
ಬೆಂಗಳೂರು: ‘ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸಲು ಬಿಜೆಪಿ ಬಳಿ ಎಷ್ಟು ಶಾಸಕರಿದ್ದಾರೆ? ಅದು ಸಾಧ್ಯವಿಲ್ಲದ ಕೆಲಸ. ಮೊದಲು ಅವರ ನಡುವಿನ ಭಿನ್ನಮತ ನಿವಾರಣೆ ಮಾಡಿಕೊಳ್ಳಲಿ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಿಜೆಪಿಯಲ್ಲಿ ಇರುವುದೇ 65 ಶಾಸಕರು. ಕಾಂಗ್ರೆಸ್‌ನಲ್ಲಿ 140 ಇದ್ದೇವೆ. ದೊಡ್ಡ ಸಂಖ್ಯೆಯ ಶಾಸಕರು ಇರುವಾಗ ಸಣ್ಣಪುಟ್ಟ ಭಿನ್ನಮತ ಸಹಜ. ಎಲ್ಲ ಸಮಸ್ಯೆಗಳನ್ನೂ ಇತ್ಯರ್ಥ ಮಾಡಿಕೊಳ್ಳುವ ಶಕ್ತಿ ಪಕ್ಷಕ್ಕೆ ಇದೆ. ಬಿಜೆಪಿ ನಾಯಕರಿಂದ ಪಾಠ ಕಲಿಯುವ ಅಗತ್ಯವಿಲ್ಲ’ ಎಂದರು.
‘2008–2013ರಲ್ಲಿ ಆಡಳಿತ ಬಿಜೆಪಿ ಅವಧಿಯಲ್ಲಿ ಎಷ್ಟು ಮುಖ್ಯಮಂತ್ರಿಗಳು ಬದಲಾದರು. ಮೂರು ವರ್ಷ ಯಡಿಯೂರಪ್ಪ, ತಲಾ ಒಂದು ವರ್ಷ ಸದಾನಂದ ಗೌಡ, ಜಗದೀಶ ಶೆಟ್ಟರ್ ಇದ್ದರು. 2019ರ ನಂತರವೂ ಯಡಿಯೂರಪ್ಪ ಅವರನ್ನು ಕೆಳಗಿಳಿಸಿ, ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಕಾಂಗ್ರೆಸ್‌ನಲ್ಲಿ 2013–18ರವರೆಗೆ ಸಿದ್ದರಾಮಯ್ಯ ಒಬ್ಬರೇ ಇದ್ದರು. ಬಿಜೆಪಿ ನಾಯಕರು ಮೊದಲು ಅವರ ಮನೆ ಸರಿ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.