ADVERTISEMENT

Bengaluru Stampede | ಠರಾವು ಪ್ರತಿ ಸಲ್ಲಿಕೆಗೆ ಹೈಕೋರ್ಟ್ ನಿರ್ದೇಶನ

ನ್ಯಾ.ಕುನ್ಹ ವರದಿ ರದ್ದು ಕೋರಿದ ಅರ್ಜಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 0:30 IST
Last Updated 29 ಜುಲೈ 2025, 0:30 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ‘ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ (ಆರ್‌ಸಿಬಿ) ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹ ವಿಚಾರಣಾ ಆಯೋಗದ ವರದಿ ಪ್ರಶ್ನಿಸುವ ನಿಟ್ಟಿನಲ್ಲಿ, ನಿಮ್ಮ ಆಡಳಿತ ಮಂಡಳಿ ಕೈಗೊಂಡಿರುವ ಠರಾವು ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ’ ಎಂದು ಹೈಕೋರ್ಟ್ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್‌ ಪರ ವಕೀಲರಿಗೆ ನಿರ್ದೇಶಿಸಿದೆ.

‘ನ್ಯಾಯಮೂರ್ತಿ ಕುನ್ಹ ವರದಿಯನ್ನು ರದ್ದುಗೊಳಿಸಬೇಕು’ ಎಂದು ಕೋರಿ ‘ಮೆಸರ್ಸ್‌ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್‘ ಕಂಪನಿ ನಿರ್ದೇಶಕ  ಸುನಿಲ್‌ ಮ್ಯಾಥ್ಯೂ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಜಯಂತ್‌ ಬ್ಯಾನರ್ಜಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ನ್ಯಾ. ಕುನ್ಹ ವರದಿಯನ್ನು ಈತನಕ ನಮಗೆ ನೀಡಲಾಗಿಲ್ಲ. ಆದರೆ, ವರದಿಯು ಮಾಧ್ಯಮಗಳಲ್ಲಿ ಸೋರಿಕೆಯಾಗುತ್ತಿದ್ದು,  ಕಂಪನಿಯ ನಿರ್ದೇಶಕರು ಮತ್ತು ಅಧಿಕಾರಿಗಳ ಘನತೆಗೆ ಚ್ಯುತಿಯಾಗುವ ರೀತಿಯಲ್ಲಿ ನಿರಂತರವಾಗಿ ವರದಿ ಪ್ರಕಟವಾಗುತ್ತಿವೆ. ಆದ್ದರಿಂದ, ಅರ್ಜಿಯನ್ನು ತುರ್ತು ವಿಚಾರಣೆಗೆ ಒಳಪಡಿಸಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಈ ರಿಟ್ ಅರ್ಜಿ ಸಲ್ಲಿಸಲು ಅನುಮತಿ ನೀಡಿ ಕಂಪನಿಯ ಆಡಳಿತ ಮಂಡಳಿ ನಿರ್ಣಯ ಕೈಗೊಂಡಿರುವ ದಾಖಲೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಬೇಕು. ನಿರ್ಣಯದ ಪ್ರತಿ ಇಲ್ಲದೇ ವಿಚಾರಣೆ ಮುಂದುವರಿಸಲಾಗದು’ ಎಂಬ ತಿಳಿಸಿತು. ‘ಈ ಕುರಿತ ದಾಖಲೆಯನ್ನು ಸಲ್ಲಿಸಿ’ ಎಂದು ಸೂಚಿಸಿ ವಿಚಾರಣೆಯನ್ನು ಮಂಗಳವಾರಕ್ಕೆ (ಜುಲೈ 29) ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.