ಮೈಸೂರು: ರಿಯಲ್ ಎಸ್ಟೇಟ್‌ನವರಿಗಾಗಿ ರಾಮನಗರದ ಹೆಸರು ಬದಲಾವಣೆ ಮಾಡಲಾಗಿದೆ. ರಾಮ ಅಂಥ ಹೆಸರು ಇರುವುದು ಸರ್ಕಾರಕ್ಕೆ ಅಲರ್ಜಿ ತರಿಸಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ಇಲ್ಲಿ ಭಾನುವಾರ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಯಾರಾರು ಅಲ್ಲಿ ಎಷ್ಟೆಷ್ಟು ಸೈಟ್ ಮಾಡಿದ್ದಾರೆ ಎಂಬುದನ್ನು ಮೊದಲು ಗೊತ್ತಾಗಿಸಲಿ. ಆ ನಂತರ ಹೆಸರು ಬದಲಾವಣೆಯ ಅಸಲಿ ಕಥೆ ಸ್ಪಷ್ಟವಾಗುತ್ತದೆ. ಹೆಸರು ಬದಲಾವಣೆ ಮಾಡಿದ ಕೂಡಲೇ ಏನು ದಿಢೀರ್ ಬದಲಾವಣೆ ಆಗಿಬಿಡುತ್ತದೆಯೇ? ಹಾಗೆ ಬದಲಾವಣೆ ಮಾಡುವುದಾದರೆ ಬೆಂಗಳೂರು ಅಂಥ ಸೇರಿಸಿಬಿಡಿ. ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾ ಅಥವಾ ಬೆಂಗಳೂರಿನ ಮುಖ್ಯಮಂತ್ರಿಯಾ? ಡಿ.ಕೆ ಶಿವಕುಮಾರ್ ಹೇಗೆ ಒಬ್ಬರೇ ಇದರ ನಿರ್ಧಾರ ತೆಗೆದುಕೊಳ್ಳುತ್ತಾರೆ? ಇದರ ಹಿಂದೆ ರಿಯಲ್ ಎಸ್ಟೇಟ್ ಮಾಫಿಯಾ ಇದೆ ಎಂದು ಆರೋಪಿಸಿದರು.
ಕರ್ನಾಟಕ ಸಾಬೂನು ಹಾಗೂ ಮಾರ್ಜಕಗಳ ಉತ್ಪನ್ನದ ರಾಯಭಾರಿಯನ್ನಾಗಿ ಮಾಡಿಕೊಳ್ಳಬೇಕು ತಮಗೆ ತಮನ್ನಾ ಭಾಟಿಯಾ ಹೆಸರು ಸೂಚಿಸಿದ ತಜ್ಞ ಯಾರು ಮೊದಲು ಹೇಳಿ? ನಮಗೆ ಅವರ ಹೆಸರುಬೇಕಿದೆ. ಜಮೀರ್ ಅಹಮದ್ ಹೇಳಿದ್ರಾ ಅಥವಾ ಇನ್ಯಾರು ಹೇಳಿದ್ದಾರೆ, ತಿಳಿಸಿ. ಭಾಟಿಯಾ ಅವರನ್ನು ರಾಯಭಾರಿ ಮಾಡಿಕೊಳ್ಳುವ ಅವಶ್ಯಕತೆ ಏನಿತ್ತು? ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಮಾಡಿದ ಕನ್ನಡಿಗರು ಇರಲಿಲ್ಲವಾ? ಎಂದು ಕೇಳಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಖುಷಿಪಡಿಸಲೆಂದು ಬಿಡುಗಡೆ ಮಾಡಿಲ್ಲ. ಅದರಲ್ಲಿರುವ ಸತ್ಯ ನೋಡಿ ಸಿದ್ದರಾಮಯ್ಯ ಕಂಗಲಾಗಿದ್ದಾರೆ. ಸರ್ಕಾರ ಇನ್ನೂ ಮೂರು ವರ್ಷದಲ್ಲಿ ಇನ್ನಷ್ಟು ತಪ್ಪುಗಳನ್ನು ಮಾಡಲಿ. ಆಗ ದೋಷಾರೋಪಪಟ್ಟಿ ಕೂಡ ಬೆಳೆಯುತ್ತದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.