ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಿಕ್ಕಿರಿದು ಸೇರಿದ್ದ ಆರ್‌ಸಿಬಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದರು
ಪ್ರಜಾವಾಣಿ ಚಿತ್ರ: ಪುಷ್ಕರ್ ವಿ
ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವಿಗೀಡಾಗಲು, ಅನುಮತಿ ಪಡೆಯದೆ ಸಂಭ್ರಮಾಚರಣೆ ಆಯೋಜನೆ ಹಾಗೂ ಸಂಘಟಕರೊಂದಿಗೆ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದುದೇ ಕಾರಣ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ಗುರುತಿಸಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಗೆ ಕುನ್ಹ ವರದಿಯನ್ನು ಗೃಹ ಇಲಾಖೆ ಮಂಡಿಸಿದೆ. ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.
‘ಕ್ರೀಡಾಂಗಣದ ಗೇಟ್‌ಗಳ ಮೂಲಕ ಜನರ ಪ್ರವೇಶವನ್ನು ನಿಯಂತ್ರಿಸಲು ಪೂರ್ವ ತಯಾರಿ ಮಾಡಿಕೊಳ್ಳದೇ ಕ್ರೀಡಾಂಗಣದ ಪ್ರವೇಶಕ್ಕೆ ಸಂಬಂಧಿಸಿ ದಂತೆ ಬೇಕಾಬಿಟ್ಟಿ ಘೋಷಣೆ ಮಾಡಿದ್ದರಿಂದ ಕಾಲ್ತುಳಿತ ಸಂಭವಿಸಿದೆ. ಕ್ರೀಡಾಂಗಣದ ಒಳಗೆ ಪ್ರವೇಶಿಸುವ ವಿಧಾನದ ಕುರಿತು ಸಂಘಟಕರು ಮಾಡಿದ ಗೊಂದಲದ ಘೋಷಣೆಗಳು ಕಾಲ್ತುಳಿತ ಸಂಭವಿಸಲು ಮುಖ್ಯ ಕಾರಣ. ಇದು ಅಜಾಗರೂಕತೆ, ನಿರ್ಲಕ್ಷ್ಯಕ್ಕೆ ಸಮಾನ. ಇದಕ್ಕೆ ಸಂಘಟಕರನ್ನೇ ಹೊಣೆಗಾರರನ್ನಾಗಿ ಮಾಡಬೇಕು. ಆಹ್ವಾನಿತರ ಸುರಕ್ಷತೆ ಮತ್ತು ಭದ್ರತೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಂಘಟಕರು ವಿಫಲರಾಗಿದ್ದಾರೆ’ ಎಂದು ಆಯೋಗ
ಅಭಿಪ್ರಾಯಪಟ್ಟಿದೆ.
ಪರವಾನಗಿ ಪಡೆದಿಲ್ಲ:
ಸರ್ಕಾರ 2009ರ ಮಾರ್ಚ್ 4ರಂದು ಹೊರಡಿಸಿದ ಆದೇಶದ ಪ್ರಕಾರ, ಪ್ರಸ್ತಾವಿತ ಕಾರ್ಯಕ್ರಮಕ್ಕೆ ಆಯೋಜಕರು ಕನಿಷ್ಠ ಏಳು ದಿನಗಳ ಮುಂಚಿತವಾಗಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವುದು ಕಡ್ಡಾಯ. ಕಾರ್ಯಕ್ರಮದ ಸ್ಥಳ, ಹಾಜರಾಗುವವರ ನಿಖರ ಸಂಖ್ಯೆ, ನಿರೀಕ್ಷಿತ ವಾಹನ ದಟ್ಟಣೆ ಮತ್ತಿತರ ವಿವರ ಒದಗಿಸಬೇಕಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾರ್ಯಕ್ರಮಕ್ಕೆ ಸಂಘಟಕರು ಪೂರ್ವಾನುಮತಿ ಪಡೆದಿರಲಿಲ್ಲ ಎಂದು ಆಯೋಗದ ವರದಿಯಲ್ಲಿದೆ.
ಅನಧಿಕೃತ ಕಾರ್ಯಕ್ರಮ ಮತ್ತು ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದೆ ತರಾತುರಿ ಯಲ್ಲಿ ಆಯೋಜಿಸಲಾಗಿದೆ ಎಂದು ಗೊತ್ತಿದ್ದರೂ ಪೊಲೀಸ್ ಕಮಿಷನರ್ ಬಿ.ದಯಾನಂದ, ಹೆಚ್ಚುವರಿ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ವಿಕಾಸ್, ಕೇಂದ್ರ ವಿಭಾಗದ ಡಿಸಿಪಿ ಶೇಖರ್, ಎಸಿಪಿ ಸಿ. ಬಾಲಕೃಷ್ಣ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎ.ಕೆ. ಗಿರೀಶ್ ಅವರು ಕಾರ್ಯಕ್ರಮ ನಡೆಯುವುದನ್ನು ತಡೆಯಲು ವಿಫಲರಾದರು. ದಯಾನಂದ್ ಅವರ ಆದೇಶದ ಮೇರೆಗೆ ಪೊಲೀಸ್ ಅಧಿಕಾರಿಗಳು ಬಂದೋಬಸ್ತ್ ಕೆಲಸ ಮಾಡುತ್ತಿದ್ದರು. ಸಂಘಟಕರು ಕಾರ್ಯಕ್ರಮದ ಸಿದ್ಧತೆಯಲ್ಲಿದ್ದಾಗಲೇ ಅವರ ಜೊತೆ ದಯಾನಂದ್ ಶಾಮೀಲಾಗಿದ್ದರು ಎಂದು ವರದಿಯಲ್ಲಿದೆ.
ಆರ್‌ಸಿಬಿ ತನ್ನ ‘ಎಕ್ಸ್’ ಖಾತೆಯಲ್ಲಿ ಬೆಳಿಗ್ಗೆ 7:01 ಮತ್ತು 8 ಗಂಟೆಗೆ ಮಾಡಿದ ಎರಡು ಪೋಸ್ಟ್‌ಗಳ ಕಾರಣಕ್ಕೆ ಸ್ಥಳದಲ್ಲಿ ಭಾರಿ ಜನಸಮೂಹ ಜಮಾಯಿಸಿತ್ತು. ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿಸಲಾಗಿದ್ದರೂ ಕ್ರೀಡಾಂಗಣದಲ್ಲಿ ಜನಸಂದಣಿ ಹೆಚ್ಚಿದ ನಂತರವೂ ಒಳಗೆ ಪ್ರವೇಶಿಸುವ ವಿಧಾನದ ವಿವರಗಳನ್ನು ನಿಗದಿಪಡಿಸಿರಲಿಲ್ಲ. ಭದ್ರತೆಗೆ ಅಗತ್ಯ ಸಂಖ್ಯೆಯಷ್ಟು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿರಲಿಲ್ಲ. ಹೀಗಾಗಿ, ತುರ್ತುಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗಿಲ್ಲ. ಬಂದೋಬಸ್ತ್‌ಗಾಗಿ ನಿಯೋಜಿಸಿದ್ದ 515 ಪುರುಷ ಸಿಬ್ಬಂದಿ ಮತ್ತು ಅಧಿಕಾರಿಗಳ ಪೈಕಿ ಕೇವಲ 79 ಮಂದಿಯನ್ನು ಗೇಟ್‌ಗಳ ಹೊರಗೆ ಜನಸಂದಣಿ ನಿಯಂತ್ರಿಸಲು ನಿಯೋಜಿಸಲಾಗಿತ್ತು. ಬಿಕ್ಕಟ್ಟಿನ ಸಂದರ್ಭದಲ್ಲಿ ಅವರು ಕೂಡಾ ಸ್ಥಳದಲ್ಲಿ ರಲಿಲ್ಲ ಎಂದೂ ವರದಿಯಲ್ಲಿದೆ.
ಕಾಲ್ತುಳಿತಕ್ಕೆ ಯಾರು ಕಾರಣ?
ಕಾಲ್ತುಳಿತ ಸಂಭವಿಸಲು ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೆಟ್ ಲಿಮಿಟೆಡ್ (ಆರ್‌ಸಿಎಸ್‌ಪಿಎಲ್)/ ಆರ್‌ಸಿಬಿ, ಡಿಎನ್‌ಎ ಎಂಟರ್‌ಟೇನ್‌ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಕಾರಣ.
ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್, ಮಾಜಿ ಕಾರ್ಯದರ್ಶಿ ಎ. ಶಂಕರ್, ಮಾಜಿ ಖಜಾಂಚಿ ಎಫ್.ಎಸ್. ಜಯರಾಮ್, ಆರ್‌ಸಿಎಸ್‌ಪಿಎಲ್ ಉಪಾಧ್ಯಕ್ಷ ರಾಜೇಶ್ ಮೆನನ್, ಡಿಎನ್‌ಎ ಎಂಟರ್‌ಟೇನ್‌ಮೆಂಟ್ ನೆಟ್‌ವರ್ಕ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ. ಟಿ. ವೆಂಕಟ್ ವರ್ಧನ್, ಉಪಾಧ್ಯಕ್ಷ ಸುನಿಲ್ ಮಾಥುರ್, ಪೊಲೀಸ್ ಅಧಿಕಾರಿಗಳಾದ ಬಿ.ದಯಾನಂದ, ವಿಕಾಸ್ ಕುಮಾರ್ ವಿಕಾಸ್, ಶೇಖರ್, ಸಿ. ಬಾಲಕೃಷ್ಣ, ಇನ್‌ಸ್ಪೆಕ್ಟರ್ ಎ.ಕೆ. ಗಿರೀಶ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಯೋಗ ಶಿಫಾರಸು ಮಾಡಿದೆ.
ಆಯೋಗದ ಶಿಫಾರಸುಗಳೇನು?
*ಬೃಹತ್ ಸಂಖ್ಯೆಯಲ್ಲಿ ಜನ ಸೇರಬಹುದಾದ ಕಾರ್ಯಕ್ರಮಗಳನ್ನು ಸೂಕ್ತ ಸ್ಥಳಗಳಲ್ಲಿ ಆಯೋಜಿಸಬೇಕು. ಅಂತಹ ಯಾವುದೇ ಸ್ಥಳ ಅಂತರರಾಷ್ಟ್ರೀಯ ಮಾನದಂಡಗಳಿಗೆ ಪೂರಕವಾಗಿರಬೇಕು
*ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ ಸಂಭಾವ್ಯ ಜನಸಂದಣಿ ಮತ್ತು ಅಪಾಯವನ್ನು ಗಣನೆಗೆ ತೆಗೆದುಕೊಂಡು ಆಂಬುಲೆನ್ಸ್‌ಗಳನ್ನು ನಿಯೋಜಿಸಬೇಕು
*ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿ ಸಹಿತ ಸುಸಜ್ಜಿತವಾದ ಅಪಘಾತ ಚಿಕಿತ್ಸಾ ಕೇಂದ್ರ ಸ್ಥಾಪಿಸಬೇಕು
*ಆರೋಗ್ಯ ಅಧಿಕಾರಿಗಳು ಮತ್ತು ಆಸ್ಪತ್ರೆಗಳ ಜೊತೆ ಸಮನ್ವಯದೊಂದಿಗೆ ತುರ್ತು ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆ ಮಾಡಬೇಕು
ಮೈಕೆಲ್ ಕುನ್ಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.