ಮಂಗಳೂರು: ಶ್ರಮಿಕ ವರ್ಗದವರೇ ರಚಿಸಿಕೊಂಡಿರುವ ತಂಡವೊಂದು ಸರ್ಕಾರಿ ಶಾಲೆ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಅಭಿಯಾನವನ್ನು ಕೈಗೆತ್ತಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 13 ಶಾಲೆಗಳಲ್ಲಿ ‘ಸ್ವಚ್ಛಾಲಯ’ಗಳು ರೂಪುಗೊಂಡಿವೆ.
ಕಾರು ಚಾಲಕರು, ಎಲೆಕ್ಟ್ರಿಷಿಯನ್, ಪ್ಲಂಬರ್, ಕಟ್ಟಡ ಕೆಲಸಗಾರರು, ಸೆಕ್ಯುರಿಟಿ ಗಾರ್ಡ್ ಮತ್ತಿತರ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಸಮಾನ ಮನಸ್ಕ ಕಾರ್ಮಿಕರು ಸಮಾಜ ಸೇವೆ ಮಾಡುವ ಹಂಬಲದಿಂದ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಎಂಬ ಸಂಘಟನೆ ಅಡಿಯಲ್ಲಿ ಜನೋಪಯೋಗಿ ಕೆಲಸಗಳನ್ನು ಮಾಡುತ್ತಿದ್ದಾರೆ.
ಇದರ ಭಾಗವಾಗಿ ಸಂಘಟನೆಯ ಮಂಗಳೂರು ತಾಲ್ಲೂಕು ಘಟಕವು ಸರ್ಕಾರಿ ಶಾಲೆ ಶೌಚಾಲಯಗಳ ‘ಸ್ವಚ್ಛಾಲಯ’ ಅಭಿಯಾನವನ್ನು ಕಳೆದ ನವೆಂಬರ್‌ನಲ್ಲಿ ಪ್ರಾರಂಭಿಸಿದೆ.
ಬಿಡುವಿನ ವೇಳೆ ಶಾಲೆಗಳಿಗೆ ತೆರಳುವ ತಂಡದ ಸ್ವಯಂ ಸೇವಕರು, ಹಾರೆ, ಗುದ್ದಲಿ ಹಿಡಿದು, ಸುತ್ತಮುತ್ತಲಿನ ಗಿಡಗಂಟಿಗಳನ್ನು ತೆರವುಗೊಳಿಸಿ, ಶೌಚಾಲಯವನ್ನು ನಿರ್ಮಲಗೊಳಿಸುತ್ತಾರೆ. ಗೋಡೆಗೆ ಅಂಟಿಕೊಂಡ ಪಾಚಿಯನ್ನು ತೆಗೆದು, ಬಣ್ಣ ಬಳಿಯುತ್ತಾರೆ. ವಿದ್ಯುತ್ ಸಂಪರ್ಕ, ಬಾಗಿಲು ದುರಸ್ತಿ ಮಾಡಿ, ಕಿತ್ತು ಹೋದ ಟೈಲ್ಸ್ ನಡುವೆ ಸಿಮೆಂಟ್ ಮೆತ್ತಿ ಶೌಚಾಲಯವನ್ನು ಒಪ್ಪಗೊಳಿಸುತ್ತಾರೆ.
‘ಸರ್ಕಾರಿ ಶಾಲೆ ಮಕ್ಕಳ ಆರೋಗ್ಯ, ಹಕ್ಕು ಸಂರಕ್ಷಣೆಯ ಉದ್ದೇಶದಿಂದ ಈ ಅಭಿಯಾನ ನಡೆಸುತ್ತಿದ್ದೇವೆ. ನಾಲ್ಕು ತಿಂಗಳುಗಳಲ್ಲಿ ಮಂಗಳೂರು, ಬೆಳ್ತಂಗಡಿ, ಬಂಟ್ವಾಳ ತಾಲ್ಲೂಕುಗಳ ಒಟ್ಟು 13 ಶಾಲೆಗಳ ಶೌಚಾಲಯಗಳನ್ನು ಸ್ವಚ್ಛಗೊಳಿಸಿ, ನವೀಕರಿಸಲಾಗಿದೆ. ನಾವೆಲ್ಲರೂ ದುಡಿದು ತಿನ್ನುವವರು. ವೃತ್ತಿಯಲ್ಲಿ ಬಿಡುವು ಸಿಕ್ಕಾಗ ಸೇವಾ ಕಾರ್ಯದಲ್ಲಿ ತೊಡಗುತ್ತೇವೆ. ಬೆಳಕಿನ ವ್ಯವಸ್ಥೆ ಇದ್ದಲ್ಲಿ ರಾತ್ರಿ 10 ಗಂಟೆಯವರೆಗೂ ಶೌಚಾಲಯ ದುರಸ್ತಿ ಕೆಲಸ ಮಾಡಿದ್ದಿದೆ’ ಎನ್ನುತ್ತಾರೆ ವೃತ್ತಿಯಲ್ಲಿ ಕಾರು ಚಾಲಕರಾಗಿರುವ ಯೋಜನೆಯ ರೂವಾರಿ ಸಂತೋಷ್ ಕೊಲ್ಯ.
‘ಹಲವಾರು ವರ್ಷಗಳಿಂದ ಬಳಕೆಯಾಗದೇ ಇದ್ದ ಶೌಚಾಲಯಗಳೂ ಕೆಲವು ಶಾಲೆಗಳಲ್ಲಿ ಇದ್ದವು. ಅವುಗಳನ್ನು ಸಂಪೂರ್ಣ ನವೀಕರಿಸಿ, ಮಕ್ಕಳ ಬಳಕೆಗೆ ಮುಕ್ತ ಮಾಡಲಾಗಿದೆ. ಚಿಕ್ಕಮಕ್ಕಳಲ್ಲಿ ಅರಿವು ಮೂಡಿಸಿದರೆ ಭವಿಷ್ಯದಲ್ಲಿ ಅವರು ಜವಾಬ್ದಾರಿಯುತ ನಾಗರಿಕರಾಗಬಹುದೆಂಬ ನಿರೀಕ್ಷೆಯಲ್ಲಿ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನೇ ಅಭಿಯಾನಕ್ಕೆ ಆಯ್ದುಕೊಳ್ಳಲಾಗಿದೆ. ಮೂರು ವರ್ಷಗಳಲ್ಲಿ 1,000 ಶಾಲೆಗಳ ಶೌಚಾಲಯಗಳನ್ನು ‘ಸ್ವಚ್ಛಾಲಯ’ವಾಗಿ ರೂಪಿಸುವ ಯೋಜನೆ ಇದೆ’ ಎನ್ನುತ್ತಾರೆ ಅವರು.
‘ಕಾರ್ಯಕ್ರಮ ಅನುಷ್ಠಾನಕ್ಕೆ ಶಿಕ್ಷಣ ಇಲಾಖೆಯ ಅನುಮತಿ ದೊರೆತಿದೆ. ಮೊದಲ ಹಂತದಲ್ಲಿ ಶಾಲೆಗೆ ಭೇಟಿ ನೀಡಿ ಅಂದಾಜು ವೆಚ್ಚ, ಕೆಲಸ ಕೈಗೊಳ್ಳಬೇಕಾದ ದಿನಗಳನ್ನು ಲೆಕ್ಕ ಹಾಕಿ, ಯೋಜನೆ ರೂಪಿಸಲಾಗುತ್ತದೆ. ಈವರೆಗೆ ನಡೆದಿರುವ ಅಭಿಯಾನವನ್ನು ಗಮನಿಸಿರುವ ಹಲವಾರು ಶಿಕ್ಷಕರು, ತಮ್ಮ ಶಾಲೆಯಲ್ಲೂ ಶ್ರಮದಾನ ನಡೆಸುವಂತೆ ಪ್ರೀತಿಯ ಆಹ್ವಾನ ನೀಡುತ್ತಿದ್ದಾರೆ’ ಎಂದು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ದೀಪಕ್ ಜಿ. ಬೆಳ್ತಂಗಡಿ ಹೇಳುತ್ತಾರೆ.
‘ವಂತಿಗೆಯಿಂದ ₹1.5 ಲಕ್ಷ ವೆಚ್ಚ’
‘ಒಂದು ಶಾಲೆಯ ಶೌಚಾಲಯಗಳ ದುರಸ್ತಿ ಪೇಂಟಿಂಗ್ ಕಾರ್ಯಕ್ಕೆ ಸರಾಸರಿ ₹12 ಸಾವಿರ ವೆಚ್ಚವಾಗುತ್ತದೆ. ಈವರೆಗೆ ಸುಮಾರು ₹1.5 ಲಕ್ಷ ಖರ್ಚಾಗಿದ್ದು ಸಂಘಟನೆಯ ಸದಸ್ಯರ ವಂತಿಗೆಯಿಂದ ₹1 ಲಕ್ಷ ಸಂಗ್ರಹಿಸಿದ್ದೇವೆ. ಸಂಘಟನೆಯ ಕಾರ್ಯವನ್ನು ಗಮನಿಸಿ ಸುರತ್ಕಲ್ ರೋಟರಿ ಕ್ಲಬ್ ಬೆಂಗಳೂರಿನ ರಾಹುಲ್ ಮೆಮೊರಿಯಲ್ ಫೌಂಡೇಷನ್ ಆರ್ಥಿಕ ನೆರವು ನೀಡಲು ಮುಂದೆ ಬಂದಿವೆ’ ಎಂದು ಸಂತೋಷ್ ಕೊಲ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
‘ರಾಜಕೇಸರಿ’ಯ ಕಾರ್ಯಕರ್ತರು ಶೌಚಾಲಯ ದುರಸ್ತಿಗೊಳಿಸಿ ಕೊಟ್ಟಿದ್ದು ಮಕ್ಕಳಿಗೆ ಉಪಕಾರಿಯಾಗಿದೆ. ಕಟ್ಟಡದ ಆವರಣ ಶುಚಿಗೊಳಿಸಿ ಶೌಚಾಲಯದ ಚಿತ್ರಣವನ್ನೇ ಬದಲಿಸಿದ್ದಾರೆ.–ಸಾಧನಾ ನಾರಾಯಣನ್ ಬಾಬುಗುಡ್ಡೆ ಸರ್ಕಾರಿ ಕಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.