ADVERTISEMENT

ಮುಂಬೈ ಪೊಲೀಸರಿಗೆ ಹಸ್ತಾಂತರ ಪ್ರಶ್ನಿಸಿದ ರವಿ ಪೂಜಾರಿ

ವಿಚಾರಣೆಗೆ ಕರೆದೊಯ್ದರೆ ಸೂಕ್ತ ಭದ್ರತೆಗೆ ಹೈಕೋರ್ಟ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 21:33 IST
Last Updated 25 ನವೆಂಬರ್ 2020, 21:33 IST
   

ಬೆಂಗಳೂರು: ಮುಂಬೈನಲ್ಲಿ ಬಾಕಿ ಇರುವ ಪ್ರಕರಣವೊಂದರಲ್ಲಿ ವಿಚಾರಣೆಗಾಗಿ ಅಲ್ಲಿನ ಪೊಲೀಸರು ತನ್ನನ್ನು ಕರೆದೊಯ್ಯಲು ಅನುಮತಿ ನೀಡಿರುವ ನಗರದ ನ್ಯಾಯಾಲಯದ ಆದೇಶ ಪ್ರಶ್ನಿಸಿ ಭೂಗತ ಪಾತಕಿ ರವಿ ಪೂಜಾರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಮುಂಬೈಗೆ ಕರೆದೊಯ್ದರೆ ತನ್ನ ಜೀವಕ್ಕೆ ಅಪಾಯವಿದೆ ಎಂದು ಅರ್ಜಿಯಲ್ಲಿ ಹೇಳಿದ್ದಾನೆ.

ಹತ್ತು ದಿನಗಳ ಕಾಲ ವಿಚಾರಣೆಗಾಗಿ ರವಿ ಪೂಜಾರಿಯನ್ನು ವಶಕ್ಕೆ ನೀಡುವಂತೆ ಮುಂಬೈ ಪೊಲೀಸರು ನಗರದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಕೋರಿಕೆಯನ್ನು ಮಾನ್ಯ ಮಾಡಿ ನ್ಯಾಯಾಲಯ ನವೆಂಬರ್‌ 13ರಂದು ಆದೇಶ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ರವಿ ಪೂಜಾರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಮುಂಬೈ ಪೊಲೀಸರಿಗೆ ನೋಟಿಸ್‌ ಜಾರಿಗೆ ಆದೇಶಿಸಿರುವ ನ್ಯಾಯಮೂರ್ತಿ ನಟರಾಜ್‌ ರಂಗಸ್ವಾಮಿ ನೇತೃತ್ವದ ಏಕಸದಸ್ಯ ಪೀಠ, ನವೆಂಬರ್‌ 27ಕ್ಕೆ ವಿಚಾರಣೆ ಮುಂದೂಡಿದೆ.

ಮುಂಬೈನಲ್ಲಿ ತನ್ನ ಜೀವಕ್ಕೆ ಬೆದರಿಕೆ ಇದೆ. ಅಲ್ಲದೇ ತನ್ನನ್ನು ಮುಂಬೈ ಪೊಲೀಸರ ವಶಕ್ಕೆ ನೀಡುವುದು ಕಾನೂನುಬಾಹಿರ ಕ್ರಮವಾಗುತ್ತದೆ. 2007ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಶಬನಂ ಡೆವಲಪರ್ಸ್‌ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸೀಮಿತವಾಗಿ ತನ್ನನ್ನು ಹಸ್ತಾಂತರ ಮಾಡಲಾಗಿದೆ ಎಂದು ಪೂಜಾರಿ ವಾದಿಸಿದ್ದಾನೆ.

ADVERTISEMENT

ಅರ್ಜಿಯ ಮುಂದಿನ ವಿಚಾರಣೆಯ ಒಳಗಾಗಿ ರವಿ ಪೂಜಾರಿಯನ್ನು ತಮ್ಮ ವಶಕ್ಕೆ ಪಡೆದು ಕರೆದೊಯ್ದರೆ ಸೂಕ್ತ ಭದ್ರತೆ ಒದಗಿಸುವಂತೆ ಮುಂಬೈ ಪೊಲೀಸರಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.