ADVERTISEMENT

ರೇವ್‌ ಪಾರ್ಟಿ: ತೆಲುಗು ನಟಿ ಹೇಮಾ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2025, 16:10 IST
Last Updated 1 ಜನವರಿ 2025, 16:10 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಹೆಬ್ಬಗೋಡಿ ಸಮೀಪದ ಸಿಂಗೇನ ಅಗ್ರಹಾರದಲ್ಲಿನ ಜಿ.ಆರ್‌.ಫಾರ್ಮ್‌ ಹೌಸ್‌ನಲ್ಲಿ ರೇವ್ ಪಾರ್ಟಿ ನಡೆಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ಕೊಲ್ಲ ಹೇಮಾ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ನ್ಯಾಯಿಕ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಈ ಸಂಬಂಧ ಹೈದರಾಬಾದ್‌ನ ಕೊಲ್ಲ ಹೇಮಾ (52) ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

ವಿಚಾರಣೆ ವೇಳೆ ಹೇಮಾ ಪರ ವಕೀಲರು, ‘ಈ ಪ್ರಕರಣದಲ್ಲಿ ಸಹ ಆರೋಪಿಗಳ ಹೇಳಿಕೆ ಆಧರಿಸಿ ಹೇಮಾ ವಿರುದ್ಧ, ಮಾದಕ ದ್ರವ್ಯ ನಿಗ್ರಹ ಕಾಯ್ದೆ–1985ರ (ಎನ್‌ಡಿಪಿಎಸ್‌) ಕಲಂ 27 (ಬಿ) ಅಡಿಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಆದರೆ, ಅವರು ಮಾದಕ ವಸ್ತು ಸೇವಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಹಾಗಾಗಿ, ಪ್ರಕರಣಕ್ಕೆ ತಡೆ ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಪ್ರಾಸಿಕ್ಯೂಷನ್‌ಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ಅಂತೆಯೇ, ಮುಂದಿನ ವಿಚಾರಣೆ ತನಕ ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿತು.

ಪ್ರಕರಣವೇನು?: ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಜಿ.ಎಂ.ಫಾರ್ಮ್ ಹೌಸ್‌ ಮೇಲೆ 2024ರ ಮೇ 19ರಂದು ದಾಳಿ ನಡೆಸಿದ್ದ ಪೊಲೀಸರು, ‘ಇಲ್ಲಿ ಬರ್ತ್‌ಡೇ ಪಾರ್ಟಿ ಹೆಸರಿನಲ್ಲಿ ಮದ್ಯ ಹಾಗೂ ಮಾದಕ ದ್ರವ್ಯ ಸೇವಿಸುವ ರೇವ್‌ ಪಾರ್ಟಿ ನಡೆಯುತ್ತಿರುವುದು ಕಂಡುಬಂದಿದೆ. ಈ ರೇವ್ ಪಾರ್ಟಿಯಲ್ಲಿ ಹೇಮಾ ಭಾಗಿಯಾಗಿದ್ದರು’ ಎಂದು ಆರೋಪಿಸಿದ್ದರು. ಅಂತೆಯೇ, ಅವರನ್ನು ವಶಕ್ಕೆ ಪಡೆದಿದ್ದರು. ಕೋರ್ಟ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಏತನ್ಮಧ್ಯೆ ಹೇಮಾ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ಬೆಂಗಳೂರು ಗ್ರಾಮಾಂತರ, 8ನೇ ಹೆಚ್ಚುವರಿ ಸೆಷನ್ಸ್‌ನ ವಿಶೇಷ ನ್ಯಾಯಾಲಯಕ್ಕೆ 1,086 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ‘ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಸೇರಿದಂತೆ ಹಲವು ಉದ್ಯಮಿಗಳು ಭಾಗವಹಿಸಿದ್ದರು. ಇವರಲ್ಲಿ ಹಲವರು ಡ್ರಗ್ಸ್ ಸೇವನೆ ಮಾಡಿದ್ದರು’ ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.