ADVERTISEMENT

66 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

10 ಸಂಸ್ಥೆಗಳಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 22:15 IST
Last Updated 31 ಅಕ್ಟೋಬರ್ 2021, 22:15 IST
ಕೃಷ್ಣ ಕೊಲ್ಹಾರ ಕುಲಕರ್ಣಿ
ಕೃಷ್ಣ ಕೊಲ್ಹಾರ ಕುಲಕರ್ಣಿ   

ಬೆಂಗಳೂರು: ಸಾಹಿತಿ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ಚಿತ್ರನಟ ದೇವರಾಜ್‌, ಟೆನಿಸ್‌ ಆಟಗಾರ ರೋಹನ್‌ ಬೋಪಣ್ಣ, ದೇವದಾಸಿಯರ ಪುನರ್ವಸತಿಗಾಗಿ ಕೆಲಸ ಮಾಡುತ್ತಿರುವ ಬೆಳಗಾವಿ ಜಿಲ್ಲೆಯ ಅಥಣಿಯ ಬಸವಪ್ರಭು ಲಕಮಗೌಡ ಪಾಟೀಲ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಪ್ರೊ.ಪಿ.ವಿ. ಕೃಷ್ಣ ಭಟ್‌ ಸೇರಿದಂತೆ 66 ಮಂದಿಯನ್ನು ಪ್ರಸಕ್ತ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್‌ ಕುಮಾರ್‌ ಭಾನುವಾರ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು
ಪ್ರಕಟಿಸಿದರು. ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್‌, ನೀರಾವರಿ ತಜ್ಞ ಕ್ಯಾಪ್ಟನ್‌ ರಾಜಾರಾವ್‌, ರಂಗಭೂಮಿ ಕಲಾವಿದ ಪ್ರಕಾಶ್‌ ಬೆಳವಾಡಿ, ಯಕ್ಷಗಾನ ಕಲಾವಿದ ಗೋಪಾಲ ಆಚಾರ್ಯ, ಪತ್ರಕರ್ತ ಪಟ್ನಂ ಅನಂತ ಪದ್ಮನಾಭ, ಯಾದಗಿರಿ ನಗರಸಭೆಯ ಪೌರಕಾರ್ಮಿಕ ಮಹಿಳೆ ರತ್ನಮ್ಮ ಶಿವಪ್ಪ ಬಬಲಾದ ಪುರಸ್ಕೃತರ ಪಟ್ಟಿ
ಯಲ್ಲಿದ್ದಾರೆ.

ರಾಜ್ಯಮಟ್ಟದ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ. ಸುದರ್ಶನ್‌, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎ.ಆರ್‌. ಪ್ರದೀಪ್‌, ದೊಮ್ಮಲೂರಿನ ಸ್ಮಶಾನ ಕಾವಲುಗಾರ ಮುನಿಯಪ್ಪ ಕೂಡ ಪುರಸ್ಕೃತರಲ್ಲಿ ಸೇರಿದ್ದಾರೆ.

ADVERTISEMENT

‘ಸೇವಾ ಸಿಂಧು ಪೋರ್ಟಲ್‌ ಮೂಲಕ ಸಾರ್ವಜನಿಕರು ಶಿಫಾರಸು ಮಾಡಿದ್ದ ಹೆಸರುಗಳನ್ನು ಪರಿಶೀಲಿಸಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಪಟ್ಟಿ ಮಾಡಲಾಯಿತು. ಅವುಗಳನ್ನು ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ರಚಿಸಿದ್ದ ಸಲಹಾ ಸಮಿತಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮುಂದೆ ಇಡಲಾಯಿತು. ಸಮಗ್ರ ಪರಿಶೀಲನೆಯ ನಂತರ ಆಯ್ಕೆ ಸಮಿತಿಯು 66 ಮಂದಿಯನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ’ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಪ್ರಶಸ್ತಿ ಪುರಸ್ಕೃತರ ಆಯ್ಕೆ ಪೂರ್ಣಗೊಂಡಿತ್ತು. ಆದರೆ, ಚಿತ್ರನಟ ಪುನೀತ್‌ ರಾಜ್‌ಕುಮಾರ್‌ ನಿಧನದ ಕಾರಣದಿಂದ ಪಟ್ಟಿ ಬಿಡುಗಡೆ ವಿಳಂಬವಾಯಿತು. ಸಮಾಜಮುಖಿ ಚಿಂತನೆಯ ಜತೆಗೆ ಸಮಾಜದ ವಿವಿಧ ವರ್ಗಗಳಿಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿರುವವರನ್ನು ಈ ಬಾರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ಹೇಳಿದ್ದಾರೆ.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ನಡೆಯುವ ಸಮಾರಂಭದಲ್ಲಿ ಎಲ್ಲರಿಗೂ ಪ್ರಶಸ್ತಿ ಪ್ರದಾನ ಮಾಡಲಾಗುವುದು. ₹ 1 ಲಕ್ಷ ನಗದು, 25 ಗ್ರಾಂ ಚಿನ್ನದ ಪದಕವನ್ನು ಪ್ರಶಸ್ತಿ ಒಳಗೊಂಡಿದೆ.

ಸುಗಮ ಸಂಗೀತ, ಚಿತ್ರಕಲೆ ಕಡೆಗಣನೆಗೆ ಆಕ್ಷೇಪ: ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆಯಲ್ಲಿ ಸುಗಮ ಸಂಗೀತ ಮತ್ತು ಚಿತ್ರಕಲಾ ಕ್ಷೇತ್ರದ ಸಾಧಕರನ್ನು ಪರಿಗಣಿಸಿಲ್ಲ. ಸರ್ಕಾರದ ಈ ನಿಲುವಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಕರ್ನಾಟಕ ಸುಗಮ ಸಂಗೀತ ಪರಿಷತ್‌ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಮತ್ತು ಚಿತ್ರ ಕಲಾವಿದ ಗಣಪತಿ ಅಗ್ನಿಹೋತ್ರಿ ಪ್ರಶಸ್ತಿ ಆಯ್ಕೆ ಸಮಿತಿಯ ತೀರ್ಮಾನವನ್ನು ಖಂಡಿಸಿದ್ದಾರೆ.

ಸುಗಮ ಸಂಗೀತ, ಚಿತ್ರಕಲೆ ಕಡೆಗಣನೆಗೆ ಆಕ್ಷೇಪ:

ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆಯಲ್ಲಿ ಸುಗಮ ಸಂಗೀತ ಮತ್ತು ಚಿತ್ರಕಲಾ ಕ್ಷೇತ್ರದ ಸಾಧಕರನ್ನು ಪರಿಗಣಿಸಿಲ್ಲ. ಸರ್ಕಾರದ ಈ ನಿಲುವಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಕರ್ನಾಟಕ ಸುಗಮ ಸಂಗೀತ ಪರಿಷತ್‌ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಮತ್ತು ಚಿತ್ರ ಕಲಾವಿದ ಗಣಪತಿ ಅಗ್ನಿಹೋತ್ರಿ ಪ್ರಶಸ್ತಿ ಆಯ್ಕೆ ಸಮಿತಿಯ ತೀರ್ಮಾನವನ್ನು ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.