ADVERTISEMENT

ಕೊಡಗಿನಲ್ಲಿ ಬಿಡುವು ನೀಡದ ಮಳೆ; ಹವಾಮಾನ ಇಲಾಖೆಯಿಂದ ರೆಡ್‌ ಅಲರ್ಟ್ ಘೋಷಣೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 7:30 IST
Last Updated 6 ಆಗಸ್ಟ್ 2022, 7:30 IST
ಕೊಡಗು ಜಿಲ್ಲೆಯ ಭಾಗಮಂಡಲ–ನಾಪೋಕ್ಲು ರಸ್ತೆ
ಕೊಡಗು ಜಿಲ್ಲೆಯ ಭಾಗಮಂಡಲ–ನಾಪೋಕ್ಲು ರಸ್ತೆ   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶನಿವಾರವೂ ಮಳೆ ಬಿಡುವು ನೀಡಿಲ್ಲ. ನಿರಂತರವಾಗಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಜನರು ಹೊರಬರಲಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಜೋರಾಗಿ ಬೀಸುತ್ತಿರುವ ಗಾಳಿಯಿಂದ ಹಲವೆಡೆ ಮರಗಳು ಉರುಳಿ, ವಿದ್ಯುತ್ ಕಂಬಗಳು ಬುಡಮೇಲಾಗಿವೆ. ಇದರಿಂದ ಜಿಲ್ಲೆಯ ಬಹುಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಮತ್ತೊಂದೆಡೆ ಭಾಗಮಂಡಲ–ಕರಿಕೆ ರಸ್ತೆಯಲ್ಲಿ ಕುಸಿದಿದ್ದ ಮಣ್ಣನ್ನು ಹರಸಾಹಸಪಟ್ಟು ರಕ್ಷಣಾ ಸಿಬ್ಬಂದಿ ತೆಗೆದಿದ್ದರೂ ಬೆಟ್ಟ, ಗುಡ್ಡಗಳಿಂದ ನಿರಂತರವಾಗಿ ನೀರು ಹರಿಯುತ್ತಿದೆ. ಕೆಸರು ಮಿಶ್ರಿತ ನೀರಿನಿಂದ ಇಲ್ಲಿ ಸಂಚರಿಸುವುದು ಅಪಾಯಕಾರಿಯಾಗಿ ಪರಿಣಮಿಸಿದೆ.

ಈಗಾಗಲೇ ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಮೂರ್ನಾಡು– ನಾಪೋಕ್ಲು ರಸ್ತೆಯಲ್ಲೂ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಗಳಿವೆ. ಸೋಮವಾರಪೇಟೆಯಲ್ಲಿ ಕೆಲವು ಮನೆಗಳಿಗೆ ಹಾನಿಯಾಗಿದೆ.

ADVERTISEMENT

ಸೇತುವೆಗಳು ಹಾನಿಗೀಡಾಗಿ ಸಂಪರ್ಕ ಕಳೆದುಕೊಂಡಿರುವ ದಬ್ಬಡ್ಕ, ಊರುಬೈಲು ಗ್ರಾಮಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಹ ಇದೀಗ ಕೈಕೊಟ್ಟಿದೆ. ಮದೆ ಗ್ರಾಮ ಪಂಚಾಯಿತಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಗುಡ್ಡಕುಸಿತದ ಭೀತಿ ಎದುರಾಗಿದೆ.

ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಿಗ್ಗೆ 8.30ರವರೆಗೆ ಮಡಿಕೇರಿ, ಮದೆ, ಗಾಳಿಬೀಡು ವ್ಯಾಪ್ತಿಗಳಲ್ಲಿ 12 ಸೆಂ.ಮೀಗೂ ಅಧಿಕ ಮಳೆ ಸುರಿದಿದೆ. ಭಾಗಮಂಡಲದಲ್ಲಿ 11, ವಿರಾಜಪೇಟೆಯ ಶೆಟ್ಟಿಗೆರೆಯಲ್ಲಿ 9, ಸೋಮವಾರಪೇಟೆ ತಾಲ್ಲೂಕಿನ ಚೌಡ್ಲು ಗ್ರಾಮದಲ್ಲಿ 8, ಸೋಮವಾರಪೇಟೆ, ಮಡಿಕೇರಿ ತಾಲ್ಲೂಕಿನ ಮೇಕೇರೆಯಲ್ಲಿ 6 ಸೆಂ.ಮೀ ಮಳೆ ಸುರಿದಿದೆ. ಮಳೆಯು ಇನ್ನೂ ಮುಂದುವರಿದಿದ್ದು, ಜಿಲ್ಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಹವಾಮಾನ ಇಲಾಖೆ ರೆಡ್‌ ಅಲರ್ಟ್ ಘೋಷಿಸಿದ್ದು, ಶಾಲೆಗಳು ಹಾಗೂ ಅಂಗನವಾಡಿಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.