೇಗಂ (48) ಮೇ 30ರಂದು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಬುಧವಾರ ಆಸ್ಪತ್ರೆಯವರು ಅದನ್ನು ದೃಢಪಡಿಸಿದ್ದಾರೆ. ಇದರಿಂದ ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

‘ಯಾವುದೇ ಸಾವಿನ ವರದಿಯನ್ನು ಜಿಲ್ಲಾ ಆರೋಗ್ಯ ಇಲಾಖೆ ಪರಿಶೀಲಿಸಿದ ಬಳಿಕ, ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು‘ ಎಂದು ನಗರಸಭೆ ಪೌರಾಯುಕ್ತ ಗುರುಲಿಂಗಪ್ಪ ‘ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.