ADVERTISEMENT

ರಾಜ್ಯಸಭೆ ಚುನಾವಣೆ: ಬೆಂಬಲ ಕೋರಿದ ‘ಕೈ’, ಮಣಿಯದ ದಳ

ಕಾಂಗ್ರೆಸ್‌ – ಜೆಡಿಎಸ್‌ ಪಕ್ಷಗಳ ನಡುವೆ ಜೋರಾದ ಹಗ್ಗ ಜಗ್ಗಾಟ

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 19:32 IST
Last Updated 8 ಜೂನ್ 2022, 19:32 IST
ಡಿ.ಕೆ.ಶಿವಕುಮಾರ್ ಮತ್ತು ಎಚ್. ಡಿ. ಕುಮಾರಸ್ವಾಮಿ
ಡಿ.ಕೆ.ಶಿವಕುಮಾರ್ ಮತ್ತು ಎಚ್. ಡಿ. ಕುಮಾರಸ್ವಾಮಿ   

ಬೆಂಗಳೂರು: ರಾಜ್ಯಸಭೆ ಚುನಾವಣೆಯ ಮತದಾನದ ದಿನ ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ನಡುವಿನ ಹಗ್ಗ ಜಗ್ಗಾಟ ಜೋರಾಗಿದೆ. ತನ್ನ ಎರಡನೇ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಕಾಂಗ್ರೆಸ್‌ ಮನವಿ ಮಾಡಿದ್ದರೆ, ಪಕ್ಷದ ಅಭ್ಯರ್ಥಿಯನ್ನು ಕಣದಿಂದ ನಿವೃತ್ತಿಗೊಳಿಸಲು ಜೆಡಿಎಸ್‌ ಸ್ಪಷ್ಟವಾಗಿ ನಿರಾಕರಿಸಿದೆ.

ಜೆಡಿಎಸ್‌ ಅಭ್ಯರ್ಥಿ ಡಿ. ಕುಪೇಂದ್ರ ರೆಡ್ಡಿ ಅವರನ್ನು ಸ್ಪರ್ಧೆಯಿಂದ ನಿವೃತ್ತಿಗೊಳಿಸಿ ತಮ್ಮ ಎರಡನೇ ಅಭ್ಯರ್ಥಿ ಮನ್ಸೂರ್‌ ಅಲಿಖಾನ್‌ ಅವರಿಗೆ ಬೆಂಬಲ ನೀಡುವಂತೆ ಕಾಂಗ್ರೆಸ್‌ ಬೇಡಿಕೆ ಇಟ್ಟಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರು ಜೆಡಿಎಸ್‌ ವರಿಷ್ಠರನ್ನು ಸಂಪರ್ಕಿಸಿ, ಈ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ.

ಆದರೆ, ತಮ್ಮ ಅಭ್ಯರ್ಥಿ ಕಣದಲ್ಲೇ ಉಳಿಯುತ್ತಾರೆ ಎನ್ನುವ ಮೂಲಕ ಕಾಂಗ್ರೆಸ್‌ ಬೇಡಿಕೆಗೆ ಮಣಿಯುವುದಿಲ್ಲ ಎಂಬ ಸಂದೇಶ ರವಾನಿಸಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ, ಎರಡೂ ಪಕ್ಷಗಳ ಶಾಸಕರ ಎರಡನೇ ಪ್ರಾಶಸ್ತ್ಯದ ಮತಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಪ್ರಸ್ತಾವ ಮುಂದಿಟ್ಟಿದ್ದಾರೆ.

ADVERTISEMENT

ಕಾಂಗ್ರೆಸ್‌ ಕಡೆ ಬೆರಳು ತೋರಿಸಬೇಡಿ: ‘ಕೆಡಿಸುವ ಆಟ ಅಡುತ್ತಿರುವುದು ಜೆಡಿಎಸ್. ಕಾಂಗ್ರೆಸ್ ಅಧಿಕ ಸಂಖ್ಯೆಯಲ್ಲಿದ್ದಾಗಲೂ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲಾಗಿತ್ತು. ಹೀಗಿರುವಾಗ ಕುಮಾರಸ್ವಾಮಿ ಅವರು ಕಾಂಗ್ರೆಸ್ ಕಡೆ ಬೆರಳು ತೋರಿಸುವುದು ಸರಿಯಲ್ಲ’ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಧಾರವಾಡದಲ್ಲಿ ತಿಳಿಸಿದರು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.