
ಬೆಳಗಾವಿ (ಸುವರ್ಣಸೌಧ): ‘ಹೊಸ ಮೀಸಲಾತಿ ಅನುಸಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರಿಗಾಗಿ 3,200 ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಲಾಗಿದೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ರಾಜ್ಯದ ಗ್ರಾಮೀಣ ಭಾಗದಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ಆರಂಭಿಸುವ ಕುರಿತಂತೆ ಕಾಂಗ್ರೆಸ್‌ನ ಎಸ್.ಎನ್. ಸುಬ್ಬಾರೆಡ್ಡಿ ಅವರು ಸರ್ಕಾರದ ಸೆಳೆದರು. ಅದಕ್ಕೆ ಉತ್ತರಿಸಿದ ಮುನಿಯಪ್ಪ, ‘ನಿಯಮದಂತೆ 3 ಕಿ.ಮೀ.ಗೊಂದು ನ್ಯಾಯಬೆಲೆ ಅಂಗಡಿ ತೆರೆಯಲಾಗುವುದು. ಒಂದು ವೇಳೆ ನ್ಯಾಯಬೆಲೆ ಅಂಗಡಿಗಳಿಲ್ಲದ ಕಡೆಗಳಲ್ಲಿ ಸಂಚಾರಿ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಿಸಲಾಗುವುದು’ ಎಂದರು.
‘ಗುಡ್ಡಗಾಡು ಪ್ರದೇಶದಲ್ಲಿ ಕಡಿಮೆ ಪಡಿತರ ಚೀಟಿದಾರರಿದ್ದರೂ ಸಂಚಾರಿ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಿಸುತ್ತೇವೆ. ಗ್ರಾಮಾಂತರ ಭಾಗದಲ್ಲಿ 500 ಮತ್ತು ನಗರ ಪ್ರದೇಶದಲ್ಲಿ 800 ಪಡಿತರ ಚೀಟಿಗೊಂದು ನ್ಯಾಯಬೆಲೆ ಅಂಗಡಿ ತೆರೆಯಲಾಗಿದೆ. ಇದೀಗ ಎಸ್‌ಸಿ, ಎಸ್‌ಟಿ ಸಮುದಾಯದವರಿಗಾಗಿ ಹೊಸದಾಗಿ 3,200 ನ್ಯಾಯಬೆಲೆ ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ’ ಎಂದು ವಿವರಿಸಿದರು.
‘ನೇಕಾರರ ಬಿಲ್ ಮೊತ್ತ ಮನ್ನಾ– ಸಿ.ಎಂ ಜೊತೆ ಚರ್ಚಿಸಿ ತೀರ್ಮಾನ’
‘ವಿದ್ಯುತ್ ಮಗ್ಗಗಳಿಗೆ ಹತ್ತು ಎಚ್‌ಪಿವರೆಗೆ 2023ರ ನವೆಂಬರ್‌ನಿಂದ ಜಾರಿ ಮಾಡಿರುವ ಉಚಿತ ವಿದ್ಯುತ್ ಪೂರೈಕೆ ಯೋಜನೆಯನ್ನು 2023ರ ಏಪ್ರಿಲ್‍ನಿಂದಲೇ ಅನ್ವಯಗೊಳಿಸಬೇಕೆಂಬ ನೇಕಾರರ ಬೇಡಿಕೆಯನ್ನು ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.
ವಿಧಾನಸಭೆಯಲ್ಲಿ ಬಿಜೆಪಿಯ ಶಶಿಕಲಾ ಜೊಲ್ಲೆ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
‘ನೇಕಾರರ ವಿದ್ಯುತ್ ಬಿಲ್ ಅಂದಾಜು ₹20 ಕೋಟಿಯಷ್ಟು ಬಾಕಿಯಿದೆ. ಅದನ್ನು ಮನ್ನಾ ಮಾಡುವುದರಿಂದ ಸರ್ಕಾರಕ್ಕೆ ಹೊರೆಯಾಗುವುದಿಲ್ಲ. ಈ ಕುರಿತು ತೀರ್ಮಾನ ಕೈಗೊಳ್ಳುವವರೆಗೆ ವಿದ್ಯುತ್ ಪೂರೈಕೆ ಕಂಪನಿಗಳು ನೇಕಾರ ಕೈಮಗ್ಗಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ನಿರ್ದೇಶನ ನೀಡಬೇಕು’ ಎಂದು ಜೊಲ್ಲೆ ಆಗ್ರಹಿಸಿದರು. ಬಿಜೆಪಿಯ ಸಿದ್ದು ಸವದಿ, ಬಿ.ವೈ. ವಿಜಯೇಂದ್ರ, ಪ್ರಭು ಚವ್ಹಾಣ್ ದನಿಗೂಡಿಸಿದರು.
‘ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಹತ್ತು ಎಚ್‌ಪಿವರೆಗಿನ ವಿದ್ಯುತ್ ಮಗ್ಗಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. 2023ರ ನವೆಂಬರ್‌ನಿಂದ ಈ ಆದೇಶ ಜಾರಿಗೆ ಬಂದಿದ್ದು, ಅಂದಿನಿಂದ ಅನ್ವಯವಾಗುತ್ತಿದೆ. ನೇಕಾರರ ಬೇಡಿಕೆಯಂತೆ ಹತ್ತರಿಂದ 20 ಎಚ್‌ಪಿವರೆಗಿನ ಪ್ರತಿ ಯೂನಿಟ್‍ಗೆ ₹1.25 ರಿಯಾಯಿತಿ ದರದಲ್ಲಿ ವಿದ್ಯುತ್ ಸೌಲಭ್ಯ ನೀಡಲಾಗುತ್ತಿದೆ. ಈ ಯೋಜನೆಗಳಿಂದ ಸರ್ಕಾರಕ್ಕೆ ವಾರ್ಷಿಕ ಸುಮಾರು ₹130 ಕೋಟಿ ವೆಚ್ಚವಾಗುತ್ತಿದೆ’ ಎಂದು ಸಚಿವರು ವಿವರಿಸಿದರು.
‘ಅನೇಕ ನೇಕಾರರು ಉಚಿತ ವಿದ್ಯುತ್ ಯೋಜನೆ ಜಾರಿಗೆ ಬರುವವರೆಗೆ ವಿದ್ಯುತ್ ಬಿಲ್ ಪಾವತಿ ಮಾಡಿದ್ದಾರೆ. ಕೆಲವರು ಮಾತ್ರ ಬಾಕಿ ಉಳಿಸಿಕೊಂಡಿದ್ದಾರೆ. ಯಾವುದೇ ಯೋಜನೆ ಸರ್ಕಾರದ ಆದೇಶ ಹೊರಬಿದ್ದ ನಂತರ ಅನ್ವಯವಾಗುತ್ತದೆ. ಆದರೂ, ಆದೇಶ ಹೊರಬೀಳುವ ಹಿಂದಿನ ಅವಧಿಗೂ ಅನ್ವಯ ಮಾಡಬೇಕು ಎಂಬ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮವಾಗಿ ಸ್ಪಂದಿಸಲಿದೆ’ ಎಂದರು.
ಹು–ಧಾ ಪಾಲಿಕೆ ವಿಭಜನೆಗೆ ನಿಯೋಗ
‘ಹುಬ್ಬಳ್ಳಿ– ಧಾರವಾಡ ಮಹಾನಗರಪಾಲಿಕೆಯನ್ನು ವಿಭಜಿಸಿ, ಪ್ರತ್ಯೇಕ ಧಾರವಾಡ ಮಹಾನಗರಪಾಲಿಕೆಯಾಗಿ ಮಾಡುವ ಪ್ರಸ್ತಾವವನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿದೆ. ಆದಷ್ಟು ಬೇಗ ಅನುಮೋದನೆ ನೀಡುವಂತೆ ಮನವಿ ಮಾಡಲು ರಾಜ್ಯಪಾಲರ ಬಳಿ ನಿಯೋಗ ಕೊಂಡೊಯ್ಯಲಾಗುವುದು’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಪ್ರಸಾದ್ ಅಬ್ಬಯ್ಯ ಮಾತನಾಡಿ, ‘ಧಾರವಾಡ ಮಹಾನಗರಪಾಲಿಕೆಯನ್ನಾಗಿ ಜನವರಿ ತಿಂಗಳಲ್ಲಿಯೇ ಅಧಿಸೂಚನೆ ಹೊರಡಿಸಿದ್ದರೂ ಈವರೆಗೂ ಕಾರ್ಯಗತ ಆಗಿಲ್ಲ. ಅನುಮೋದನೆಗಾಗಿ ರಾಜ್ಯಪಾಲರಿಗೆ ಸಲ್ಲಿಸಿದ ಕಡತ ಏಳು ತಿಂಗಳಿನಿಂದ ಅವರ ಬಳಿಯೇ ಇದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಅದಕ್ಕೆ ಉತ್ತರಿಸಿದ ಸಚಿವರು, ‘ಹುಬ್ಬಳ್ಳಿ– ಧಾರವಾಡ ಮಹಾನಗರಪಾಲಿಕೆಯನ್ನು ವಿಭಜಿಸಿ, ಪ್ರತ್ಯೇಕ ಧಾರವಾಡ ಮಹಾನಗರಪಾಲಿಕೆ ರಚಿಸಲು ಮತ್ತು ಉಳಿದ ಪ್ರದೇಶವನ್ನು ಹುಬ್ಬಳ್ಳಿ ಮಹಾನಗರಪಾಲಿಕೆ ಎಂದು ಮುಂದುವರಿಸಲು ಉದ್ದೇಶಿಸಿ, ಬಾಧಿತರಿಂದ ಆಕ್ಷೇಪಣೆ, ಸಲಹೆಗಳನ್ನು ಆಹ್ವಾನಿಸಿ 2025ರ ಜ. 21ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಆಕ್ಷೇಪಣೆ, ಸಲಹೆಗಳ ಕುರಿತ ವರದಿಯನ್ನು ಪೌರಾಡಳಿತ ನಿರ್ದೇಶನಾಲಯದಿಂದ ಧಾರವಾಡ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದ್ದು, ಆ ವರದಿ ಸಹಿತ ರಾಜ್ಯಪಾಲರ ಅನುಮೋದನೆ ಸಲ್ಲಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.