ADVERTISEMENT

ರಂಗಾಯಣ: ಅನುದಾನ ಕಡಿತಕ್ಕೆ ಆಕ್ಷೇಪ

ಸವಾಲಾದ ವಾರ್ಷಿಕ ಚಟುವಟಿಕೆಗಳ ನಿರ್ವಹಣೆ l ತಲಾ ₹20 ಲಕ್ಷ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 21:00 IST
Last Updated 6 ಆಗಸ್ಟ್ 2022, 21:00 IST
ಪ್ರಕಾಶ್ ಜಿ. ನಿಟ್ಟಾಲಿ
ಪ್ರಕಾಶ್ ಜಿ. ನಿಟ್ಟಾಲಿ   

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಂಗಾಯಣಗಳಿಗೆ ನೀಡುವ ವಾರ್ಷಿಕ ಸಾಮಾನ್ಯ ಅನುದಾನವನ್ನು ಕಡಿತ ಮಾಡಿದ್ದು, ಗರಿಷ್ಠ ₹ 20 ಲಕ್ಷ ಹಂಚಿಕೆ ಮಾಡಿದೆ. ಈ ಕ್ರಮಕ್ಕೆ ರಂಗಾಯಣಗಳ ಮುಖ್ಯಸ್ಥರಿಂದಲೇ ಆಕ್ಷೇಪ ವ್ಯಕ್ತವಾಗಿದೆ.

ಎರಡು ವರ್ಷಗಳಿಂದ ಕೋವಿಡ್‌ ನಿಂದಾಗಿ ಸಾಂಸ್ಕೃತಿಕ ಲೋಕ ನಿಷ್ಕ್ರಿಯವಾಗಿತ್ತು. ಕೋವಿಡ್ ಕಾರಣ ನೀಡಿ ಅಕಾಡೆಮಿಗಳು, ಸಂಘ–ಸಂಸ್ಥೆಗಳು, ರಂಗಾಯಣಗಳ ಅನು ದಾನಕ್ಕೆ ಕತ್ತರಿ ಹಾಕಲಾಗಿತ್ತು. ಈಗ ಸಹಜ ಸ್ಥಿತಿ ಮರಳಿದ್ದು, ಕಲಾ ಚಟುವಟಿಕೆಗಳೂ ಗರಿಗೆದರಿವೆ. ಆದರೆ, ಸಂಸ್ಕೃತಿ ಇಲಾಖೆಯು 2022–23ನೇ ಸಾಲಿನ ಸಹಾಯಾನುದಾನದಲ್ಲಿ ಭಾರಿ ಕಡಿತ ಮಾಡಿದೆ.

ಮೈಸೂರು, ಧಾರವಾಡ, ಶಿವಮೊಗ್ಗ ಹಾಗೂ ಕಲಬುರ್ಗಿ ರಂಗಾಯಣಕ್ಕೆ ತಲಾ ₹ 20 ಲಕ್ಷ ಅನುದಾನ ಹಂಚಿಕೆ ಮಾಡ ಲಾಗಿದೆ. ದಾವಣಗೆರೆಯ ರಂಗಾಯಣ ಕೇಂದ್ರ ಹಾಗೂ ಕಾರ್ಕಳದ ಯಕ್ಷ ರಂಗಾಯಣಕ್ಕೆ ತಲಾ ₹ 10 ಲಕ್ಷ ಹಂಚಿಕೆ ಮಾಡಲಾಗಿದೆ.

ADVERTISEMENT

‘ಇಷ್ಟು ಹಣದಲ್ಲಿ ಕಲಾವಿದರು, ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಿಲ್ಲ’ ಎಂದು ರಂಗಾಯಣಗಳ ಮುಖ್ಯಸ್ಥರು ಅಳಲು ತೋಡಿಕೊಂಡಿದ್ದಾರೆ.

ಹಂತ ಹಂತವಾಗಿ ಕಡಿತ:ಕೋವಿಡ್ ಪೂರ್ವದಲ್ಲಿ (2018–19ನೇ ಸಾಲಿನಲ್ಲಿ) ಮೈಸೂರು ರಂಗಾಯಣ ಒಂದಕ್ಕೇ ಸಿಬ್ಬಂದಿ ವೇತನ ಒಳಗೊಂಡಂತೆ ಸಾಮಾನ್ಯ ಕಾರ್ಯಚಟುವಟಿಕೆಗೆ ₹ 2.28 ಕೋಟಿ ಹಂಚಿಕೆ ಮಾಡಲಾಗಿತ್ತು.

ಧಾರವಾಡ ರಂಗಾಯಣಕ್ಕೆ ₹ 42 ಲಕ್ಷ, ಕಲಬುರಗಿ, ಶಿವಮೊಗ್ಗ ರಂಗಾಯಣಕ್ಕೆ ತಲಾ ₹ 40 ಲಕ್ಷ ನೀಡಲಾಗಿತ್ತು. 2019–20ನೇ ಸಾಲಿನಲ್ಲಿ ಮೈಸೂರು ರಂಗಾಯಣಕ್ಕೆ ಕಲಾವಿದರು, ಸಿಬ್ಬಂದಿ ವೇತನಕ್ಕೆ ₹ 2.15 ಕೋಟಿ ಮತ್ತು ₹ 97.86 ಲಕ್ಷ ಸಹಾಯಾನುದಾನ ನೀಡಲಾಗಿತ್ತು.

2020–21ನೇ ಸಾಲಿನಲ್ಲಿ ಮೈಸೂರು ರಂಗಾಯಣಕ್ಕೆ ಕಲಾವಿದರು ಮತ್ತು ಸಿಬ್ಬಂದಿ ವೇತನಕ್ಕೆ ₹ 2.37 ಕೋಟಿ, ಸಾಮಾನ್ಯ ಅನುದಾನ ₹ 98 ಲಕ್ಷ ಹಂಚಿಕೆ ಮಾಡಲಾಗಿತ್ತು. ಧಾರವಾಡ ಹಾಗೂ ಶಿವಮೊಗ್ಗದ ರಂಗಾಯಣಕ್ಕೆ ತಲಾ ₹ 75 ಲಕ್ಷ ನೀಡಲಾಗಿತ್ತು. ಕಳೆದ ಸಾಲಿನಲ್ಲಿ ₹ 60 ಲಕ್ಷಗಳಿಗೆ ಇಳಿಕೆ ಮಾಡಲಾಗಿತ್ತು. ಈ ಬಾರಿ ಮೈಸೂರು ರಂಗಾಯಣಕ್ಕೆ ಕಲಾವಿದರು ಹಾಗೂ ಸಿಬ್ಬಂದಿ ವೇತನಕ್ಕೆ ₹ 1.85 ಕೋಟಿ ಹಂಚಿಕೆ ಮಾಡಲಾಗಿದೆ.

‘4 ಇದ್ದ ರಂಗಾಯಣವನ್ನು 6 ಮಾಡಿಕೊಂಡಿದ್ದಾರೆ. ಆದರೆ, ಬಜೆಟ್ ಹೆಚ್ಚಳ ಮಾಡಿಲ್ಲ. ಅಧಿಕಾರಿಗಳು ಮಾಡಿದ ತಪ್ಪಿನ ಪರಿಣಾಮವನ್ನು ನಾವು ಅನುಭವಿಸುತ್ತಿದ್ದೇವೆ. 15 ಜನ ಕಲಾವಿದರು ಸೇರಿ 28 ಜನರಿಗೆ ಸಂಬಳ ನೀಡಬೇಕು. ವರ್ಷಕ್ಕೆ ₹ 55 ಲಕ್ಷದಿಂದ ₹ 60 ಲಕ್ಷ ಬೇಕು’ ಎಂದು ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ ಜವಳಿ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.