ADVERTISEMENT

ಮಾರಿಕಾಂಬೆ ಮುಂದೆ ಕಾಗೇರಿ ಪ್ರಮಾಣ ಮಾಡಲಿ: ರವಿಕೃಷ್ಣಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 20:34 IST
Last Updated 1 ಜೂನ್ 2020, 20:34 IST

ಬೆಂಗಳೂರು: ವೈದ್ಯಕೀಯ ಸಾಮಗ್ರಿಗಳ ಖರೀದಿ ಹಗರಣದ ತನಿಖೆಗೆ ಮುಂದಾದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಕರ್ತವ್ಯಕ್ಕೆ ತಡೆ ನೀಡಿರುವ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿದಿಲ್ಲ ಎಂದು ಶಿರಸಿಯ ಮಾರಿಕಾಂಬೆ ಮುಂದೆ ಪ್ರಮಾಣ ಮಾಡಲಿ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಸವಾಲು ಹಾಕಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅವರು ಬಹಿರಂಗವಾಗಿ ಪ್ರಮಾಣ ಮಾಡಿದರೆ ನಾನು ಕೂಡ ಸಾರ್ವಜನಿಕವಾಗಿ ಕಾಗೇರಿ ಅವರ ಕ್ಷಮೆ ಯಾಚಿಸುತ್ತೇನೆ. ಅಲ್ಲದೇ ಮಾರಿಕಾಂಬ ದೇಗುಲದ ಮುಂದೆಯೇ 50 ಬಸ್ಕಿ ಹೊಡಿಯುತ್ತೇನೆ’ ಎಂದರು.

‘ಭ್ರಷ್ಟರನ್ನು ರಕ್ಷಿಸಲು ಒತ್ತಡಕ್ಕೆ ಮಣಿದು ಸಂವಿಧಾನ ಬಾಹಿರವಾದ ಈ ಕೆಲಸವನ್ನು ಕಾಗೇರಿ ಅವರು ಮಾಡಿದ್ದಾರೆ ಎಂಬುದರಲ್ಲಿ ಅನುಮಾನ ಇಲ್ಲ. ಸಮಿತಿಯ ಅಧ್ಯಕ್ಷ ಎಚ್‌.ಕೆ.ಪಾಟೀಲರು ಹಕ್ಕು ಚ್ಯುತಿ ಮಂಡಿಸುವ ನಿರ್ಧಾರದಿಂದ ಹಿಂದೆ ಸರಿಯಬಾರದು’ ಎಂದು ಮನವಿ ಮಾಡಿದರು.

ADVERTISEMENT

‘ಶಾಸಕರ ಹಕ್ಕುಗಳನ್ನು ಕಾ‍ಪಾಡಬೇಕಾದ ಸಭಾಧ್ಯಕ್ಷರೇ ಲೆಕ್ಕಪತ್ರಗಳ ಸಮಿತಿಯ ಹಕ್ಕನ್ನು ಮೊಟಕು ಮಾಡಿದ್ದಾರೆ. ಸಾಂವಿಧಾನಿಕ ಹುದ್ದೆಯ ಘನತೆ ಹಾಳು ಮಾಡಿರುವ ಕಾಗೇರಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಸಮಿತಿಯ ಕಾರ್ಯಾಚರಣೆಗೆ ನೀಡಿರುವ ತಡೆಯನ್ನು ಕಾಗೇರಿ ಅವರು ಕೂಡಲೇ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.‌

ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಎನ್. ದೀಪಕ್ ಮಾತನಾಡಿ, ‘ಕರ್ನಾಟಕ ಡ್ರಗ್ಸ್ ಲಾಜಿಸ್ಟಿಕ್ ಆ್ಯಂಡ್ ವೇರ್ ಹೌಸಿಂಗ್ ಸೊಸೈಟಿಯು ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ನಡೆಸಿರುವ ₹30 ಕೋಟಿ ಮೊತ್ತದ ಹಗರಣದ ದಾಖಲೆಗಳು ನಮ್ಮ ಬಳಿ ಇವೆ. ತನಿಖೆ ನಡೆಸಿದರೆ ಸಾವಿರಾರು ಕೋಟಿಯ ಹಗರಣ ಬಯಲಾಗಲಿದೆ. ಸಭಾಧ್ಯಕ್ಷರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.