ADVERTISEMENT

ಮಳೆಗೆ ಉರುಳಿದ ವಿದ್ಯುತ್ ಕಂಬ, ಮರ

ಕಲಬುರ್ಗಿ ನಗರದಲ್ಲಿ ಅರ್ಧಗಂಟೆ ಬಿರುಸಿನ ಮಳೆ; ಮಾಯವಾದ ಸೆಖೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 18:39 IST
Last Updated 2 ಜೂನ್ 2019, 18:39 IST
ಕಲಬುರ್ಗಿ ನಗರದಲ್ಲಿ ಭಾನುವಾರ ಮಧ್ಯಾಹ್ನ ಬೀಸಿದ ಭಾರಿ ಗಾಳಿಯಿಂದಾಗಿ ಪಂಡಿತ್‌ ಎಸ್‌.ಎಂ.ಪಂಡಿತ ರಂಗಮಂದಿರ ಆವರಣದಲ್ಲಿರುವ ಮರವೊಂದು ನೆಲಕ್ಕುರುಳಿದ್ದು, ಮರದ ಕೆಳಗೆ ನಿಲ್ಲಿಸಿದ್ದ ವಾಹನವನ್ನು ಬೈಕ್‌ ಮಾಲೀಕರು ತೆಗೆದ ನೋಟ
ಕಲಬುರ್ಗಿ ನಗರದಲ್ಲಿ ಭಾನುವಾರ ಮಧ್ಯಾಹ್ನ ಬೀಸಿದ ಭಾರಿ ಗಾಳಿಯಿಂದಾಗಿ ಪಂಡಿತ್‌ ಎಸ್‌.ಎಂ.ಪಂಡಿತ ರಂಗಮಂದಿರ ಆವರಣದಲ್ಲಿರುವ ಮರವೊಂದು ನೆಲಕ್ಕುರುಳಿದ್ದು, ಮರದ ಕೆಳಗೆ ನಿಲ್ಲಿಸಿದ್ದ ವಾಹನವನ್ನು ಬೈಕ್‌ ಮಾಲೀಕರು ತೆಗೆದ ನೋಟ   

ಕಲಬುರ್ಗಿ: ನಗರದಲ್ಲಿ ಭಾನುವಾರ ಮಧ್ಯಾಹ್ನ ಅರ್ಧಗಂಟೆ ಬಿರುಸಿನ ಮಳೆ ಸುರಿಯಿತು. ಇದರಿಂದಾಗಿ ರಸ್ತೆಗಳಲ್ಲಿ ನೀರು ಹರಿಯಿತು. ಬೆಳಿಗ್ಗೆಯಿಂದಲೇ ಬಿಸಿಲ ಝಳದಿಂದ ಕಂಗೆಟ್ಟಿದ್ದ ಜನತೆ ಮಳೆ ಬಂದ ಕೂಡಲೇ ನೆಮ್ಮದಿಯ ನಿಟ್ಟಿಸಿರು ಬಿಟ್ಟರು. ಮಕ್ಕಳು ಮರದ ಕೆಳಗಡೆ ನಿಂತು ಮರದಲ್ಲಿ ರೆಂಬೆಗಳನ್ನು ಅಲುಗಾಡಿಸಿದರು. ಮಳೆ ನೀರು ಮೈಮೇಲೆ ಬಿದ್ದ ಕೂಡಲೇ ಪುಳಕಗೊಂಡರು.

ಮಳೆ ಆರಂಭಕ್ಕೂ ಮುನ್ನ ಬಿರುಗಾಳಿ ಬೀಸಿತು. ಇದರಿಂದಾಗಿ, ರಂಗಮಂದಿರ ಆವರಣದಲ್ಲಿನ ಎರಡು ಮರಗಳು ನೆಲಕ್ಕುರುಳಿದವು. ಜಗತ್‌ ವೃತ್ತದ ಬಳಿ ಇರುವ ಯಲ್ಲಮ್ಮ ದೇವಸ್ಥಾನದ ಬಳಿ ವಿದ್ಯುತ್‌ ಕಂಬವು ಬಾಗಿದ್ದರಿಂದ ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಹೀಗಾಗಿ, ತಕ್ಷಣವೇ ಜೆಸ್ಕಾಂ ಸಿಬ್ಬಂದಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ನಂತರ ಕಂಬ ಮೇಲೆತ್ತುವ ಕಾರ್ಯಾಚರಣೆ ನಡೆಸಿದರು.

ನಗರದಲ್ಲಿ ಭಾನುವಾರ 42 ಡಿಗ್ರಿ ತಾಪಮಾನ ದಾಖಲಾಗಿತ್ತು. ಮಧ್ಯಾಹ್ನದವರೆಗೂ ಬಿಸಿ ಗಾಳಿ ಬೀಸುವ ಮೂಲಕ ಸಂತೆಗೆ, ಆಸ್ಪತ್ರೆ ಸೇರಿದಂತೆ ವಿವಿಧ ಕೆಲಸಗಳಿಗಾಗಿ ನಗರಕ್ಕೆ ಬಂದ ಜನರನ್ನು ಹೈರಾಣುಗೊಳಿಸಿತು. ಮಳೆಗೂ ಮುನ್ನ ಬೀಸಿದ ಬಿರುಗಾಳಿಯಿಂದಾಗಿ ರಸ್ತೆ ಪಕ್ಕದಲ್ಲಿದ್ದ ತ್ಯಾಜ್ಯಗಳು ರಸ್ತೆಯ ಮೇಲೆಲ್ಲ ತೂರಾಡಿದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.