ADVERTISEMENT

ಇಂದಿನಿಂದ 2 ತಿಂಗಳ ಪಡಿತರ ಹಂಚಿಕೆ

ಬಿಪಿಎಲ್‌ ಕಾರ್ಡ್‌ದಾರರಿಗೆ ತಲಾ 10, ಅಂತ್ಯೋದಯ ಕಾರ್ಡ್‌ಗೆ 70 ಕೆ.ಜಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 20:15 IST
Last Updated 31 ಮಾರ್ಚ್ 2020, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ಕೇಂದ್ರ ಸರ್ಕಾರ ಘೋಷಿಸಿದ ಅಕ್ಕಿಯೂ ಸೇರಿದಂತೆ ಎರಡು ತಿಂಗಳ ಪಡಿತರವನ್ನು ಬುಧವಾರದಿಂದ (ಏ. 1) ವಿತರಿಸಲು ಆಹಾರ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಬಿಪಿಎಲ್‌ ಕಾರ್ಡ್‌ಗಳಲ್ಲಿರುವ ಪ್ರತಿಯೊಬ್ಬ ಸದಸ್ಯನಿಗೆ (ಯುನಿಟ್‌ಗೆ) ತಲಾ 10 ಕೆ.ಜಿಯಂತೆ (ರಾಜ್ಯ ಮತ್ತು ಕೇಂದ್ರದ ತಲಾ 5 ಕೆ.ಜಿ) ಹಾಗೂ ಪ್ರತಿಯೊಂದು ಅಂತ್ಯೋದಯ ಕಾರ್ಡ್‌ಗಳಿಗೆ ಒಟ್ಟು 70 ಕೆ.ಜಿ (ರಾಜ್ಯ ಮತ್ತು ಕೇಂದ್ರದ ತಲಾ 35 ಕೆ.ಜಿ) ಅಕ್ಕಿ ಹಂಚಿಕೆ ಆಗಲಿದೆ.

ಕೊರೊನಾ ವೈರಾಣು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ಎರಡು ತಿಂಗಳ ಪಡಿತರ ಏಕಕಾಲಕ್ಕೆ ವಿತರಿಸುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿತ್ತು. ಈ ಮಧ್ಯೆ, ಕೇಂದ್ರ ಕೂಡಾ ಅಕ್ಕಿ ನೀಡುವುದಾಗಿ ಪ್ರಕಟಿಸಿದ್ದರಿಂದ ಅದನ್ನೂ ಸೇರಿಸಿ ಎರಡು ತಿಂಗಳಿನ ಪಡಿತರ ಒಟ್ಟಿಗೆ ನೀಡಲಾಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ADVERTISEMENT

ರಾಜ್ಯ ಸರ್ಕಾರ ಎರಡು ತಿಂಗಳ ಒಟ್ಟು 4 ಕೆ.ಜಿ (ತಿಂಗಳಿಗೆ 2 ಕೆ.ಜಿ) ಗೋಧಿ ಕೂಡಾ ವಿತರಿಸಲಿಸಲಿದೆ. ಆದರೆ, ಗೋಧಿ ಲಭ್ಯ ಇಲ್ಲದೇ ಇರುವುದರಿಂದ ಹಲವು ಜಿಲ್ಲೆಗಳಲ್ಲಿ ವಿತರಣೆ ವಿಳಂಬವಾಗಲಿದೆ. ಅಲ್ಲದೆ, ಕೇಂದ್ರ ಮೂರು ತಿಂಗಳು ನೀಡುವುದಾಗಿ ಘೋಷಿಸಿರುವ ತಲಾ 1 ಕೆ.ಜಿ ತೊಗರಿ ಬೇಳೆ ವಿತರಣೆ ಕೂಡಾ 15 ದಿನ ವಿಳಂಬವಾಗಲಿದ್ದು, ಮೇ ತಿಂಗಳಿನಿಂದ ಹಂಚಿಕೆ ಸಾಧ್ಯವಾಗಲಿದೆ ಎಂದೂ ಹೇಳಿವೆ.

ಎಪಿಎಲ್‌ ಕಾರ್ಡ್‌ಗಳಿಗೂ ಅಕ್ಕಿ: ಎಪಿಎಲ್‌ ಕಾರ್ಡ್‌ಗಳಿಗೆ (ತಿಂಗಳಿಗೆ) ಒಬ್ಬರು ಸದಸ್ಯರು ಮಾತ್ರ ಇದ್ದರೆ 5 ಕೆ.ಜಿ. ಒಬ್ಬರಿಗಿಂತ ಜಾಸ್ತಿ ಇದ್ದರೆ ಒಂದು ಕಾರ್ಡ್‌ಗೆ 10 ಕೆ.ಜಿ ನೀಡಲಾಗುವುದು. ಪ್ರತಿ ಕೆ. ಜಿಗೆ ₹ 15 ಕೊಟ್ಟು ಖರೀದಿಸಬೇಕು. ಅವರೂ ಎರಡು ತಿಂಗಳ ಪಡಿತರ ಒಟ್ಟಿಗೆ ಪಡೆದುಕೊಳ್ಳಬಹುದು. ನ್ಯಾಯಬೆಲೆ ಅಂಗಡಿಗಳಿಗೆ ಆಹಾರಧಾನ್ಯಗಳ ಸಾಗಣೆ ಮತ್ತು ಫಲಾನುಭವಿಗಳಿಗೆ ವಿತರಿಸಲು ಯಾವುದೇ ಸಮಸ್ಯೆ ಇಲ್ಲ. ಪಡಿತರ ವ್ಯವಸ್ಥೆಯ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಕಾರ್ಯಪಡೆ ನಿಗಾ ವಹಿಸಲಿದೆ.

ರಾಜ್ಯಕ್ಕೆ ಪೂರೈಸಲು ಸಾಕಾಗುವಷ್ಟು ಅಕ್ಕಿ ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ ದಾಸ್ತಾನಿದೆ. ಗೋದಾಮುಗಳಿಲ್ಲದಚಿಕ್ಕಮಗಳೂರು ಜಿಲ್ಲೆಗೆ ಶಿವಮೊಗ್ಗ ಮತ್ತು ಹಾಸನದಿಂದ ಹಾಗೂ ಕೊಡಗು ಜಿಲ್ಲೆಗೆ ಮೈಸೂರಿನಿಂದ ಪೂರೈಕೆ ಮಾಡಲಾಗುತ್ತದೆ.

ಬಯೋಮೆಟ್ರಿಕ್‌ಬದಲು ಒಟಿಪಿ
ರಾಜ್ಯದಾದ್ಯಂತ ಬಯೋಮೆಟ್ರಿಕ್‌ ಬದಲು ಮೊಬೈಲ್‌ ಸಂಖ್ಯೆಗೆ ಬರುವ ಒಟಿಪಿ ಪಡೆದು ಆಹಾರಧಾನ್ಯ ವಿತರಿಸಲಾಗುತ್ತಿದೆ. ಆಧಾರ್‌ ಕಾರ್ಡ್‌ಗೆ ಲಿಂಕ್‌ ಆಗಿರುವ ಫಲಾನುಭವಿಯ ಮೊಬೈಲ್ ನಂಬರ್‌ಗೆ ಒಟಿಪಿ ಸಂಖ್ಯೆ ಬರುತ್ತದೆ. ಅದನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ನೀಡಿ ಪಡಿತರ ಪಡೆದುಕೊಳ್ಳಬಹುದು ಎಂದೂ ಆಹಾರ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.