ADVERTISEMENT

ಆತ್ಮಚರಿತ್ರೆಗಳು ಸತ್ಯ ಮರೆಮಾಚುವ ಪುಸ್ತಕವಾಗಬಾರದು: ಜೆಡಿಎಸ್ ನಾಯಕ ರಮೇಶ್ ಬಾಬು

ಎಸ್‌.ಎಂ. ಕೃಷ್ಣ ‘ಸ್ಮೃತಿ ವಾಹಿನಿ’ಯಲ್ಲಿ ಉಲ್ಲೇಖವಾಗಿರುವ ಅಂಶಕ್ಕೆ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 6:31 IST
Last Updated 25 ಡಿಸೆಂಬರ್ 2019, 6:31 IST
ರಮೇಶ್ ಬಾಬು
ರಮೇಶ್ ಬಾಬು   

ಬೆಂಗಳೂರು:ಆತ್ಮಚರಿತ್ರೆಗಳು ನಮಗೆ ಮಾಹಿತಿ ನೀಡುವ ಜೊತೆಗೆ ದಾರಿದೀಪವಾಗಬೇಕೇ ವಿನಃಸತ್ಯ ಮರೆಮಾಚುವ ಪುಸ್ತಕವಾಗಬಾರದು ಎಂದು ಜೆಡಿಎಸ್ ಮಾಧ್ಯಮ ವಕ್ತಾರರಮೇಶ್ ಬಾಬು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಯ ಹಿರಿಯ ರಾಜಕಾರಣಿ ಎಸ್‌.ಎಂ. ಕೃಷ್ಣ ಅವರ ಸಂದರ್ಶನ ಆಧಾರಿತ ಪುಸ್ತಕ ‘ಸ್ಮೃತಿ ವಾಹಿನಿ’ಯಲ್ಲಿ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರ ಕುರಿತು ಉಲ್ಲೇಖವಾಗಿರುವ ಅಂಶಕ್ಕೆರಮೇಶ್ ಬಾಬು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

‘ಆತ್ಮಚರಿತ್ರೆಗಳು ನಮಗೆ ಮಾಹಿತಿ ಜೊತೆಗೆ ದಾರಿದೀಪವಾಗಬೇಕು. ಸತ್ಯವನ್ನು ಮರೆ ಮಾಚುವ ಪುಸ್ತಕವಾಗಬಾರದು. ಎಸ್.ಎಂ.ಕೃಷ್ಣ ಮತ್ತು ದೇವೇಗೌಡರ ಕುರಿತಾದ ಮಾಹಿತಿ ಸುದ್ದಿ ಆಗಿದೆ. ಕೃಷ್ಣರವರು ಮಖ್ಯಮಂತ್ರಿಯಾಗಿ 2004ರಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಸೋಲು ಕಂಡಾಗ ಜೆಡಿಎಸ್ ಬೆಂಬಲದೊಂದಿಗೆ ಮುಖ್ಯಮಂತ್ರಿ ಆಗಲು ದೇವೇಗೌಡರ ಮನೆ ಮುಂದೆ ನಿಂತಿದ್ದರು. ಈ ಸತ್ಯ ಅಲ್ಲಿ ದಾಖಲಾಗಲಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ADVERTISEMENT

‘ಎಸ್.ಎಂ.ಕೃಷ್ಣ ತಮ್ಮ ಆತ್ಮಚರಿತ್ರೆ ಪುಸ್ತಕದಲ್ಲಿ ದೇವೇಗೌಡರು ಕಾಂಗ್ರೆಸ್ ಸೇರಲು ಬಯಸಿದ್ದರು ಎಂದು ಹೇಳಿರುವುದನ್ನು ಶೈಕ್ಷಣಿಕ (Academic) ಹಿನ್ನೆಲೆಯಲ್ಲಿ ನೋಡಬೇಕಿದೆ. ಈ ದೇಶದ ಸ್ವಾತಂತ್ರ್ಯ ಚಳುವಳಿ ರೂಪಿಸಿದ ಕಾಂಗ್ರೆಸ್ ಬಹುತೇಕ ಪಕ್ಷಗಳಿಗೆ ಮೂಲ ಪಕ್ಷವಾಗಿದೆ. ಎಸ್.ಎಂ.ಕೃಷ್ಣ ಪಿಎಸ್‌ಪಿ ಪಕ್ಷದವರಾಗಿದ್ದು ಮೂಲ ಕಾಂಗ್ರೆಸ್ಸಿಗರು ಅಲ್ಲ’ ಎಂದೂ ಅವರು ಇನ್ನೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ಎಂಬತ್ತರ ದಶಕದಲ್ಲಿ ಎಚ್‌.ಡಿ. ದೇವೇಗೌಡ ಹಾಗೂ ಎಸ್.ಆರ್. ಬೊಮ್ಮಾಯಿ ಕಾಂಗ್ರೆಸ್‌ ಸೇರುವ ಬಯಕೆ ವ್ಯಕ್ತಪಡಿಸಿದ್ದರು.ಆಟೋರಿಕ್ಷಾದಲ್ಲಿ ನನ್ನ ಮನೆಗೆ ಬಂದಿದ್ದ ಗೌಡರು, ‘ವಿರೋಧ ಪಕ್ಷದಲ್ಲಿ ಒಗ್ಗಟ್ಟಿಲ್ಲ, ಒಂದು ನೀತಿ ಇಲ್ಲ. ನಾನು ಕಾಂಗ್ರೆಸ್ ಸೇರುವ ಮನಸ್ಸು ಮಾಡಿದ್ದೇನೆ’ ಎಂಬುದಾಗಿ ಹೇಳಿದ್ದರು...’ ಎಂದು ಎಸ್‌.ಎಂ. ಕೃಷ್ಣ ಅವರ ಸಂದರ್ಶನ ಆಧಾರಿತ ಪುಸ್ತಕ ‘ಸ್ಮೃತಿ ವಾಹಿನಿ’ಯಲ್ಲಿ ಉಲ್ಲೇಖವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.