ಹೈಕೋರ್ಟ್
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಎದುರು ಕಾಲ್ತುಳಿತಕ್ಕೆ ಸಿಲುಕಿ 11 ಜನ ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಮಾಧ್ಯಮಗಳ ವರದಿ ಹಾಗೂ ಹಲವು ವಕೀಲರ ಮನವಿಗಳನ್ನು ಪರಿಗಣಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ನೇತೃತ್ವದ ವಿಭಾಗೀಯ ನ್ಯಾಯಪೀಠ, ಸ್ವಯಂ ಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಗುರುವಾರ ದಾಖಲಿಸಿಕೊಂಡಿತು.
‘ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ‘ನಾವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು ಮಾಡಿಕೊಳ್ಳುವುದನ್ನು ಪ್ರತಿರೋಧಿಸುವುದಿಲ್ಲ. ಹೈಕೋರ್ಟ್ ನೀಡುವ ಎಲ್ಲಾ ಸಲಹೆಗಳನ್ನು ಪಾಲಿಸಲು ಸರ್ಕಾರ ಬದ್ದವಾಗಿದೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
‘ಘಟನೆ ನಡೆದಾಗ ಸ್ಥಳದಲ್ಲಿ ಒಬ್ಬ ಪೊಲೀಸ್ ಕಮಿಷನರ್, ಇಬ್ಬರು ಜಂಟಿ ಪೊಲೀಸ್ ಕಮಿಷನರ್, 7 ಡಿಸಿಪಿ, 7 ಎಸಿಪಿ, 48 ಪೊಲೀಸ್ ಇನ್‌ಸ್ಪೆಕ್ಟರ್, 151 ಪಿಎಸ್‌ಐ, 1,092 ಪೊಲೀಸ್ ಕಾನ್‌ಸ್ಟೆಬಲ್ ಸೇರಿದಂತೆ ಒಟ್ಟು 1,380 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ತಲಾ 25 ಸಿಬ್ಬಂದಿಯನ್ನು ಒಳಗೊಂಡ 13 ಕೆಎಸ್‌ಆರ್‌ಪಿ ತುಕಡಿಯನ್ನೂ ಹೆಚ್ಚುವರಿಯಾಗಿ ನಿಯೋಜಿಸಲಾಗಿತ್ತು. ಒಟ್ಟು 1,643 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು’ ಎಂದು ವಿವರಿಸಿದರು.
ವಕೀಲರ ಮನವಿ: ಪದಾಂಕಿತ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್, ಆರ್.ಹೇಮಂತರಾಜು, ರಂಗನಾಥ ರೆಡ್ಡಿ, ಜಿ.ಆರ್.ಮೋಹನ್ ಮತ್ತು ಲೋಹಿತ್ ಜಿ.ಹನುಮಾಪುರ ಹಾಗೂ ಎಸ್.ನಟರಾಜ ಶರ್ಮಾ ನ್ಯಾಯಪೀಠಕ್ಕೆ ತಮ್ಮ ಮನವಿಗಳನ್ನು ಸಲ್ಲಿಸಿ ಪರಿಗಣಿಸುವಂತೆ ಕೋರಿದರು.
ಅಂತಿಮವಾಗಿ ಘಟನೆಯ ಕುರಿತಾದ ವಸ್ತುಸ್ಥಿತಿ ವರದಿಯನ್ನು ಸಲ್ಲಿಸುವಂತೆ ಅಡ್ವೊಕೇಟ್ ಜನರಲ್ ಅವರಿಗೆ ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 10ಕ್ಕೆ (ಮಂಗಳವಾರ) ಮುಂದೂಡಿತು. ತಮ್ಮನ್ನು ಮಧ್ಯಂತರ ಅರ್ಜಿದಾರರನ್ನಾಗಿ ಪರಿಗಣಿಸಬೇಕು ಎಂಬ ವಕೀಲರ ಮನವಿಗೆ, ವಸ್ತುಸ್ಥಿತಿ ವರದಿ ಬಂದ ಬಳಿಕ ಮನವಿಪರಿಶೀಲಿಸಲಾಗುವುದು ಎಂದು ತಿಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.