ADVERTISEMENT

ಕ್ವಾರಂಟೈನ್ ಕೇಂದ್ರವಾಗಲಿದೆ ರಾಮನಗರ ಜೈಲು: ಪಾದರಾಯನಪುರ ಆರೋಪಿಗಳ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 4:26 IST
Last Updated 21 ಏಪ್ರಿಲ್ 2020, 4:26 IST
ಕೈದಿಗಳ ಸ್ಥಳಾಂತರಕ್ಕೆ ಸಜ್ಜಾಗಿರುವ ವಾಹನಗಳು ಹಾಗೂ ಪೊಲೀಸ್‌ ಸಿಬ್ಬಂದಿ
ಕೈದಿಗಳ ಸ್ಥಳಾಂತರಕ್ಕೆ ಸಜ್ಜಾಗಿರುವ ವಾಹನಗಳು ಹಾಗೂ ಪೊಲೀಸ್‌ ಸಿಬ್ಬಂದಿ    
""

ರಾಮನಗರ: ಇಲ್ಲಿನ ಜಿಲ್ಲಾ ಕಾರಾಗೃಹವು ಬೆಂಗಳೂರಿನ ಪಾದರಾಯನಪುರ ದಾಂದಲೆ ಆರೋಪಿಗಳ ಪಾಲಿಗೆ ಕ್ವಾರಂಟೈನ್ ಕೇಂದ್ರವಾಗಿ ಬದಲಾಗುತ್ತಿದೆ.

ಸದ್ಯ ಜೈಲಿನಲ್ಲಿ ಇರುವ ಎಲ್ಲ 177 ಕೈದಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ಕೈದಿಗಳನ್ನು ಕರೆದೊಯ್ಯಲು 4 ಕೆಎಸ್‌ಆರ್‌ಪಿ ವಾಹನಗಳು, 10 ಬಿಎಂಟಿಸಿ ಬಸ್‌ಗಳು ಬಂದಿವೆ. ಇವರ ಸ್ಥಳಾಂತರದ ಬಳಿಕ ಜೈಲಿನ ಒಳ ಆವರಣದ ಸ್ವಚ್ಛತಾ ಕಾರ್ಯ ನಡೆಯಲಿದೆ.

ಮಧ್ಯಾಹ್ನದ ನಂತರ ಪಾದರಾಯನಪುರ ಪ್ರಕರಣದ 54 ಆರೋಪಿಗಳನ್ನು ಇಲ್ಲಿಗೆ ಕರೆತರಲಾಗುತ್ತದೆ. ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು, ಅವರನ್ನೂ ಇದೇ ಜೈಲಿಗೆ ಕರೆತರುವ ಸಾಧ್ಯತೆ ಇದೆ. ಕ್ವಾರಂಟೈನ್ ಕೇಂದ್ರದ ರೀತಿಯಲ್ಲೇ ಆರೋಪಿಗಳ ಆರೋಗ್ಯ ತಪಾಸಣೆ ಮತ್ತು ನಿಗಾ ವಹಿಸಲು ಸೂಚನೆ ಬಂದಿದೆ ಎನ್ನಲಾಗಿದೆ.

ADVERTISEMENT

ಆತಂಕ: ರಾಮನಗರ ಕಾರಾಗೃಹವು ನಗರದ ಒಳಗೇ ಇದ್ದು, ಜಿಲ್ಲಾಧಿಕಾರಿ ಕಚೇರಿಗೆ ಹೊಂದಿಕೊಂಡಿದೆ. ಜಿಲ್ಲೆಯಲ್ಲಿ ಈವರೆಗೆ ಒಂದೂ ಕೋವಿಡ್-19 ಪ್ರಕರಣ ಪತ್ತೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ಕೊರೊನಾ ಶಂಕಿತರೂ ಒಳಗೊಂಡಂತೆ ಹೊರ ಜಿಲ್ಲೆಯ ಜನರನ್ನು ರಾಮನಗರಕ್ಕೆ ಕರೆ ತರುತ್ತಿರುವುದಕ್ಕೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.