ADVERTISEMENT

ರಾಜ್ಯಸಭೆ ಚುನಾವಣೆ ಇಂದು: ‘ಅಡ್ಡ’ ಮತದಾನ ಯಾರಿಗೆ ಹಿತ?

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 19:56 IST
Last Updated 9 ಜೂನ್ 2022, 19:56 IST
   

ಬೆಂಗಳೂರು: ರಾಜ್ಯಸಭಾ ಚುನಾವಣೆಯ ನಾಲ್ಕು ಸ್ಥಾನಗಳ ಪೈಕಿ ಮೂರು ಸ್ಥಾನಗಳ ಆಯ್ಕೆ ನಿರಾತಂಕವಾಗಿದೆ. ಆದರೆ, ನಾಲ್ಕನೇ ಸ್ಥಾನಕ್ಕೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದ್ದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪರಸ್ಪರ ‘ಸಹಕಾರ’ ನೀಡದಿರುವ ಬಗ್ಗೆ ಬಿಗಿ ನಿಲುವು ತಳೆದಿವೆ. ಇದರ ಪರಿಣಾಮ ಶುಕ್ರವಾರ ನಡೆಯುವ ಮತದಾನ ವೇಳೆ ‘ಅಡ್ಡ ಮತದಾನ’ ಹಾಗೂ ಕೊನೆ ಕ್ಷಣದ ನಾಟಕೀಯ ಬೆಳವಣಿಗೆಗಳ ಸಾಧ್ಯತೆ ದಟ್ಟವಾಗಿದೆ.

ಬಿಜೆಪಿ ತನ್ನ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸದ್ದಿಲ್ಲದೇ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಕೆಲವು ಶಾಸಕರ ಮತವನ್ನು ಸೆಳೆಯುವ ಪ್ರಯತ್ನವನ್ನೂ ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್‌.ಅಶೋಕ ಅವರು ಇದರ ಉಸ್ತುವಾರಿ ನೋಡಿಕೊಂಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಬಿಜೆಪಿಯಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಜಗ್ಗೇಶ್‌, ಕಾಂಗ್ರೆಸ್‌ನ ಜೈರಾಂ ರಮೇಶ್‌ ಅವರಿಗೆ ಗೆಲುವಿನ ಹಾದಿ ಸಲೀಸು. ನಾಲ್ಕನೇ ಸ್ಥಾನಕ್ಕೆ ಬಿಜೆಪಿಯಿಂದ ಲಹರ್‌ ಸಿಂಗ್‌ ಸಿರೋಯಾ, ಕಾಂಗ್ರೆಸ್‌ನಿಂದ ಮನ್ಸೂರ್‌ ಖಾನ್‌ ಮತ್ತು ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ.

ADVERTISEMENT

ಜೆಡಿಎಸ್‌ನಿಂದ ಅಡ್ಡ ಮತದಾನ ಮಾಡುವ ಸಾಧ್ಯತೆ ಇರುವ ಶಾಸಕರನ್ನು ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರು ವೈಯಕ್ತಿಕವಾಗಿ ಭೇಟಿ ಮಾಡಿ ಸಮಾಧಾನಪಡಿಸಿ, ಅವರ ಮತಗಳನ್ನು ಖಾತರಿಪಡಿಸಿಕೊಂಡಿದ್ದಾರೆ.

ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡು, ಎಚ್.ಡಿ.ಕುಮಾರ ಸ್ವಾಮಿ ಜತೆಗೆ ಮುನಿಸಿಕೊಂಡಿರುವ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಮತ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ.ಈ ಬಗ್ಗೆ ‘ಪ್ರಜಾವಾಣಿ’ಗೆ ಸ್ಪಷ್ಟನೆ ನೀಡಿದ ಅವರು, ‘ಜೆಡಿಎಸ್‌ನಿಂದ ಶಾಸಕನಾಗಿ ಆಯ್ಕೆ ಆಗಿದ್ದೇನೆ. ಕುಪೇಂದ್ರ ರೆಡ್ಡಿ ಅವರು ಮತ ಕೇಳಿದ್ದಾರೆ. ಹಾಗಾಗಿ ಅವರಿಗೆ ಮತ ನೀಡುತ್ತೇನೆ’ ಎಂದು ಹೇಳಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್, ಕುಟುಂಬ ಸಮೇತರಾಗಿ ದುಬೈ ಪ್ರವಾಸಕ್ಕೆ ತೆರಳಿದ್ದಾರೆ. ಕುಪೇಂದ್ರ ರೆಡ್ಡಿ ಪ್ರಯತ್ನದ ಫಲವಾಗಿ ಗೌರಿಶಂಕರ್ ಪ್ರವಾಸ ಮೊಟಕುಗೊಳಿಸಿ, ಶುಕ್ರವಾರ ಮತ ಚಲಾಯಿಸಲು ಬರಲಿದ್ದಾರೆ.

ಈ ಕುರಿತು ದುಬೈನಿಂದ ‘ಪ್ರಜಾವಾಣಿ’ ಜತೆ ಮಾತನಾಡಿದ ಗೌರಿಶಂಕರ್‌, ‘ಚುನಾವಣೆ ದಿನಾಂಕ ಪ್ರಕಟವಾಗುವ ಮೊದಲೇ ಪ್ರವಾಸ ನಿಗದಿಯಾಗಿತ್ತು. ಹಾಗಾಗಿ ದುಬೈಗೆ ಬಂದಿದ್ದೇನೆ. ಗುರುವಾರ ರಾತ್ರಿ ಬೆಂಗಳೂರಿಗೆ ವಾಪಸಾಗುತ್ತಿದ್ದು, ಶುಕ್ರವಾರ ಎಚ್.ಡಿ.ಕುಮಾರಸ್ವಾಮಿ ಜತೆಯಲ್ಲೇ ಮತ ಹಾಕುತ್ತೇನೆ’ ಎಂದು ತಿಳಿಸಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪರಸ್ಪರ ಕೈಜೋಡಿಸಿದರೆ ತಮ್ಮ ಒಬ್ಬ ಅಭ್ಯರ್ಥಿಯನ್ನು ಸುಲಭವಾಗಿ ಗೆಲ್ಲಿಸಿಕೊಳ್ಳಲು ಸಾಧ್ಯವಿದೆ. ಆದರೆ, ಕಾಂಗ್ರೆಸ್‌ನ ಸಿದ್ದರಾಮಯ್ಯ ಮತ್ತು ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ಇದನ್ನು ‘ಪ್ರತಿಷ್ಠೆ’ಯ ವಿಷಯವಾಗಿಸಿಕೊಂಡು ಕೊನೆ ಹಂತದಲ್ಲೂ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್ ಶಾಸಕರಿಗೆ ಸಿದ್ದರಾಮಯ್ಯ ಪತ್ರ
‘ಆತ್ಮಸಾಕ್ಷಿಗೆ ದನಿಯಾಗಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿ’ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್ ಶಾಸಕರಿಗೆ ಪತ್ರ ಬರೆದಿದ್ದಾರೆ.

‘ಮನ್ಸೂರು ಅಲಿ ಖಾನ್ ಅವರ ಗೆಲುವು ಯಾವುದೇ ಒಂದು ಪಕ್ಷದ ಗೆಲುವಾಗದೇ ಜಾತ್ಯತೀತ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿರುವ ಕಾಂಗ್ರೆಸ್‌ ಮತ್ತು ಜಾತ್ಯತೀತ ಜನತಾದಳ ಪಕ್ಷಗಳೆರಡರ ಸೈದ್ಧಾಂತಿಕ ಗೆಲುವಾಗುತ್ತದೆ. ಪ್ರಜಾಪ್ರತಿನಿಧಿಗಳಾದ ನಾವೆಲ್ಲರೂ ನಮ್ಮ ಪ್ರಭುಗಳಾದ ಪ್ರಜೆಗಳ ಆತ್ಮಸಾಕ್ಷಿಗೆ ದನಿಯಾಗಬೇಕಾಗಿರುವುದು ಕರ್ತವ್ಯ. ಈ ಆತ್ಮಸಾಕ್ಷಿಯ ಮತವನ್ನು ಜಾತ್ಯತೀತತೆಗೆ ಬದ್ಧವಾಗಿರುವ ನಮ್ಮ ಪಕ್ಷದ ಮನ್ಸೂರ್‌ ಖಾನ್‌ ಅವರಿಗೆ ಮತ ಚಲಾಯಿಸಬೇಕು’ ಎಂದು ಮನವಿ ಮಾಡಿದ್ದಾರೆ.

ನಾಚಿಕೆ ಆಗಲ್ವಾ: ಎಚ್‌ಡಿಕೆ ಆಕ್ರೋಶ
‘ಕಾಂಗ್ರೆಸ್‌ಗೆ ಮತ ಹಾಕುವಂತೆ ನಮ್ಮ ಪಕ್ಷದ ಶಾಸಕರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರಿಗೆ ನಾಚಿಕೆ ಆಗಬೇಕು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

‘ನಮ್ಮ ಪಕ್ಷದ ಶಾಸಕರಿಗೆ ಅವರು ಹೇಗೆ ಪತ್ರ ಬರೆಯುತ್ತಾರೆ? ಒಂದು ಕಡೆ ಜೆಡಿಎಸ್‌ ಪಕ್ಷ ಬಿಜೆಪಿಯ ಬಿ–ಟೀಂ ಎಂದು ಟೀಕೆ ಮಾಡುತ್ತಾರೆ. ಇನ್ನೊಂದು ಕಡೆ ನಮ್ಮದೇ ಶಾಸಕರಿಗೆ ಪತ್ರ ಬರೆದು ಮತ ಕೇಳುತ್ತಾರೆ’ ಎಂದರು.

‘ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿಸಿದರೂ ಕಾಂಗ್ರೆಸ್‌ ಗೆಲ್ಲಲು ಸಾಧ್ಯವೇ ಇಲ್ಲ. ನಮಗೆ ಅಡ್ಡ ಮತದಾನದ ಆತಂಕವೂ ಇಲ್ಲ, ಭಯವೂ ಇಲ್ಲ. ಸಿದ್ದರಾಮಯ್ಯ ಅವರು ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ಜೆಡಿಎಸ್‌ನ ಎರಡೂ ಕಣ್ಣು ಹೋಗಲಿ ಎನ್ನುವಂತೆ ವರ್ತಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.