ADVERTISEMENT

ಪೊಲೀಸ್‌ ಠಾಣೆಗಳು ಬಿಕರಿಗೆ: ಹರಿಪ್ರಸಾದ್‌

ಪರಿಷತ್‌ನಲ್ಲೂ ಪ್ರತಿಧ್ವನಿಸಿದ ‘ಪ್ರಜಾವಾಣಿ’ಯ ‘ಕಾಸು ಕೊಟ್ಟರಷ್ಟೇ ಪೊಲೀಸ್ ಬಾಸ್‌’ ವರದಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 19:38 IST
Last Updated 25 ಮಾರ್ಚ್ 2022, 19:38 IST
ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಶುಕ್ರವಾರ ಮಾತನಾಡಿದರು   – ಪ್ರಜಾವಾಣಿ ಚಿತ್ರ
ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಶುಕ್ರವಾರ ಮಾತನಾಡಿದರು   – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಚಿಕ್ಕಪೇಟೆ, ಉಪ್ಪಾರ ಪೇಟೆ ಸೇರಿದಂತೆ ಕೆಲವು ಪೊಲೀಸ್‌ ಠಾಣೆಗಳಿಗೆ ಲಂಚ ಕೊಟ್ಟು ವರ್ಗಾವಣೆ ಮಾಡಿಸಿಕೊಳ್ಳುವುದು ಹಿಂದೆ ಕೇಳಿ ದ್ದೆವು. ಈ ಸರ್ಕಾರ ರಾಜ್ಯದ ಎಲ್ಲ ಪೊಲೀಸ್‌ ಠಾಣೆಗಳನ್ನೂ ಬಿಕರಿಗಿಟ್ಟಿದೆ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ವಾಗ್ದಾಳಿ ನಡೆಸಿದರು.

ಪೊಲೀಸ್‌ ಇಲಾಖೆಯಲ್ಲಿ ಲಂಚದ ಹಾವಳಿ ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ನಿಯಮ 68ರ ಅಡಿಯಲ್ಲಿ ಶುಕ್ರವಾರ ಚರ್ಚೆ ಆರಂಭಿಸಿದ ಅವರು, ‘ಹಣ ಕೊಡದೆ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ಆಗುತ್ತಿಲ್ಲ. ಲಂಚ ಕೊಟ್ಟು ಠಾಣೆಗೆ ಬಂದವರು ಅದನ್ನು ವಾಪಸ್‌ ಪಡೆಯಲು ಅಕ್ರಮಕ್ಕೆ ಇಳಿಯುತ್ತಾರೆ. ಪೊಲೀಸ್‌ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ‘ಪ್ರಜಾವಾಣಿ’ ಎಳೆ ಎಳೆಯಾಗಿ ಬಿಡಿಸಿಟ್ಟಿದೆ’ ಎಂದು ಪತ್ರಿಕೆಯನ್ನು ಪ್ರದರ್ಶಿಸಿದರು.

ಪ್ರತಿ ಠಾಣೆಗೂ ದರ ಪಟ್ಟಿ ನಿಗದಿಯಾಗಿದೆ. ನಿಗದಿತ ಮೊತ್ತ ಕೊಟ್ಟವರಷ್ಟೇ ಅಲ್ಲಿಗೆ ಹೋಗಲು ಎಂಬ ಸಾಧ್ಯವಿದೆ. ರಾಜ್ಯದಲ್ಲಿರುವ ಪ್ರಾಮಾಣಿಕ ಪೊಲೀಸ್‌ ಅಧಿಕಾರಿಗಳನ್ನು ‘ಎಕ್ಸಿಕ್ಯುಟಿವ್‌’ ಹುದ್ದೆಗಳಿಗೆ ನಿಯೋಜಿಸುವುದೇ ಇಲ್ಲ. ಹಿಂದೆ ಮಾಧ್ಯಮಗಳಲ್ಲಿ ವರದಿಯಾದರೆ ಸರ್ಕಾರ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳುತ್ತಿತ್ತು. ಇದು ದಪ್ಪ ಚರ್ಮದ ಸರ್ಕಾರ. ಏನು ಹೇಳಿದರೂ ಮುಟ್ಟುವುದಿಲ್ಲ ಎಂದು ಟೀಕಿಸಿದರು.

ADVERTISEMENT

‘ಮಾಮೂಲಿ’ ಎನ್ನುವುದು ಇಡೀ ಪೊಲೀಸ್‌ ಇಲಾಖೆಯನ್ನು ಆವರಿಸಿಕೊಂಡಿದೆ. ಮದ್ಯದಂಗಡಿಗಳಲ್ಲಿ ಲಂಚ ಪಡೆಯಲು ಪೊಲೀಸರು ಸರದಿಯಲ್ಲಿ ಹೋಗುತ್ತಾರೆ. ಲಂಚ ಕೊಟ್ಟರೆ ತಡ ರಾತ್ರಿವರೆಗೂ ಹೋಟೆಲ್‌ ನಡೆಸಬಹುದು ಎಂಬ ಸ್ಥಿತಿ ಇದೆ. ಪೊಲೀಸ್‌ ಇಲಾಖೆಯಲ್ಲಿ ಸುಧಾರಣೆ ಎನ್ನುವುದು ಮರೀಚಿಕೆಯಾಗಿಯೇ ಉಳಿದಿದೆ ಎಂದರು.

‘ಪೊಲೀಸರು ಲಂಚ ತಿನ್ನುವ ನಾಯಿಗಳು’ ಎಂದು ನೀವೇ ಬೈದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿಲ್ಲವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಪ್ರಶ್ನಿಸಿದರು.

ನಿಷ್ಠೆ ಬದಲಾಗಿದೆ: ‘ಪೊಲೀಸರು ಸಂವಿಧಾನ ಮತ್ತು ರಾಷ್ಟ್ರಧ್ವಜಕ್ಕೆ ನಿಷ್ಠರಾಗಿರಬೇಕು. ಆದರೆ, ಈಗ ಪೊಲೀಸರು ಪಕ್ಷ ಮತ್ತು ಬೇರೆ ಧ್ವಜಕ್ಕೆ ನಿಷ್ಠರಾದಂತೆ ಕಾಣುತ್ತಿದೆ. ಕರ್ನಾಟಕ ಪ್ರಗತಿಶೀಲ ರಾಜ್ಯ. ಉತ್ತರ ಪ್ರದೇಶ, ಬಿಹಾರ ರಾಜ್ಯಗಳಂತೆ ಇಲ್ಲಿನ ಪೊಲೀಸ್‌ ಇಲಾಖೆ ಆಗಬಾರದು’ ಎಂದು ಹರಿಪ್ರಸಾದ್‌ ಹೇಳಿದರು.

ಇರುವ ಪೊಲೀಸ್‌ ಸಿಬ್ಬಂದಿಯಲ್ಲಿ ಹೆಚ್ಚು ಮಂದಿಯನ್ನು ಅತಿ ಗಣ್ಯರ ಭದ್ರತೆಗೆ ನಿಯೋಜಿಸಲಾಗುತ್ತಿದೆ. ಇದರಿಂದ ಪೊಲೀಸ್‌ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹೆಚ್ಚುತ್ತಿದೆ. ಈ ಪ್ರವೃತ್ತಿ ನಿಲ್ಲಬೇಕು ಎಂದರು.

‘ನಾಯಕರೇ ರಕ್ಷಣೆಗೆ ನಿಂತಿದ್ದರು’
‘ಮುಖ್ಯಮಂತ್ರಿ ಮನೆಯ ಭದ್ರತೆಗೆ ನಿಯೋಜಿಸಿದ ಪೊಲೀಸರೇ ಗಾಂಜಾ ಮಾರಾಟ ಮಾಡಿ ಸಿಕ್ಕಿ ಬೀಳುತ್ತಾರೆ. ಪ್ರಕರಣದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಯನ್ನು ಅಮಾನತು ಮಾಡಲಾಗುತ್ತದೆ. ಆಗ ರಾಜಕೀಯ ನಾಯಕರೇ ಗೃಹ ಸಚಿವ ಆರಗ ಜ್ಞಾನೇಂದ್ರರ ಮನೆಗೆ ಹೋಗಿ ಅಧಿಕಾರಿಯನ್ನು ಅಮಾನತು ಮಾಡದಂತೆ ಒತ್ತಡ ಹೇರಿದ್ದರು. ಇಂತಹವರನ್ನು ರಾಜಕೀಯದಿಂದಲೇ ಹೊರಗಟ್ಟಬೇಕು’ ಎಂದು ಬಿ.ಕೆ. ಹರಿಪ್ರಸಾದ್‌ ಹೇಳಿದರು.

*
ಪೊಲೀಸ್‌ ಇಲಾಖೆಯಲ್ಲಿ ಲಂಚದ ಹಾವಳಿ ಇರುವುದಕ್ಕೆ ಸ್ಪಷ್ಟವಾದ ಸಾಕ್ಷ್ಯ ಕೊಡಬೇಕು. ಈ ವಿಚಾರದಲ್ಲಿ ಕಾಂಗ್ರೆಸ್‌ನವರು ಪದವಿ ಪಡೆದವರು
-ಜೆ.ಸಿ. ಮಾಧುಸ್ವಾಮಿ, ಕಾನೂನು ಸಚಿವ

*
ಪೊಲೀಸ್‌ ಇಲಾಖೆಯಲ್ಲಿ ಲಂಚ ಹಿಂದೆಯೂ ಇತ್ತು. ಆದರೆ, ಈಗ ವಿಪರೀತ ಜಾಸ್ತಿ ಆಗಿದೆ. ಪತ್ರಿಕೆಗಳಲ್ಲಿ ಪ್ರಕಟವಾದುದರಲ್ಲಿ ನಿಜವೇ ಇದೆ.
-ಮರಿತಿಬ್ಬೇಗೌಡ, ಜೆಡಿಎಸ್‌ ಸದಸ್ಯ

*
₹ 50 ಲಕ್ಷ ಕೊಟ್ಟು ಇಲ್ಲಿಗೆ ಬಂದಿದ್ದೇನೆ ಎಂದು ಪೊಲೀಸ್‌ ಇನ್‌ಸ್ಪೆಕ್ಟರ್‌ಗಳು ನೇರವಾಗಿ ಹೇಳುತ್ತಿದ್ದಾರೆ. ಲಂಚ ಕೊಡದೆ ಯಾವ ಕೆಲಸವೂ ಆಗುತ್ತಿಲ್ಲ. ₹ 2000ದ ನೋಟು ಬಂದ ಬಳಿಕ ಲಂಚದ ದರವೂ ಹೆಚ್ಚಿದೆ
-ಎಚ್‌.ಎಂ. ರಮೇಶ್‌ ಗೌಡ, ಜೆಡಿಎಸ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.